Site icon Vistara News

Child death : ಒಮ್ಮೆಗೇ ಐದು ಲಸಿಕೆ ಪಡೆದ ಮಗು ದಿಢೀರ್‌ ಸಾವು; ಮುಗಿಲು ಮುಟ್ಟಿದ ಆಕ್ರಂದನ

Child death in hubballi after Vaccination

ಹುಬ್ಬಳ್ಳಿ: ಒಂದೇ ದಿನ ಐದು ಲಸಿಕೆ (Five Vaccines) ಪಡೆದ ಎರಡು ವರ್ಷದ ಮಗುವೊಂದು (Two year old child dead) ದಿಢೀರ್‌ ಆಗಿ ಮೃತಪಟ್ಟಿದೆ. ಇದು ಓವರ್‌ಡೋಸ್‌ (Vaccine Overdose alleged) ಆದ ಪರಿಣಾಮವಾಗಿ ಸಂಭವಿಸಿದ ಸಾವು (Child death) ಎಂದು ಮನೆಯವರು ಆರೋಪ ಮಾಡುತ್ತಿದ್ದರೆ ವೈದ್ಯರು ಆ ರೀತಿ ಆದ ಉದಾಹರಣೆಗಳಿಲ್ಲ ಎನ್ನುತ್ತಿದ್ದಾರೆ.

ಹುಬ್ಬಳ್ಳಿಯ ಉಣಕಲ್‌ನಲ್ಲಿ ಘಟನೆ ನಡೆದಿದ್ದು ಧ್ರುವ ಎನ್ನುವ ಬಾಲಕನೇ ಮೃತಪಟ್ಟ ದುರ್ದೈವಿ. ಡಿಸೆಂಬರ್‌ 20ರಂದು ಲಸಿಕೆ ನೀಡಲಾಗಿದ್ದು, ಡಿಸೆಂಬರ್‌ 21ರಂದು ಏಕಾಏಕಿಯಾಗಿ ಮಗು ಮೃತಪಟ್ಟಿದೆ.

ಧ್ರುವನ ತಂದೆ ತಾಯಿ ಇರುವುದು ಬೇರೆ ಕಡೆ. ಆತ ಉಣಕಲ್‌ನಲ್ಲಿರುವ ಅಜ್ಜಿ ಮನೆಯಲ್ಲಿದ್ದ. ಮಕ್ಕಳಿಗೆ 16ರಿಂದ 24 ತಿಂಗಳ ನಡುವೆ ಐದು ಲಸಿಕೆಗಳನ್ನು ನೀಡುವುದು ರೂಢಿ. ಅದರಲ್ಲಿ ಮೂರು ಇಂಜೆಕ್ಷನ್‌ ಮೂಲಕ ಮತ್ತು ಎರಡನ್ನು ಬಾಯಿ ಮೂಲಕ ನೀಡಲಾಗುತ್ತದೆ. ಡಿಪಿಟಿ, ಎಂಆರ್‌, ಜಪಾನೀಸ್‌ ಎನ್‌ಸೆಫಲೈಟಿಸ್‌ಗೆ ಇಂಜೆಕ್ಷನ್‌ ನೀಡಲಾಗುತ್ತದೆ.

ಮಗುವಿಗೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಸಿಬ್ಬಂದಿ ಲಸಿಕೆ ಕೊಡಿಸುವಂತೆ ಸೂಚಿಸಿದ್ದರು. ಅದರಂತೆ ಡಿಸೆಂಬರ್‌ 28ರಂದು ಮಧ್ಯಾಹ್ನ ಸಾಯಿನಗರದ ಅಂಗನವಾಡಿಯೊಂದರಲ್ಲಿ ಮಗುವಿಗೆ ಲಸಿಕೆ ಹಾಕಿಸಿದ್ದರು ಅಜ್ಜಿ ಮಲ್ಲಮ್ಮ.

ಒಂದೇ ದಿನ ಬೆನ್ನು ಬೆನ್ನಿಗೆ ಐದು ಲಸಿಕೆಗಳನ್ನು ಮಗುವಿಗೆ ನೀಡಲಾಗಿತ್ತು. ಆಶಾ ಕಾರ್ಯಕರ್ತೆಯರು ಇಂಜೆಕ್ಷನ್‌ ನೀಡಿದ್ದರು.

