Site icon Vistara News

Hubballi News | ಪುಷ್ಪಾ ಮೃತದೇಹಕ್ಕೆ ಎರಡೂ ಕುಟುಂಬಸ್ಥರ ಪಟ್ಟು; ಶವಾಗಾರದ ಎದುರು ಪೊಲೀಸ್‌ ಬಂದೋಬಸ್ತ್‌

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯ ದೀಪಕ್‌ ಹತ್ಯೆ ಬೆನ್ನಲ್ಲೇ, ಪತ್ನಿ ಪುಷ್ಪಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈಗ ಪುಷ್ಪಾ ಮೃತದೇಹಕ್ಕಾಗಿ ಆಕೆಯ ಪತಿ ಕುಟುಂಬಸ್ಥರು ಹಾಗೂ ತವರು ಮನೆಯವರು ಪಟ್ಟು ಹಿಡಿದಿದ್ದು, ಶವಾಗಾರದ ಮುಂದೆ ಹೈಡ್ರಾಮಾ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ನವನಗರದ (Hubballi News) ಸಂಬಂಧಿಕರ ಮನೆಯಲ್ಲಿ ಮನನೊಂದು ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಪುಷ್ಪಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಮೃತದೇಹಕ್ಕಾಗಿ ಕುಟುಂಬಸ್ಥರಲ್ಲಿ ಪೈಪೋಟಿ ಶುರುವಾಗಿದೆ.

ತಾಲೂಕಿನ ರಾಯನಾಳ ಬಳಿ ಜುಲೈ 4 ರಂದು ದೀಪಕ್ ಪಟದಾರಿ ಹತ್ಯೆಯಾಗಿತ್ತು. ಪತಿಯ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವಾಗಲೇ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪುಷ್ಪಾ ಶವವನ್ನು ನೀಡುವಂತೆ ಎರಡೂ ಕುಟುಂಬಗಳು ಪಟ್ಟು ಹಿಡಿದಿವೆ. ಪುಷ್ಪಾ ತಂದೆ ಬಸಪ್ಪ ಮತ್ತು ಪತಿಯ ಮನೆಯವರ ನಡುವೆ ಪೈಪೋಟಿ ಎದ್ದಿದೆ.

ಇತ್ತ ಪತಿ ಮನೆಯವರಿಗೆ ಶವ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಇನ್ನೊಂದೆಡೆ ದೀಪಕ್‌ನನ್ನು ಕೊಲೆ ಮಾಡಿದವರಿಗೆ ಪುಷ್ಪಾ ಶವ ನೀಡಬಾರದು ಎಂದು ಆರೋಪಿಸಿರುವ ದೀಪಕ್ ಸಹೋದರ ಸಂಜಯ ಪಟದಾರಿ ಪಟ್ಟು ಹಿಡಿದಿದ್ದಾರೆ. ಮತ್ತೊಂದು ಕಡೆ ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಪುಷ್ಪಾ ತಂದೆ ಆರೋಪಿಸಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್‌ನ ಶವಾಗಾರದಲ್ಲಿರುವ ಪುಷ್ಪಾ ಮೃತದೇಹ ಇದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಹಸ್ತಾಂತರ ಮಾಡಲಿದ್ದಾರೆ. ಸ್ಥಳದಲ್ಲಿ ಗದ್ದಲ ನಡೆಯದಂತೆ ಶವಾಗಾರದ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಘಟನೆ ಏನು?

ತಾಲೂಕಿನ ರಾಯನಾಳ ಬಳಿ ಜುಲೈ 4 ರಂದು ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಹತ್ಯೆಯಾಗಿತ್ತು. ದೀಪಕ್‌ ಮತ್ತು ಪುಷ್ಪಾ ಪ್ರೀತಿಸಿ ವಿವಾಹವಾಗಿದ್ದರು. ಇದರಿಂದ ತಮ್ಮ ಕುಟುಂಬದವರೇ ದೀಪಕ್ ಕೊಲೆ ಮಾಡಿರಬಹುದು ಎಂದು ಆರೋಪಿಸಿ ಪುಷ್ಪಾ, ಗಂಡನ ಕಡೆಯವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪತಿಯ ಹತ್ಯೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದರು. ಈ ಸಂಬಂಧ ಪುಷ್ಪಾ ಪ್ರತಿದಿನ ಪೊಲೀಸ್‌ ಠಾಣೆಗೆ ಅಲೆದಾಡುತ್ತಿದ್ದರು. ಕಳೆದ ವಾರವೇ ದೀಪಕ್ ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಹುಬ್ಬಳ್ಳಿಯ ಸಂಬಂಧಿಯೊಬ್ಬರ ಮನೆಯಲ್ಲಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | ಪತಿಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆ ಮನನೊಂದು ಆತ್ಮಹತ್ಯೆ

Exit mobile version