ಬೆಂಗಳೂರು: 2022ರ ಏಪ್ರಿಲ್ 16ರಂದು ನಡೆದ ಹಳೆ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣವನ್ನೇ ಕೈಬಿಡಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಅಂದು ವಾಟ್ಸ್ ಆಪ್ ಸ್ಟೇಟಸ್ (Whatsapp Status) ಮುಂದಿಟ್ಟುಕೊಂಡು ಮುಸ್ಲಿಂ ಗುಂಪುಗಳು (Muslim groups) ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ದಾಳಿ (Muslims attack on Hale hubballi police station) ಮಾಡಿದ್ದವು. ಪೊಲೀಸರೇ ಭಯದಿಂದ ನಡುಗುವಂತಾದ ಈ ಪ್ರಕರಣದಲ್ಲಿ ಸುಮಾರು 40 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಕೈಬಿಡುವ ಬಗ್ಗೆ ಪ್ರಕ್ರಿಯೆಗಳು ನಡೆಯತ್ತಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆ ನಡೆದು ಅದರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಬೇಡಿಕೆ ಜೋರಾಗಿರುವ ನಡುವೆಯೇ ಈ ವಿದ್ಯಮಾನ ನಡೆಯುತ್ತಿರುವುದು ಪೊಲೀಸರ ನೈತಿಕ ಬಲವನ್ನು ಕುಸಿಯುವಂತೆ ಮಾಡಲಿದೆ.
ಆ ದಿನ ಏನಾಗಿತ್ತು ಹಳೆ ಹುಬ್ಬಳ್ಳಿಯಲ್ಲಿ?
ಯುವಕನೊಬ್ಬ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿ ಚಿತ್ರವೊಂದನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ ಎಂಬ ವಿವಾದದೊಂದಿಗೆ ಇಲ್ಲಿ ಗಲಭೆ ಶುರುವಾಗಿತ್ತು. ಪೊಲೀಸರು ಆರೋಪಿತ ಯುವಕನನ್ನು ಬಂಧಿಸಿದ್ದರು. ಯುವಕನ ಬಂಧನವಾಗಿದೆ ಎಂದು ತಿಳಿದ ಹಳೆ ಹುಬ್ಬಳ್ಳಿಯ ಮುಸ್ಲಿಮರು 2022ರ ಏಪ್ರಿಲ್ 16ರಂದು ರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಯುವಕನನ್ನು ತಮಗೆ ಒಪ್ಪಿಸುವಂತೆ ಕೂಗಿ ಕಿರುಚಾಡಿದ್ದರು. ಠಾಣೆ ಮೇಲೆ ಕಲ್ಲಿನ ಸುರಿಮಳೆಗೈದಿದ್ದರು. ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೂ ಕಲ್ಲು ಎಸೆದು ಗಲಭೆ ಉಂಟುಮಾಡಿದ್ದರು. ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ ಎಂಟು ಪೊಲೀಸರಿಗೆ ಗಾಯಗಳಾಗಿದ್ದವು. ಹತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕಾಗಿ ಬಂದಿತ್ತು.
ಈ ಕುರಿತು ಪೊಲೀಸರು 12 ಪ್ರಕರಣ ದಾಖಲಿಸಿ 158 ಆರೋಪಿಗಳನ್ನು ಬಂಧಿಸಿದ್ದರು. ಆ ಆರೋಪಿಗಳು ಬಳ್ಳಾರಿ ಹಾಗೂ ಕಲಬುರಗಿ ಜೈಲಿನಲ್ಲಿದ್ದಾರೆ. ಎಸಿಪಿ ಆರ್.ಕೆ. ಪಾಟೀಲ, ಹಳೇ ಹುಬ್ಬಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಶೋಕ ಚವ್ಹಾಣ ತಂಡದಿಂದ ಬೆಂಗಳೂರಿನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ.
ಈಗ ನಡೆಯುತ್ತಿರುವ ಚಟುವಟಿಕೆಗಳೇನು?
ಶಾಸಕರ ಪತ್ರಕ್ಕೆ ಸರ್ಕಾರ ಪ್ರತಿಸ್ಪಂದಿಸುವ ನೆಪದಲ್ಲಿ ರಾಜ್ಯ ಸರ್ಕಾರ ಈ ಕೇಸನ್ನೇ ಕ್ಲೋಸ್ ಮಾಡುವ ಸಂಚು ನಡೆಸಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಕಳೆದ ಸೆಪ್ಟೆಂಬರ್ 13ರಂದು ಎಸ್ಪಿ- ಕಮಿಷನರ್‌ಗಳಿಗೆ ಗೃಹ ಇಲಾಖೆ ಪತ್ರ ಬರೆದು ಹುಬ್ಬಳ್ಳಿ ಗಲಭೆಯ ಬಗ್ಗೆ ವರದಿ ತರಿಸಿಕೊಂದೆ. ಹುಬ್ಬಳ್ಳಿ ಮಾತ್ರವಲ್ಲ, ಕೆಜಿ ಹಳ್ಳಿ- ಡಿಜೆಹಳ್ಳಿ ಪ್ರಕರಣದಲ್ಲೂ ಇದೇ ರೀತಿ ವರದಿ ತರಿಸಿಕೊಳ್ಳಲಾಗಿದೆ.
ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಗೃಹ ಇಲಾಖೆಗೆ ಪತ್ರ ಬರೆದು, ಅಮಾಯಕರನ್ನು ಬಿಡುವ ವಿಚಾರದ ಮನವಿಯನ್ನು ಮಾಡಿದ್ದು ಬೇರೆ ಯಾರೂ ಅಲ್ಲ, ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು.
ಈ ಹಿಂದೆ ಮೈಸೂರಿನ ಕೃಷ್ಣರಾಜ ಶಾಸಕ ತನ್ವೀರ್ ಸೇಟ್ ಅವರು ಇದೇ ರೀತಿಯ ಪತ್ರವೊಂದನ್ನು ಬರೆದು ಕೆಜಿ ಹಳ್ಳಿ- ಡಿಜಿ ಹಳ್ಳಿ ಪ್ರಕರಣದಲ್ಲಿರುವ ಅಮಾಯಕರನ್ನು ಬಿಡುಗಡೆ ಮಾಡುವಂತೆ ಕೋರಿದ್ದರು. ಸರ್ಕಾರ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿತ್ತು. ಅಂದರು ಗೃಹ ಸಚಿವರನ್ನು ಪ್ರಶ್ನಿಸಿದಾಗ ಈ ರೀತಿಯಾಗಿ ಪತ್ರಗಳು ಬರುತ್ತವೆ. ನಾವು ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.
ಇದೀಗ ಸ್ವತಃ ಉಪ ಮುಖ್ಯಮಂತ್ರಿಗಳೆ ಗೃಹ ಇಲಾಖೆಗೆ ಪತ್ರ ಬರೆದು ಒತ್ತಾಯ ಮಾಡಿರುವುದು ಈ ವಿಚಾರದ ಗಂಭೀರತೆಯನ್ನು ತೋರಿಸುತ್ತದೆ. ಅಂದರೆ ಸರ್ಕಾರ ಈ ಪ್ರಕರಣಗಳನ್ನು ಕೈಬಿಡಲು ಗಂಭೀರವಾಗಿ ಪರಿಶೀಲಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: Power Point with HPK : ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಹಿಂದೆ ಸಿಎಂ ಸಿದ್ದರಾಮಯ್ಯ: ಆರಗ ಜ್ಞಾನೇಂದ್ರ