ಲಸಿಕೆ ಹಾಕಿಸಿದ ಬಳಿಕ ಜ್ವರ ಬರಬಹುದು, ಜ್ವರ ಬಂದರೆ ಈ ಮಾತ್ರೆಯನ್ನು ನಾಲ್ಕು ಭಾಗ ಮಾಡಿ ಒಂದು ಭಾಗ ಕೊಡಿ ಎಂದು ಸೂಚಿಸಲಾಗಿತ್ತು. ಅದರಂತೆಯೇ ಮಗುವಿಗೆ ಜ್ವರ ಬಂದಿತ್ತು. ಮನೆಯವರು ಮೂರು ಹೊತ್ತು ಕಾಲುಭಾಗ ಮಾತ್ರೆಯನ್ನು ನೀಡಿದ್ದಾರೆ.

ಲಸಿಕೆ ಹಾಕಿಸಿದ ನಂತರದಲ್ಲಿ ತೀವ್ರ ಜ್ವರ ಹಾಗೂ ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮಗು ಗುರುವಾರ ಬೆಳಗ್ಗೆ ಸುಧಾರಿಸಿತ್ತು ಎನ್ನಲಾಗಿದೆ. ಆದರೆ, ಮಧ್ಯಾಹ್ನ ಒಮ್ಮಿಂದೊಮ್ಮೆಗೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದೆ. ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗು ಪ್ರಜ್ಞೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.

ಇದನ್ನೂ ಓದಿ: Heart Attack: ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 7ನೇ ತರಗತಿ ವಿದ್ಯಾರ್ಥಿನಿ ಬಲಿ

ಹುಬ್ಬಳ್ಳಿಗೆ ಬಂದಾಗ ಮಗು ಮೃತಪಟ್ಟಿತ್ತು

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ್ ಅವರ ಪ್ರಕಾರ ಕಿಮ್ಸ್‌ಗೆ ಬರುವ ಹೊತ್ತಿಗೆ ಮೃತಪಟ್ಟಿತ್ತು. ಆದರೆ, ಸಾವಿಗೆ ಕಾರಣವಾದ ಅಂಶಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕವೇ ತಿಳಿಯಬೇಕಾಗಿದೆ. ಅವರ ಪ್ರಕಾರ, ಈ ರೀತಿ ಲಸಿಕೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಬೇರೆ ಎಲ್ಲೂ ಸಮಸ್ಯೆಗಳಾದ ವರದಿಗಳಿಲ್ಲ. ಒಂದು ವೇಳೆ ಲಸಿಕೆಯಿಂದ ಸಮಸ್ಯೆ ಆಗಿದ್ದರೆ ಅದು ತಕ್ಷಣವೇ ಗೊತ್ತಾಗಬೇಕಾಗಿತ್ತು. ಒಂದು ದಿನದ ಬಳಿಕ ಗೊತ್ತಾಗುವುದಿಲ್ಲ.

ಡಾ. ಅರುಣ್‌ ಕುಮಾರ್‌

ಮುಗಿಲು ಮುಟ್ಟಿದ ಆಕ್ರಂದನ

ಮಗುವನ್ನು ಕಳೆದುಕೊಂಡ ಅಜ್ಜಿಯ ಅಳು ಮುಗಿಲು ಮುಟ್ಟಿತ್ತು. ನಾನು ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಇಲ್ಲಿ ಇಟ್ಟುಕೊಂಡೆ. ಈಗ ನನ್ನ ಮಗಳು ಬಂದು ಕೇಳಿದರೆ ನಾನು ಏನು ಹೇಳಲಿ. ನನ್ನ ಮಗುವನ್ನು ಕೊಂದು ಹಾಕಿದರು ಎಂದು ಬೊಬ್ಬಿಡುತ್ತಿದ್ದ ದೃಶ್ಯ ಕರುಳು ಕಿವುಚುವಂತಿತ್ತು.

Exit mobile version