ಹುಬ್ಬಳ್ಳಿ: ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ (BJP-JDS Alliance) ಮುಂದಿನ ಲೋಕಸಭಾ ಚುನಾವಣೆಗೆ (Parliament Elections 2024) ಸಂಬಂಧಿಸಿ ಎಷ್ಟು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂಬ ಬಗ್ಗೆ ಕ್ಲ್ಯಾರಿಟಿ ಸಿಕ್ಕಿದೆ. ಹೆಚ್ಚಿನವರು ಜೆಡಿಎಸ್ ಮೂರು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎಂದು ಹೇಳುತ್ತಿದ್ದರೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಜಿ.ಟಿ. ದೇವೇಗೌಡ (GT Devegowda) ಅವರು ನಾವು ಕೇಳುತ್ತಿರುವುದು ಮೂರು ಕ್ಷೇತ್ರವಲ್ಲ ಆರು (Demand for six seats) ಎಂದು ಸ್ಪಷ್ಟಪಡಿಸಿದ್ದಾರೆ.
ನಾವು ಮತ್ತು ನಮ್ಮ ಪಕ್ಷ ಕಾರ್ಯಕರ್ತರು ಆರು ಕ್ಷೇತ್ರಗಳನ್ನು ಕೇಳಬೇಕು ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ ಕುಮಾರಸ್ವಾಮಿ ಅವರಿಗೆ ಹೇಳಿದ್ದೇವೆ. 28 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳಿರುವ ಜಿ.ಟಿ. ದೇವೇಗೌಡರ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.
ಹಾಗಿದ್ದರೆ ಜೆಡಿಎಸ್ ಕೇಳಿದ ಕ್ಷೇತ್ರಗಳು ಯಾವುವು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೋಲಾರ ಸೇರಿ ಆರು ಕ್ಷೇತ್ರ ಕೇಳಿದ್ದೇವೆ ಎಂದರು. ಇನ್ನೊಂದು ಚಿಕ್ಕಬಳ್ಳಾಪುರ ಎಂಬ ಸುದ್ದಿ ಇದೆ.
ಇದನ್ನೂ ಓದಿ : Lok Sabha Election 2024: ಮಂಡ್ಯ ಟಿಕೆಟ್ ಕಿರಿಕ್; ನಮಗೇ ಬೇಕು ಎಂದ ಬಿಜೆಪಿ! ಸುಮಲತಾ ಕಥೆ ಏನು?
ಸುಮಲತಾ ಕಾಂಗ್ರೆಸ್‌ಗೆ ಹೋಗಬಹುದು ಎಂದ ಜಿ.ಟಿ. ದೇವೇಗೌಡ
ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಸೃಷ್ಟಿಯಾಗಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಒಂದೊಮ್ಮೆ ಮಂಡ್ಯ ಕ್ಷೇತ್ರ ಬಿಜೆಪಿ ಪಾಲಾದರೆ ಸುಮಲತಾ ಅವರಿಗೆ ಟಿಕೆಟ್ ಸಿಗಬಹುದು. ಸಿಗದೆ ಇದ್ದರೆ ಅವರು ಕಾಂಗ್ರೆಸ್ ಸೇರುವುದು ಗ್ಯಾರಂಟಿ ಎಂದಿದ್ದಾರೆ.
ಮಾಜಿ ಸಚಿವರಾಗಿರುವ ಕೆ.ಸಿ. ನಾರಾಯಣ ಗೌಡ ಅವರು ಇದೀಗ ಸಿದ್ದರಾಮಯ್ಯ ಮನೆಯಲ್ಲಿ ಕುಳಿತಿದ್ದಾರೆ. ಹಾಗಾಗಿ ಸುಮಲತಾ ಕಾಂಗ್ರೆಸ್ ಗೆ ಹೋಗಬಹುದುʼʼ ಎಂದರು.
GT Devegowda: ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಇಲ್ಲ ಎಂದ ಜಿ.ಟಿ ದೇವೇಗೌಡ
ಗೌಡರ ಕುಟುಂಬದಿಂದ ಇಬ್ಬರು ಅಭ್ಯರ್ಥಿಗಳು ಇರಬಹುದು, ಒಂದು ಎಚ್.ಡಿ ಕುಮಾರಸ್ವಾಮಿ, ಇನ್ನೊಬ್ಬರು ಪ್ರಜ್ವಲ್ ರೇವಣ್ಣ ಅವರು ಅಭ್ಯರ್ಥಿಗಳಾಗಬಹುದು ಎಂದು ಜಿ.ಟಿ. ದೇವೇಗೌಡರು ಹೇಳಿದರು. ಒಂದು ವೇಳೆ ಕುಮಾರಸ್ವಾಮಿ ಅವರು ಸ್ಪರ್ಧಿಸದೆ ಇದ್ದರೆ ಪ್ರಜ್ವಲ್ ರೇವಣ್ಣ ಮಾತ್ರ ಸ್ಪರ್ಧೆ ಮಾಡಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುವುದಿಲ್ಲ. ಅವರು ರಾಜ್ಯಾದ್ಯಂತ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು.
