ಹುಬ್ಬಳ್ಳಿ : ಬಸವರಾಜ ಹೊರಟ್ಟಿ ಬಿಜೆಪಿ ಅಧಿಕೃತ ಸೇರ್ಪಡೆ ಬಳಿಕ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದರು. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಬಸವರಾಜ ಹೊರಟ್ಟಿ ಅವರನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಕುರಿತು ಮಾತನಾಡಿದ ಜಗದೀಶ್ ಶೆಟ್ಟರ್, ಹೊರಟ್ಟಿ ಬಿಜೆಪಿ ಸೇರ್ಪಡೆ ಆಗಿದ್ದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಜನತಾ ಪರಿವಾರದ ಸಾಕಷ್ಟು ಜನ ಈ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದಾರೆ. 2008ರಲ್ಲಿ ಹೊರಟ್ಟಿಯವರಿಗೆ ಯಡಿಯೂರಪ್ಪನವರು ಬಿಜೆಪಿಗೆ ಆಹ್ವಾನ ನೀಡಿದ್ದರು. ಆದರೆ ಜೆಡಿಎಸ್ ಜತೆಗೆ ಒಳ್ಳೆಯ ಸಂಬಂಧ ಇರುವುದರಿಂದ ಅವಾಗ ಬರಲಿಲ್ಲ. ಆದರೂ ನಮ್ಮ ಜತೆಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವಿಚಾರವಾಗಿ ಪಕ್ಷಭೇದ ಮರೆತು ನಮಗೆ ಬೆಂಬಲ ನೀಡಿದ್ದರು. ಹೊರಟ್ಟಿಯವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ನಮ್ಮ ಪಕ್ಷಕ್ಕೆ ಬಂದಿದ್ದರಿಂದ ನಮಗೆ ಶಕ್ತಿ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ | BJPಗೆ ಹೊರಟ್ಟಿ ಅಧಿಕೃತ ಸೇರ್ಪಡೆ: ದೇವೇಗೌಡರಿಗೆ ಮುಖ ತೋರಿಸೋ ಧೈರ್ಯವಿಲ್ಲವೆಂದ ನಾಯಕ
ನಂತರ ಮಾತನಾಡಿದ ಹೊರಟ್ಟಿ, ಈ ತಿಂಗಳ 26ರಂದು ಕಾರ್ಯಕರ್ತರ ಜತೆಗೆ ತೆರಳಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿಯ ಅನೇಕ ನಾಯಕರು ಪಕ್ಷ ಸೇರುವಂತೆ ಒತ್ತಾಯಿಸಿದರು. ಪಕ್ಷೇತರವಾಗಿ ಚುನಾವಣೆ ಎದುರಿಸಬೇಕು ಎಂದು ಕೆಲವರು ಹೇಳಿದ್ದರು. ನಮ್ಮ ಮತದಾರರ ಒಪ್ಪಿಗೆ ಪಡೆದು ಬಿಜೆಪಿ ಸೇರಿದ್ದೇನೆ. ಸಭಾಪತಿಯಾಗಿ, ಶಾಸಕನಾಗಿ ಮುಂದುವರೆಯಬಹುದಿತ್ತು. ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಭಾಪತಿಯೋರ್ವ ರಾಜೀನಾಮೆ ನೀಡಿದ್ದಾನೆ. ರಾಮಕೃಷ್ಣ ಹೆಗಡೆ ಇರುವವರೆಗೂ ಅವರ ಜತೆಗೆ ಇದ್ದೆ. ಹಲವು ರಾಜಕೀಯ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದೇನೆ. ಎಲ್ಲೇ ಇದ್ದರೂ ಕಳಂಕ ರಹಿತನಾಗಿ ಇರುತ್ತೇನೆ ಮತ್ತು ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸೇರಿ ಸ್ಥಳೀಯ ನಾಯಕರು ಭಾಗಿಯಾಗಿದ್ದರು.
ಇದನ್ನೂ ಓದಿ | ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ: ಬಿಜೆಪಿ ಸೇರ್ಪಡೆ ಹಾದಿ ಸುಗಮ