ಹುಬ್ಬಳ್ಳಿ: ಕರ್ನಾಟಕವನ್ನು ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ಯಬೇಕೆಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರವೇ ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಐಐಟಿ ಧಾರವಾಡ ಲೋಕಾರ್ಪಣೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಲೋಕಾರ್ಪಣೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿದ್ಯುದೀಕರಣ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ, ಜಯದೇವ ಆಸ್ಪತ್ರೆಯ ಶಂಕುಸ್ಥಾಪನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆ, ಹೈಟೆಕ್ ಕ್ರೀಡಾ ಸಂಕೀರ್ಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಬ್ಬಳ್ಳಿ ಎಂದರೆ ಮಹಾಲಕ್ಷ್ಮೀ ನಗರ, ಧಾರವಾಡ ಎಂದರೆ ಮಹಾಸರಸ್ವತಿ ನಗರ. ಈ ನಗರಗಳಿಗೆ ಪ್ರಧಾನಿ ಆಗಮಿಸಿದ್ದಾರೆ. ನಾನು ಮೂವತ್ತೈದು ವರ್ಷ ರಾಜಕಾರಣದಲ್ಲಿದ್ದೇನೆ. ಆದರೆ ಮೋದಿಯವರಿಗೆ ಸೇರಿದಷ್ಟು ಜನರು ಯಾರಿಗೂ ಸೇರುವುದಿಲ್ಲ.
ಒಬ್ಬ ರಾಜಕಾರಣಿ ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರುತ್ತಾನೆ. ಆದರೆ ಮುತ್ಸದ್ದಿಗಳ ಕಣ್ಣು ಮುಂದಿನ ಜನಾಂಗದ ಮೇಲೆ ಇರುತ್ತದೆ. ಮುಂದಿನ ಜನಾಂಗವನ್ನು ತಯಾರು ಮಾಡಲು ಸ್ಥಾಪಿಸಿರುವುದು ಐಐಟಿ. ರೈಲ್ವೆಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಅತಿ ದೊಡ್ಡ ಹಣ ಮೀಸಲಿಟ್ಟಿದ್ದಾರೆ.
ಇಡು ಡಬಲ್ ಇಂಜಿನ್ ಸರ್ಕಾರದ ಕೆಲಸ. ಕರ್ನಾಟಕವನ್ನು ಅಭಿವೃದ್ಧಿ ಮಾರ್ಗದಲ್ಲಿ ಕೊಂಡೊಯ್ಯಬೇಕಾದರೆ ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯ. ಇಡೀ ದೇಶದಲ್ಲಿ, ಕರ್ನಾಟಕದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗವಿದೆ. ಕಳೆದ ಐದು ವರ್ಷದಲ್ಲಿ ಲಕ್ಷಾಂತರ ಕೈಗಳಿಗೆ ಕೆಲಸ ನೀಡಲಾಗಿದೆ.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮೋದಿ ಸರ್ಕಾರ ದೊಡ್ಡ ಕಾಣಿಕೆ ನೀಡಿದೆ. ಇಷ್ಟು ದಿನ ಈ ಭಾಗ ಕಡೆಗಣಿಸಲ್ಪಟ್ಟಿತ್ತು. ಮಾತಿನಲ್ಲಿ ಅಭಿವೃದ್ಧಿ ಆಗುವುದಿಲ್ಲ. ಅದನ್ನು ಮಾಡಿ ತೋರಿಸುವ ಛಾತಿ ನಮ್ಮ ನಾಯಕರಿಗಿದೆ. ಒಂದೆಡೆ ಶಿಕ್ಷಣ, ಮತ್ತೊಂದೆಡೆ ಮೂಲಸೌಕರ್ಯ, ಇನ್ನೊಂದೆಡೆ ಕೈಗಾರಿಕೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.