Site icon Vistara News

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಗೆ ಒತ್ತಡ: ಪಾಲಿಕೆಗೇ ಮೂರ್ತಿ ತಂದು ಮನವಿ

hubballi Ganeshothsava

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಹಿಂದು ಸಂಘಟನೆಗಳು ಬಗೆ ಬಗೆಯಲ್ಲಿ ಮಹಾನಗರ ಪಾಲಿಕೆಯ ಮೇಲೆ ಒತ್ತಡ ಹೇರುತ್ತಿವೆ. ಗುರುವಾರವಂತೂ ಒಂದು ತಂಡ ಗಣೇಶನ ಮೂರ್ತಿಯನ್ನೇ ತಂದು ಮನವಿ ಮಾಡಿದೆ.

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಕಂದಾಯ ಭೂಮಿ ಎಂದು ಘೋಷಿಸಿದ ಬಳಿಕ ಅದು ಚಾಮರಾಜಪೇಟೆ ಆಟವಾಗಿದೆ. ಇದು ಸಾರ್ವಜನಿಕ ಸೊತ್ತೆಂದು ಘೋಷಣೆಯಾದ ಬೆನ್ನಿಗೇ ಇಲ್ಲಿ ಗಣೇಶೋತ್ಸವ ಆಚರಣೆಯ ಕೂಗೆದ್ದಿದೆ. ಇದೇ ಮಾದರಿಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅವಕಾಶ ನೀಡಬೇಕು ಎಂದು ಕೋರಲಾಗಿದೆ.

ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೋರಿ ಆಗಸ್ಟ್‌ ೧೧ರಂದು ಮೊದಲ ಮನವಿ ಸಲ್ಲಿಸಲಾಗಿತ್ತು. ಆದರೆ, ಇದರ ಬಗ್ಗೆ ಮೇಯರ್‌ ಇಲ್ಲವೇ ಕಮೀಷನರ್‌ ಯಾವುದೇ ಪ್ರತ್ಯುತ್ತರ ನೀಡದೆ ಇದ್ದುದರಿಂದ ಎರಡು ದಿನದ ಹಿಂದೆ
ಗಜಾನನ ಉತ್ಸವ ಸಮಿತಿ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ರಾಣಿ ಚೆನ್ನಮ್ಮ ಗಜಾನನೋತ್ಸವ ಸಮಿತಿ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ನೆನಪಿನೋಲೆ ನೀಡಲಾಗಿತ್ತು.

ಇದೀಗ ಗುರುವಾರ ಮತ್ತೊಂದು ಸುತ್ತಿನ ಪ್ರತಿಭಟನೆ ನಡೆದಿದೆ. ಶ್ರೀ ಗಜಾನನ ಮಹಾ ಮಂಡಳದಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆದಿದ್ದು, ಮುಖಂಡರು ಗಣೇಶ ಮೂರ್ತಿಯನ್ನೇ ಪಾಲಿಕೆಗೆ ತಂದಿದ್ದರು.

ʻʻನೀವಾದರೂ ಪ್ರತಿಷ್ಠಾಪನೆ ಮಾಡಿ, ಇಲ್ಲವೆ ನಮಗಾದರೂ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಿʼʼ ಎಂದು ಅವರು ಆಗ್ರಹಿಸಿದರು. ʻʻಮೂರು ದಿನದೊಳಗೆ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ಈದ್ಗಾ ಮೈದಾನದಲ್ಲಿ ನಾವೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆʼʼ ಎಂದು ಎಚ್ಚರಿಕೆ ನೀಡಿದ್ದಾರೆ.

೨೦೧೦ರಲ್ಲೇ ಸುಪ್ರೀಂಕೋರ್ಟ್‌ ಹೇಳಿದೆ
ಸುಪ್ರೀಂಕೋರ್ಟ್‌ ೨೦೧೦ರಲ್ಲೇ ಈದ್ಗಾ ಮೈದಾನದ ವಿಚಾರದಲ್ಲಿ ತೀರ್ಪನ್ನು ನೀಡಿದೆ. ಇದರಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರು ಸಾಮೂಹಿಕ ನಮಾಜ್‌ ಮಾಡಬಹುದು. ಉಳಿದ ಅವಧಿಯಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ಬಳಸಬಹುದು ಎಂದು ಅದು ಹೇಳಿತ್ತು ಎಂದು ಸಂಘಟಕರು ಹೇಳಿದ್ದಾರೆ. ಅಂದಿನಿಂದಲೇ ಪದೇಪದೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಆದರೆ, ಆಯುಕ್ತರು ಅಷ್ಟೇನೂ ಸ್ಪಂದಿಸಿಲ್ಲ. ಯಾವ ಕಾರಣ ಎನ್ನುವುದು ಗೊತ್ತಿಲ್ಲ ಎಂದರು.

ಇದನ್ನೂ ಓದಿ| ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೋರಿಕೆ, ಕೊಡದಿದ್ದರೆ ಹೋರಾಟದ ಎಚ್ಚರಿಕೆ

Exit mobile version