ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಹಣೆಗೆ ಸ್ವಾಗತಕಾರರು ಇರಿಸಿದ್ದ ತಿಲಕವನ್ನು ಅಳಿಸಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಅದರಲ್ಲಿ ಭಾಗವಹಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬಂದಿಳಿದರು.
ವಿಮಾನದಿಂದ ಇಳಿದ ಕೂಡಲೆ ಆಗಮಿಸಿದವರಿಗೆಲ್ಲ ತಿಲಕ ಇಟ್ಟು ಆರತಿ ಬೆಳಗುವ ವ್ಯವಸ್ಥೆ ಮಾಡಲಾಗಿತ್ತು. ಅದರಂತೆಯೇ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತಿಲಕ ಇಡಲಾಗಿತ್ತು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿ ನೀಡಲು ಆಗಮಿಸಿದ ಬೊಮ್ಮಾಯಿ, ʼಬೇಡ ಬೇಡ ಎಂದು ಹೇಳಿದರೂ ಹಚ್ಚಿದರುʼ ಎನ್ನುತ್ತಾ, ಸಹಾಯಕರಿಂದ ಟವೆಲ್ ಪಡೆದು ಅಳಿಸಿಕೊಂಡರು.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸ್ಯಾಂಟ್ರೋ ರವಿ ಬಿಜೆಪಿ ಕಾರ್ಯಕರ್ತ ಎನ್ನುವ ಬಗ್ಗೆ ಶಾಸಕ ದಿನೇಶ್ ಗುಂಡೂರಾವ್ ಮಾಡಿರುವ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿ, ಕಾರ್ಯಕರ್ತ ಹೌದೋ ಅಲ್ಲವೋ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿದೆ. ಕಾಂಗ್ರೆಸ್‌ನಲ್ಲಿ ಎಂಥವರಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರಿಗೆ ತಿಳಿದಿದೆ. ನಾನು ಅವರ ಮಟ್ಟಕ್ಕೆ ಇಳಿಯಲಾಗದು. ಮೊದಲು ಅವರ ಮನೆ ಸ್ವಚ್ಛ ಮಾಡಿಕೊಳ್ಳುವುದನ್ನು ಕಲಿಯಲಿ ಎಂದರು. ಸ್ಯಾಂಟ್ರೋ ರವಿ ಬಂಧವಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಈಗ ತಾನೆ ವಿಮಾನದಿಂದ ಇಳಿದಿದ್ದೇನೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಉಚಿತ ವಿದ್ಯುತ್ ನೀಡುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಉತ್ತರಿಸಿ ಡಿ.ಕೆ.ಶಿವಕುಮಾರ್ ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.ಈ ಹೇಳಿಕೆಗಳನ್ನು ಗಮನಿಸಿದರೆ, ಮುಂದೆ ಅನುಷ್ಠಾನ ಮಾಡುವ ಉದ್ದೇಶ ಅವರಿಗಿಲ್ಲ. ಹೇಗಾದರೂ ಮಾಡಿ, ಸುಳ್ಳು ಭರವಸೆ ನೀಡಿ ಚುನಾವಣೆ ಗೆಲ್ಲಬೇಕೆನ್ನುವುದು ಸ್ಪಷ್ಟವಾಗಿದೆ. ಇಷ್ಟು ವರ್ಷ ಆಡಳಿತ ಮಾಡಿದ ಜವಾಬ್ದಾರಿಯುತ ಪಕ್ಷ ಕಾಂಗ್ರೆಸ್ ಹೀಗೆ ಹೇಳುವುದು ಸಲ್ಲದು. ಅರವಿಂದ ಕೇಜ್ರಿವಾಲ್ ಹೇಳಿದರೆ ನಡೆಯುತ್ತದೆ. ಅವರಿನ್ನೂ ಹೊಸಬರು. ಕಾಂಗ್ರೆಸ್ ಕಾಲದಲ್ಲಿ 6 ತಾಸು ವಿದ್ಯುತ್ ಸರಿಯಾಗಿ ನೀಡಲಾಗಲಿಲ್ಲ. ಇನ್ನು ಉಚಿತ ವಿದ್ಯುತ್ ಹೇಗೆ ನೀಡಲಿದ್ದಾರೆ ಎಂದರು.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ಬಂಧನದ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಸರ್ಕಾರ