ಹುಬ್ಬಳ್ಳಿ: ಕಿಮ್ಸ್‌ನಲ್ಲಿ ನಡೆದಿದ್ದ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ತಾಯಿಯ ಕಳ್ಳಾಟವನ್ನು ಬಯಲಿಗೆ ತಂದಿದ್ದಾರೆ. ಕಿಮ್ಸ್‌ನಲ್ಲಿ ಮಗುವಿನ ಕಳ್ಳತನವೇ ನಡೆದಿಲ್ಲ, ಈ ಘಟನೆಯಲ್ಲಿ ಹೆತ್ತಮ್ಮನೇ ವಿಲನ್ ಎನ್ನುವ ವಿಚಾರವನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ಸೋಮವಾರ (ಜೂನ್ 13) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನವಾಗಿದೆ ಎನ್ನುವ ವಿಚಾರ ಜನರಲ್ಲಿ ಆತಂಕ ಮೂಡಿಸಿತ್ತು. ಕುಂದಗೋಳದ ನೆಹರು ನಗರದಿಂದ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಸಲ್ಮಾ ಶೇಖ್ ಎನ್ನುವವರು ತಮ್ಮ ಮಗು ಕಳ್ಳತನವಾಗಿದೆ ಎಂದು ದೂರಿದ್ದರು. 40 ದಿನಗಳ ಕೂಸನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋಗಿದ್ದಾನೆಂದು ವಿದ್ಯಾನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಹೀಗಾಗಿ ಕಿಮ್ಸ್ ಸೆಕ್ಯುರಿಟಿ ಮತ್ತು ಪೊಲೀಸರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆಗೆ ಇಳಿದಿದ್ದರು. ಆದರೆ ಮಾರನೆಯ ದಿನ ಮಂಗಳವಾರ ಮುಂಜಾನೆ ಕಿಮ್ಸ್ ಹಿಂಭಾಗದಲ್ಲಿ ಮಗು ದಿಢೀರನೆ ಪತ್ತೆಯಾಗಿತ್ತು. ಕಳ್ಳರು ಪೊಲೀಸರಿಗೆ ಬೆದರಿ ಮಗುವನ್ನು ಅಲ್ಲಿ ಬಿಟ್ಟುಹೋಗಿದ್ದಾರೆ ಎನ್ನುವ ಚರ್ಚೆ ಶುರುವಾಗಿತ್ತು. ಹೀಗಾಗಿ ಪ್ರಕರಣ ಸುಖಾಂತ್ಯವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಇದನ್ನೂ ಓದಿ | ಕ್ರೂಸರ್ ಮರಕ್ಕೆ ಡಿಕ್ಕಿ: ಮದುವೆ ನಿಶ್ಚಿತಾರ್ಥ ಮುಗಿಸಿ ಹೊರಟ 7 ಮಂದಿ ದುರ್ಮರಣ
ಇಷ್ಟರಲ್ಲಾಗಲೇ ಪೊಲೀಸರು ಕಿಮ್ಸ್ ಆಸ್ಪತ್ರೆಯ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದರು. ಅದರಲ್ಲಿ ಮಗುವಿನ ಕಳ್ಳನ ಸುಳಿವು ಇರಲಿಲ್ಲ. ಸಲ್ಮಾ ತನ್ನ ಮಗುವನ್ನು ಶೌಚಾಲಯದ ಬಳಿ ತೆಗೆದುಕೊಂಡು ಹೋಗುವುದು, ನಂತರ ಕೈಯಲ್ಲಿ ಟವೆಲ್ ಹಿಡಿದು ವಾಪಸ್ ಬರುವ ದೃಶ್ಯಗಳು ಮಾತ್ರ ಕಂಡು ಬಂದಿದ್ದವು. ಹೀಗಾಗಿ ಸಂಶಯಗೊಂಡ ಪೊಲೀಸರು ಸಲ್ಮಾಳನ್ನು ವಿಚಾರಣೆ ಒಳಪಡಿಸಿದ್ದರು.
ಪೊಲೀಸ್ ಪ್ರಶ್ನೆಗೆ ತಬ್ಬಿಬ್ಬು!
ಈ ವೇಳೆ ಬೆದರಿದಂತೆ ಕಂಡುಬಂದ ಸಲ್ಮಾ ಆಘಾತಕಾರಿ ವಿಷಯ ಬಾಯ್ಬಿಟ್ಟಿದ್ದಾಳೆ. ತನ್ನ ಮಗುವಿಗೆ ತಾನೇ ಪ್ರಾಣಾಪಾಯ ತಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಮಗುವಿನ ತಲೆ ದೊಡ್ಡದಿದೆ, ಆರೋಗ್ಯ ಸರಿ ಇಲ್ಲ. ಹೀಗಾಗಿ ಶೌಚಾಲಯದ ಕಿಟಕಿಯಿಂದ ಮಗುವನ್ನು ಹೊರಗೆ ಎಸೆದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮಗು ಹುಲ್ಲಿನ ಮೇಲೆ ಬಿದ್ದು ಬಚಾವಾಗಿರಬೇಕು ಎಂದು ಕಥೆ ಕಟ್ಟಿದ್ದಾಳೆ.
ಆದರೆ ಪೊಲೀಸರಿಗೆ ಮತ್ತೆ ಹಲವು ಪ್ರಶ್ನೆಗಳು ಕಾಡಲು ಆರಂಭಿಸಿವೆ. ಮಗುವನ್ಮು ಎಸೆದಿದ್ದರೆ ಅವತ್ತೇ ಮಗು ಪತ್ತೆಯಾಗಬೇಕಿತ್ತು. ಆದರೆ ಮಾರನೆ ದಿನ ಮಗು ಅಲ್ಲಿ ಹೇಗೆ ಬಂತು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಹೊರಗೆ ಎಸೆದಿದ್ದ ಮಗುವನ್ನು ಯಾರು ತೆಗೆದುಕೊಂಡು ಹೋಗಿದ್ದರು ಎಂಬ ಪ್ರಶ್ನೆ ಕಾಡಿದೆ. ತನಿಖೆ ಆರಂಭವಾಗುತ್ತಿದ್ದಂತೆ ಕಳ್ಳರು ಮಗುವನ್ನು ಮರಳಿ ತಂದು ಅಲ್ಲೇ ಇರಿಸಿ ಹೋದರಾ ಎನ್ನುವ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
ಸದ್ಯಕ್ಕೆ ಮಗು ಹಾಗೂ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ಹುಬ್ಬಳ್ಳಿಯ ಕಿಮ್ಸ್‌ನಲ್ಲೆ ಮಗು ಪ್ರತ್ಯಕ್ಷ: ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್