ಹುಬ್ಬಳ್ಳಿ: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರದಲ್ಲಿರುವಂತೆ (Karnataka Election) ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತರಾಗಿದ್ದ ಹಿರಿಯ ಬಿಜೆಪಿ ಕಾರ್ಯಕರ್ತ ಮೋಹನ್ ಲಿಂಬಿಕಾಯಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾನೂನು ಸಲಹೆಗಾರರಾಗಿದ್ದ ಮೋಹನ ಲಿಂಬಿಕಾಯಿ ರಾಜೀನಾಮೆ ನೀಡಿದ್ದು ಕೂಡಲೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಈ ಕುರಿತು ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿರುವ ಮೋಹನ್ ಲಿಂಬಿಕಾಯಿ, ಯಾವುದೇ ಕರಾರಿಲ್ಲದೆ ಕಾಂಗ್ರೆಸ್ ಸೇರುತ್ತಿದ್ದೇನೆ. ಮೊದಲು ಪಕ್ಷವನ್ನು ಸೇರಿದ ನಂತರ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅದಕ್ಕೆ ಬದ್ಧನಾಗಿದ್ದೇನೆ ಎಂದಿದ್ದಾರೆ.
ಬಿಜೆಪಿಯಲ್ಲಿ ಉಸಿರುಗಟ್ಟೋ ವಾತಾವರಣ ಇತ್ತು ಎಂದು ಲಿಂಬಿಕಾಯಿ ಆರೋಪಿಸಿದ್ದರು. ಕಳೆದ ವರ್ಷ ನಡೆದ ಪಶ್ಚಿಮ ಶಿಕ್ಷಕರ ಪರಿಷತ್ ಚುನಾವಣೆಯ ಆಕಾಂಕ್ಷಿಯಾಗಿದ್ದ ಲಿಂಬಿಕಾಯಿ ಅವರ ಬದಲಿಗೆ ಜೆಡಿಎಸ್‌ನಿಂದ ಬಸವರಾಜ ಹೊರಟ್ಟಿಯವರನ್ನು ಕರೆತಂದು ಬಿಜೆಪಿ ಅಭ್ಯರ್ಥಿ ಮಾಡಲಾಗಿತ್ತು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಮೋಹನ ಲಿಂಬಿಕಾಯಿ ಸ್ಪರ್ದೆ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ್ ಬಿಜೆಪಿ ಶಾಸಕರಾಗಿದ್ದು, ಅವರ ಎದುರು ಪಂಚಮಸಾಲಿ ಸಮುದಾಯದ ಮೋಹನ್ ಲಿಂಬಿಕಾಯಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಗೆ ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರದಾನ
ಮೋಹನ್ ಲಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಕುಟುಂಬವು ದೊಡ್ಡದಾಗುತ್ತ ಮುಂದೆ ಸಾಗುತ್ತಿದೆ ಎಂದಿದ್ದಾರೆ.