GT Devegowda : ಮೈತ್ರಿ ಲೋಕಸಭೆಗೆ ಮಾತ್ರ ಸೀಮಿತ ಅಲ್ಲ
ಬಿಜೆಪಿಯವರು ಯಾರೂ ನಮ್ಮ ಮೈತ್ರಿ ವಿರೋಧ ಮಾಡಿಲ್ಲ. ಲೋಕಸಭೆ ಅಷ್ಟೆ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು ಎಂಬ ಅಭಿಪ್ರಾಯವಿದೆ. ಯಾಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ ದಬ್ಬಾಳಿಕೆ ಜಾಸ್ತಿಯಾಗಿದೆ. ಐದು ಗ್ಯಾರಂಟಿ ವಿಫಲವಾಗಿದೆ. ಮೋದಿ ಹಣ ಮಾತ್ರ ಸಲೀಸಾಗಿ ಹೋಗುತ್ತಿದೆ ಎಂದು ಜಿ.ಟಿ. ದೇವೇಗೌಡ ವಿವರಿಸಿದರು.
ನಮ್ಮ ಹೊಂದಾಣಿಕೆ ಮೋದಿಗಾಗಿ, ತತ್ವ, ಸಿದ್ಧಾಂತದಲ್ಲಿ ರಾಜಿ ಇಲ್ಲ
ಮಂಡ್ಯದಲ್ಲಿ ನಡೆದ ಪ್ರತಿಭಟನೆಯ ವೇಳೆ ಎಚ್.ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದ್ದು ಮತ್ತು ಅದಕ್ಕೆ ಎಚ್.ಡಿ. ದೇವೇಗೌಡರೇ ಬೇಸರ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಜಿ.ಟಿ. ದೇವೇಗೌಡರು, ಆವತ್ತು ಹನುಮ ಭಕ್ತರು ಬಂದು ಕೇಸರಿ ಶಾಲು ಹಾಕಿದರು. ಕೇಸರಿ ಏನೂ ಬಿಜೆಪಿಯ ಸಿಂಬಲ್ ಅಲ್ಲ. ಕುಮಾರಸ್ವಾಮಿ ಬಿಜೆಪಿಯ ಸಿಂಬಲ್ ಇರುವ ಶಾಲು ಹಾಕಿಲ್ಲ. ಅದು ಆಂಜನೇಯನ ಧ್ವಜ ಎಂದು ಸಮರ್ಥಿಸಿದರು. ನಮ್ಮ ಪಕ್ಷದ ತತ್ವ ಸಿದ್ಧಾಂತ ಬೇರೆ. ಬಿಜೆಪಿ ತತ್ವ ಸಿದ್ಧಾಂತ ಬೇರೆ. ಮೋದಿ ಕಾರಣಕ್ಕೆ ನಾವು ಹೊಂದಾಣಿಕೆ ಆಗಿದ್ದೇವೆ. ಬಿಜೆಪಿಯ ಯಾವ ತತ್ವ ಸಿದ್ಧಾಂತವನ್ನೂ ನಾವು ಜೆಡಿಎಸ್ ಪಕ್ಷದ ಒಳಗಡೆ ಬಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ನಮ್ಮ ಸಿದ್ಧಾಂತ ಬೇರೆ, ಬಿಜೆಪಿಯ ಸಿದ್ಧಾಂತ ಬೇರೆ. ಯಾವುದೇ ಹಂತದಲ್ಲಿ ಸಿದ್ಧಾಂತದಲ್ಲಿ ನಮ್ಮದು ರಾಜಿಯಿಲ್ಲ” ಎಂದು ಹೇಳಿದ್ದರು.
ತನ್ನ ಭಾರದಿಂದಲೇ ಕುಸಿಯಲಿದೆ ಕಾಂಗ್ರೆಸ್ ಸರ್ಕಾರ
ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಎನ್ನುವುದು ಕಾಂಗ್ರೆಸ್‌ನ ಸುಳ್ಳು ಪ್ರಚಾರ. ಈ ಸಿದ್ಧರಾಮಯ್ಯ ಅವರು ಶಾಸಕರಿಗೆ ಏನು ಕೊಟ್ಟಿದ್ದಾರೆ. 224 ಶಾಸಕರಿಗೆ ಕೇವಲ 50 ಲಕ್ಷ ರೂ. ಕೊಟ್ಟಿದ್ದಾರೆ ಎಂದು ಹೇಳಿದ ಜಿ.ಟಿ. ದೇವೇಗೌಡರು, ನಾವು ಯಾರೂ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದಿಲ್ಲ. ಅದರ ಭಾರದಿಂದಲೇ ಅದು ಕುಸಿಯಬೇಕು. ಕುಮಾರಸ್ವಾಮಿ ಸರ್ಕಾರವನ್ನು ಯಾರು ತೆಗೆದರೋ, ಹಾಗೇ ಆಗಬಹುದು ಎಂದರು.