ಹುಬ್ಬಳ್ಳಿ: ಅರ್ಕಾವತಿ ಬಡಾವಣೆಯಲ್ಲಿನ ಅಕ್ರಮದ (Arkavathi Scam) ಕುರಿತು ಕೆಂಪಣ್ಣ ಆಯೋಗವು ಸಂಪೂರ್ಣ ತನಿಖೆ ನಡೆಸಿ ವರದಿಯನ್ನೂ ಸಲ್ಲಿಸಿದ್ದು, ಇನ್ನೇನಿದ್ದರೂ ಕ್ರಮ ಕಗೊಳ್ಳುವ ನಿರ್ಧಾರ ಆಗಬೇಕಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಅರ್ಕಾವತಿ ಹಗರಣವನ್ನು ಸಿಬಿಐ ತನಿಖೆಗೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಅಲ್ಲಗಳೆದರು. ಕೆಂಪಣ್ಣ ಆಯೋಗ ಈಗಾಗಲೆ ತನಿಖೆ ನಡೆಸಿ ವರದಿ ನೀಡಿದೆ. ಮುಂದಿನ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಕುರಿತು ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ, ಸಿದ್ದರಾಮಯ್ಯ ಅವರು ತಮ್ಮ ಸುಳ್ಳಿನ ಸುಳಿಯಲ್ಲಿ ತಾವೇ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಸುಳ್ಳನ್ನು ಪದೇಪದೆ ಹೇಳಿ ಸತ್ಯವಾಗಿಸಬಹುದು ಎಂದು ಅವರು ತಿಳಿದಿದ್ದರು. ಆದರೆ ಎಷ್ಟೇ ಬಾರಿ ಹೇಳಿದರೂ ಸತ್ಯ ಸತ್ಯವೇ, ಸುಳ್ಳು ಸುಳ್ಳೆ. ಅತಿಯಾದ ಸುಳ್ಳು ಹೇಳಿದ ಸಿದ್ದರಾಮಯ್ಯ ಈಗ ಅದೇ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎಂದರು.
ಸೋಮವಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿ, ಮೊದಲು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಹಾಗೂ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗಾವಿಯಲ್ಲಿ ರೈಲ್ವೆ ಯೋಜನೆಗಳಿಗೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಎರಡೂ ಕಡೆ ಜನರು ನಿರೀಕ್ಷೆ ಮಾಡುತ್ತಿದ್ದಾರೆ, ಅಭೂತಪೂರ್ವ ಸ್ಪಂದನೆ ಸಿಗಲಿದೆ.
ಮಾರ್ಚ್ 11ರಂದು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆ ನಂತರ ಧಾರವಾಡ ಐಐಟಿ ಉದ್ಘಾಟನೆ ಮಾಡುವ ಕಾರ್ಯಕ್ರಮ ನಿಗದಿಯಾಗಿದೆ ಎಂದರು.
ಪಕ್ಷದ ಚುನಾವಣೆ ತಯಾರಿ ಕರಿತು ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಅತ್ಯಂತ ಬದ್ಧತೆಯಿಂದ ಕೆಲಸ ಮಾಡುವ ಕಾರ್ಯಕರ್ತರು ಹಾಗೂ ನಾಯಕರಿದ್ದಾರೆ. ಈ ಬಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಮನ್ಸೂಖ್ ಮಂಡಾವಿಯಾ ಅವರು ಇಲ್ಲೇ ಇದ್ದು ಮಾರ್ಗದರ್ಶನ ಮಾಡಲಿದ್ದಾರೆ. ಅಮಿತ್ ಶಾ ಅವರು ಕಳೆದ ಚುನಾವಣೆಯಲ್ಲೂ ಮಾರ್ಗದರ್ಶನ ಮಾಡಿದ್ದರು, ಈ ಬಾರಿಯೂ ಮಾಡಲಿದ್ದಾರೆ ಎಂದರು.
ಇದನ್ನೂ ಓದಿ: ಅರ್ಕಾವತಿ ಬಡಾವಣೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ: ಬಿಡಿಎ ಆಯುಕ್ತ ಕುಮಾರ್ ನಾಯಕ್
ಕೆಲವು ಮಠಾಧೀಶರು ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿ, ಇದುವರೆಗೂ ಯಾವುದೇ ಮಠಾಧೀಶರು ತಮ್ಮ ಜತೆಗೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರಿ ನೌಕರರ ಪ್ರತಿಭಟನೆ ಕುರಿತು ಮಾತನಾಡಿ, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದರು.
ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಕಡೆಗಣನೆ ಕುರಿತು ಮಾತನಾಡಿ, ಬಿಜೆಪಿ ಕಟ್ಟಿದವರು, ಮುಂದೆ ಬಲಪಡಿಸಿದವರು ಯಡಿಯೂರಪ್ಪ ಅವರು. ಹಾಗಾಗಿ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷವನ್ನು ಮುನ್ನಡೆಸುವುದಾಗಿ ಸ್ವತಃ ಅವರೇ ಹೇಳಿದ್ದಾರಲ್ಲ ಎಂದರು.