ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ನಡುವೆ ಗ್ಯಾಂಗ್ ವಾರ್ (Gang War) ನಡೆದಿದ್ದು, ಎರಡು ಗ್ಯಾಂಗ್‌ಗಳಿಂದ ದೂರು ಪ್ರತಿದೂರು ದಾಖಲಾಗಿದೆ. ಗನ್ ತೋರಿಸಿ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Assault case) ದಾಖಲಾಗಿದೆ.
ಸುಂದರ್, ಪಿಲೋಮಿನ್, ಚಂದ್ರ ಪೌಲ್ ಎಂಬುವವರ ವಿರುದ್ಧ ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿ ಅಭಿಷೇಕ್ ಜಾಧವ್ ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಶಾಮ್ ಜಾಧವ ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಅವರ ಪುತ್ರ ಅಭಿಷೇಕ್ ಜಾಧವ್‌ಗೆ ಈ ಆರೋಪಿಗಳು ಹುಬ್ಬಳ್ಳಿಗೆ ನಾವೇ ಡಾನ್‌ಗಳು ಎಂದು ಧಮ್ಕಿ ಹಾಕಿದ್ದರಂತೆ.
ಇತ್ತ ಸುಂದರ ಪೌಲ್ ಆ್ಯಂಡ್ ಟೀಮ್ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಅಭಿಷೇಕ್ ಜಾಧವ್ ಗ್ಯಾಂಗ್‌ನವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಹಲವು ಕ್ರಿಮಿನಲ್ ಆರೋಪ ಹೊತ್ತಿರುವ ಈ ಎರಡು ಗ್ಯಾಂಗ್‌ಗಳ ನಡುವೆ ಕಲಹ ಶುರುವಾಗಿದೆ. ಈ ಮಧ್ಯೆ ಪರಸ್ಪರ ಅವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು
ಕ್ಷುಲ್ಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮಾರಾಮಾರಿ
ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಸೆಟ್ಲ್‌ಮೆಂಟ್ ಏರಿಯಾದಲ್ಲಿ ಪ್ರಜ್ವಲ ಬೆಳ್ಳಿಗಟ್ಟಿ, ವಿಕಾಸ ಭಜಂತ್ರಿ ಎಂಬುವವರ ಸ್ವಯಂ ಜಾಧವ, ಪ್ರಜ್ವಲ ಜಾಧವ ಎಂಬುವವರು ಗುಂಪು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.
ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಹೊಂದಾಣಿಕೆಗೆ ಅವಕಾಶ ಕೊಟ್ಟು ಪೊಲೀಸರು ಸುಮ್ಮನಾಗಿದ್ದಾರೆ ಎಂದು ಹಲ್ಲೆಗೊಳಗಾದ ಗುಂಪು ಆರೋಪಿಸಿವೆ. ಇನ್ನೂ ಹಲ್ಲೆಗೊಳಗಾದವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಗಾಯಾಳುಗಳ MLC ಮಾಡಿ ಸುಮ್ಮನಾಗಿದ್ದಾರೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರಿನಲ್ಲಿ ಗ್ರಾಪಂ ಸದಸ್ಯನ ಮೇಲೆ ಚಪ್ಪಲಿ ಎಸೆತ
ಮದುವೆ ಸಮಾರಂಭಕ್ಕೆ ಹೋಗಿದ್ದಾಗ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ. ಹಲ್ಲೆ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ಘಟನೆ ನಡೆದಿದೆ.
ತುರುವೇಕೆರೆ ತಾಲೂಕಿನ ತಂಡಗ ಗ್ರಾಮ ಪಂಚಾಯತಿಯ ಸದಸ್ಯ ಮೋಹನ್ ಮೇಲೆ ಉಪಧ್ಯಾಕ್ಷ ಚನ್ನಬಸವೇಗೌಡನಿಂದ ಹಲ್ಲೆ ನಡೆದಿದೆ. ತಂಡಗ ಗ್ರಾಮ ಪಂಚಾಯತಿ ಅಧ್ಯಕ್ಷನ ಅವಿಶ್ವಾಸ ಮಂಡನೆಗೆ ಸಹಿ ಹಾಕಲು ಮೋಹನ್ ನಿರಾಕರಿಸಿದ್ದರು ಎನ್ನಲಾಗಿದೆ.
ಹೀಗಾಗಿ ಸಹಿ ಹಾಕುವಂತೆ ಮೋಹನ್‌ಗೆ ಚನ್ನಬಸವೇಗೌಡ ಒತ್ತಾಯಿಸಿದ್ದರು. ಸಹಿ ಹಾಕಲು ಒಪ್ಪದಿದ್ದಾಗ ಚನ್ನಬಸವೇಗೌಡ ಸಿಟ್ಟಿನಲ್ಲಿ ಮುಖಕ್ಕೆ ಹೊಡೆದು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಸದ್ಯ ಘಟನೆ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