ಹುಬ್ಬಳ್ಳಿ: ಪ್ರಲ್ಹಾದ್ ಜೋಶಿ (Pralhad Joshi) ಯಾವತ್ತೂ ಲಿಂಗಾಯತ ಪರ ಗಟ್ಟಿ ನಿಂತಿದ್ದಾರೆ. ಅಪಪ್ರಚಾರಕ್ಕೆಲ್ಲ ಕಿವಿಗೊಡಬೇಡಿ ಎಂದು ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಲಿಂಗಾಯತ-ವೀರಶೈವ ಸಮುದಾಯಕ್ಕೆ ಕರೆ (Lok Sabha Election 2024) ನೀಡಿದರು.
ಧಾರವಾಡದ ಮೊರಬದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರ ರೋಡ್ ಶೋ, ಮತಯಾಚನೆ ನಡೆಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಹಿಂದೆ ರಾಮಕೃಷ್ಣ ಹೆಗಡೆ, ಅನಂತ ಕುಮಾರ್ ಈಗ ಪ್ರಲ್ಹಾದ್ ಜೋಶಿ ಅವರು ಲಿಂಗಾಯತರ ಪರ ಗಟ್ಟಿಯಾಗಿ ನಿಂತವರಾಗಿದ್ದಾರೆ. ಕೆಲವರು ಏನೇನೋ ಅಪಪ್ರಚಾರ ಮಾಡುತ್ತಾರೆ. ಅಂಥದ್ದಕ್ಕೆ ಲಿಂಗಾಯತ, ವೀರಶೈವ ಸಮಾಜದವರು ಕಿವಿಗೊಡಬಾರದು ಎಂದು ಹೇಳಿದರು.
ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೊಮ್ಮಾಯಿ ಅವರ ಅವಧಿಯಲ್ಲಿ ನಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವೇಳೆ ಕೇಂದ್ರದ ಮಟ್ಟದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಸಹ ಪ್ರಯತ್ನ ನಡೆಸಿದರು. ಅದರ ಪರಿಣಾಮ ಕೊನೆಗೆ 2ಡಿ ಸೃಷ್ಟಿಸಿ ಅವಕಾಶ ಕಲ್ಪಿಸಲು ಕೇಂದ್ರದ ವರಿಷ್ಠರು ಸಮ್ಮತಿಸಿದ್ದರು ಎಂದು ಯತ್ನಾಳ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ,ಕಾಂಗ್ರೆಸ್ ಪಾರ್ಟಿ ಲಿಂಗಾಯತರ ಪ್ರಬಲ ವಿರೋಧಿ
ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾರ್ಟಿ ಲಿಂಗಾಯತರ ಪ್ರಬಲ ವಿರೋಧಿ. ಬೆಳಗಾವಿ ಅಧಿವೇಶನದಲ್ಲಿ ಲಿಂಗಾಯತ ಮೀಸಲಾತಿ ಬಗ್ಗೆ ಚರ್ಚಿಸಲು ಅವಕಾಶ ಕೊಡಲೇ ಇಲ್ಲ ಇವರು ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.
ಸಿಎಂ ಭೇಟಿಗೂ ಸಿಗಲಿಲ್ಲ
ಪ್ರವರ್ಗ 2ಡಿ ಬಗ್ಗೆ ಮಾತನಾಡಲು ಸಿಎಂ ಭೇಟಿಗೆ ಸಮಯ ಕೇಳಿದರೆ ಕೊನೆಗೂ ಕೊಡಲಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷ ಮತ್ತು ಸಿಎಂ ಲಿಂಗಾಯತ ವಿರೋಧಿ ಆಗಿದ್ದಾರೆ. ಅವಕಾಶ ಸಿಗಲ್ಲ ಬಿಡಿ ಎಂದು ಆ ಪಕ್ಷದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ನನಗೆ ಹೇಳಿದ್ರು ಎಂದೂ ಇದೇ ವೇಳೆ ತಿಳಿಸಿದರು.
ಕಿತ್ತೂರು ಚೆನ್ನಮ್ಮ ಪ್ರತಿಮೆ ಮುಂದೆ ಆಣೆ ಮಾಡುವೆ
ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ಪಕ್ಷ ಲಿಂಗಾಯತ ವಿರೋಧಿ ಎಂಬುದನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ ಬಗ್ಗೆ ಬೇಕಿದ್ದರೆ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದೂ ಯತ್ನಾಳ್ ಸವಾಲು ಹಾಕಿದರು.
ಪಂಚಮಸಾಲಿ ಸಿಎಂ ನಿರ್ಣಯ
ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮಾಜದ ನಾಯಕರನ್ನು ಸಿಎಂ ಮಾಡುವ ನಿರ್ಣಯ ಆಗುತ್ತದೆ. ಆ ಕಾಲ ಬರುತ್ತದೆ ಸ್ವಲ್ಪ ಕಾಯಿರಿ ಎಂದು ಯತ್ನಾಳ್ ಸೂಚ್ಯವಾಗಿ ಹೇಳಿದರು.
ಇದನ್ನೂ ಓದಿ: Snake Bite: ತೋಟದ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕಚ್ಚಿದ ಹಾವು; ಕ್ಷಣಾರ್ಧದಲ್ಲೆ ಹಾರಿಹೋಯ್ತು ಪ್ರಾಣ
ಬಿಜೆಪಿ ಸರ್ಕಾರ ಇದ್ದಾಗ ಯಾರಿಗೂ ಅನ್ಯಾಯ ಆಗದಂತೆ ವರ್ಗೀಕರಣ ಮಾಡಿತ್ತು. 2ಡಿ ಸೃಷ್ಟಿಸಿ ಅದರಲ್ಲಿ ವೀರಶೈವ, ಪಂಚಮಸಾಲಿ ಲಿಂಗಾಯತ ಎಂದು ಸ್ಪಷ್ಟವಾಗಿ ಬರೆದಿದೆ. ಶೇ.7ರಷ್ಟು ಮೀಸಲಾತಿ ಕಲ್ಪಿಸಿದ್ದಾಗಿ ಅವರು ತಿಳಿಸಿದರು.
ಮುಸ್ಲಿಂರಿಗೆ 2ಎ, 2ಬಿ ಅಲ್ಲದೇ, ಪ್ರವರ್ಗ 1 ರಲ್ಲಿ ಶೇ.10 ರಷ್ಟು ಮೀಸಲಾತಿ ಇತ್ತು. ಆದರೆ, ಪಂಚಮಸಾಲಿ, ಒಕ್ಕಲಿಗ, ಜಂಗಮ, ಬಣಜಿಗರಲ್ಲಿಯೂ ಬಡವರಿದ್ದಾರೆ. ಹಾಗಾಗಿ ಯಾರಿಗೂ ಅನ್ಯಾಯವಾಗದಂತೆ ಬೊಮ್ಮಾಯಿ ಸಿಎಂ ಆಗಿದ್ದಾಗ ಮೀಸಲಾತಿ ಹಂಚಿಕೆ ಮಾಡಲಾಗಿತ್ತು ಎಂದರು.
ಇದನ್ನೂ ಓದಿ: Gold Rate Today: 22 ಕ್ಯಾರಟ್, 24 ಕ್ಯಾರಟ್ ಚಿನ್ನದ ಬೆಲೆ ಇಂದು ಹೀಗಿವೆ; ತುಸುವೇ ಏರಿಕೆ
ಈಗ ಸಿಎಂ ಸಿದ್ದರಾಮಯ್ಯ ಒಬಿಸಿ, ದಲಿತರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಡಲು ಹೊರಟಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.