Site icon Vistara News

Fire Mishap | ಕ್ಯಾಂಡಲ್ ಫ್ಯಾಕ್ಟರಿ ದುರಂತದಲ್ಲಿ ಮೂವರ ಸಾವು: ಮಾಲೀಕ ನಾಪತ್ತೆ

fire maship

ಹುಬ್ಬಳ್ಳಿ: ತಾರಿಹಾಳದ ಸ್ಪಾರ್ಕ್‌ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಶನಿವಾರ ನಡೆದ ಅಗ್ನಿ ಅವಘಡದಲ್ಲಿ (Fire Mishap) ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದ ಎಂಟು ಜನರಲ್ಲಿ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಲಘಟಗಿ ತಾಲೂಕು ಲಿಂಗನಕೊಪ್ಪ ಗ್ರಾಮದ ಮಾಲೇಶ ಬಸಪ್ಪ ಹದನ್ನನವರ (27), ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಿಜಯಲಕ್ಷ್ಮಿ ವೀರಭದ್ರ ಯಚ್ಚಲಗಾರ (34), ಗೌರಮ್ಮ ವೀರಭದ್ರಯ್ಯ ಹಿರೇಮಠ (45 ) ಮೃತಪಟ್ಟವರು.

ತಾರಿಹಾಳದ ಚೆನ್ನಮ್ಮ ಅರಿವಾಳ, ಪ್ರೇಮಾ ಅರಿವಾಳ, ನನ್ನಿಮಾ ಪಡದಾರ, ಮಲ್ಲಿಕ್‌ರೆಹಾನ  ಕೊಪ್ಪದ, ನಿರ್ಮಲಾ ಹುಚ್ಚನವರ ಅವರನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿದ್ದು, ಅನಾಹುತಕ್ಕೆ ಕಾರಣವಾದ ಫ್ಯಾಕ್ಟರಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಾಲಪ್ಪ ಆಚಾರ್, ಪ್ರಕರಣದಲ್ಲಿ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.  

ಇದನ್ನೂ ಓದಿ | Fire mishap | ಹುಬ್ಬಳ್ಳಿ ಸ್ಪಾರ್ಕ್ ಕ್ಯಾಂಡಲ್ ಘಟಕದಲ್ಲಿ ಬೆಂಕಿ; ಹೊತ್ತಿ ಉರಿದ ಕಾರ್ಮಿಕ ಮಹಿಳೆ

ಈ ದುರ್ಘಟನೆ ನಡೆಯಬಾರದಿತ್ತು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಉಳಿದವರಿಗೆ‌ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನೂನುಬಾಹಿರವಾಗಿ ಕಾರ್ಖಾನೆ ನಡೆಸುತ್ತಿದ್ದಾರೆಂಬ ಮಾಹಿತಿ ಇದ್ದು, ಕಾರ್ಖಾನೆ ಮಾಲೀಕರ ಜತೆಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ದುರಂತ ಬೆನ್ನಲ್ಲೇ ನಾಪತ್ತೆಯಾಗಿರುವ ಮಾಲೀಕ

ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಪಾರ್ಕ್‌ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಪ್ರಕರಣ ಸಂಬಂಧ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ್‌ನನ್ನು ಬಂಧಿಸಲಾಗಿದೆ. ಕಾರ್ಖಾನೆಯ ಮಾಲೀಕ ಅಬ್ದುಲ್ ಖಾದೀರ್ ಶೇಕ್ ಪರಾರಿ ಆಗಿದ್ದು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ. ಈತ ಮುಂಬೈ ಮೂಲದವನು ಎಂದು ತಿಳಿದು ಬಂದಿದ್ದು, ಮೃತ ವಿಜಯಲಕ್ಷ್ಮೀ ಪತಿ ವೀರಭದ್ರ ಅವರಿಂದ ದೂರು ಪಡೆಯಲಾಗಿದೆ. IPC 286, 337, 338, 304, explosive act 1908 ಪ್ರಕಾರ ಕೇಸ್ ದಾಖಲು ಮಾಡಲಾಗಿದ್ದು, ಮೂರು ತಂಡಗಳಾಗಿ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Electric scooter | ಕ್ಷಣಾರ್ಧದಲ್ಲೆ ಉರಿದು ಭಸ್ಮವಾದ ಎಲೆಕ್ಟ್ರಿಕ್ ಸ್ಕೂಟರ್

Exit mobile version