Site icon Vistara News

Modi in Karnataka: ಗಾಜಿನ ಬಾಕ್ಸ್‌ನಲ್ಲಿ ಧಾರವಾಡ ಪೇಡಾ ಕೊಟ್ಟ ಪ್ರಲ್ಹಾದ ಜೋಶಿ: ವೇದಿಕೆಯಿಂದಲೇ ನರೇಂದ್ರ ಮೋದಿ ಹೇಳಿದ್ದೇನು?

modi-in-karnataka modi speech regarding dharwad pedha

#image_title

ಹುಬ್ಬಳ್ಳಿ: ದೇಶ ವಿದೇಶಗಳಲ್ಲೂ ಪ್ರಸಿದ್ಧವಾಗಿರುವ ಧಾರವಾಢ ಪೇಡಾ ಎಲ್ಲರಿಗೂ ಅಚ್ಚುಮೆಚ್ಚು. ಇಂತಹ ಧಾರವಾಡ ಪೇಡಾವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಬ್ಬಳ್ಳಿಯಲ್ಲಿ ಉಡುಗೊರೆಯಾಗಿ ನೀಡಲಾಯಿತು.

ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಐಐಟಿ ಧಾರವಾಡ ಲೋಕಾರ್ಪಣೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಲೋಕಾರ್ಪಣೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್‌ ವಿದ್ಯುದೀಕರಣ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಉದ್ಘಾಟನೆ, ಜಯದೇವ ಆಸ್ಪತ್ರೆಯ ಶಂಕುಸ್ಥಾಪನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆ, ಹೈಟೆಕ್ ಕ್ರೀಡಾ ಸಂಕೀರ್ಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಗಾಜಿನ ಬಾಕ್ಸ್‌ ಒಳಗೆ ಇರಿಸಿ ಪೇಡಾವನ್ನು ನೀಡಲಾಯಿತು.

ನಂತರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಧಾರವಾಡ ಈ ನೆಲದಲ್ಲಿ ವಿಕಾಸದ ಹೊಸ ಧಾರೆ ಆರಂಭವಾಗುತ್ತಿದೆ. ಈ ಧಾರೆಯು ಪೂರ್ಣ ಕರ್ನಾಟಕದ ನೆಲವನ್ನು ಅಲಂಕರಿಸುತ್ತದೆ. ಶತಮಾನಗಳಿಂದಲೂ ನಮ್ಮ ಮಲೆನಾಡು ಹಾಗೂ ಬಯಲುಸೀಮೆಯ ನಡುವೆ ಧಾರವಾಡವು ಗೇಟ್‌ವೇ ರೀತಿ ಇದೆ. ಈ ಸ್ಥಳವು ಎಲ್ಲರನ್ನೂ ಸ್ವಾಗತಿಸಿದೆ. ಧಾರವಾಡ ಕೇವಲ ಗೇಟ್‌ವೇ ಮಾತ್ರವಲ್ಲ, ಭಾರತದ ಜೀವಂತಿಕೆಯ ಪ್ರತಿಬಿಂಬವಾಯಿತು. ಇದನ್ನು ಕರ್ನಾಟಕದ ರಾಜಧಾನಿಯಾಗಿ ನೋಡಲಾಗುತ್ತದೆ.

ದ.ರಾ. ಬೇಂದ್ರೆಯವರಂತಹ ಸಾಹಿತ್ಯಕಾರರನ್ನು ಈ ನೆಲ ನೀಡಿದೆ, ಪಂಡಿತ್‌ ಭೀಮಸೇನ್‌ ಜೋಷಿ, ಗಂಗೂಬಾಯಿ ಹಾನಗಲ್‌ ಹಾಗೂ ಬಸವರಾಜ ರಾಜಗುರು, ಪಂಡಿತ್‌ ಮಲ್ಲಿಕಾರ್ಜುನ್‌ ಮನ್ಸೂರ್, ಪಂಡಿತ್‌ ಕುಮಾರ ಗಂಧರ್ವರಂತಹ ಮಹಾನ್‌ ರತ್ನಗಳನ್ನು ನೀಡಿದೆ. ಧಾರವಾಡದ ಗುರುತು ಇಲ್ಲಿನ ಸ್ವಾದದಿಂದಲೂ ಇದೆ. ಒಂದು ಬಾರಿ ಧಾರವಾಡ ಪೇಡಾವನ್ನು ಒಮ್ಮೆ ಸೇವಿಸಿ ಮತ್ತೆ ಸೇವಿಸದೇ ಇರುವವರು ಇಲ್ಲ. ನನಗೆ ಧಾರವಾಡ ಪೇಡಾವನ್ನು ನೀಡಲಾಗಿದೆ. ಆದರೆ ನನ್ನ ಸ್ನೇಹಿತ ಪ್ರಲ್ಹಾದ ಜೋಶಿ ಅವರಿಗೆ, ನನ್ನ ಆರೋಗ್ಯದ ಕಾಳಜಿ ಅಪಾರ. ಹಾಗಾಗಿ ಪೇಡಾವನ್ನು ಗಾಜಿನ ಪೆಟ್ಟಿಗೆಯಲ್ಲಿ ಇರಿಸಿ ನೀಡಿದ್ದಾರೆ ಎಂದು ಹಾಸ್ಯ ಮಾಡಿದರು.

ಈ ವರ್ಷದ ಆರಂಭದಲ್ಲಿಯೂ ಹುಬ್ಬಳ್ಳಿಗೆ ಆಗಮಿಸುವ ಸೌಭಾಗ್ಯ ಲಭಿಸಿತ್ತು. ಹುಬ್ಬಳ್ಳಿಯ ನನ್ನ ಸಹೋದರ ಸಹೋದರಿಯರು ರಸ್ತೆಗಳ ನಡುವೆ ನಿಂತು ನನಗೆ ಆಶೀರ್ವಾದ ನೀಡಿದ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ. ಇಷ್ಟು ಪ್ರೀತಿ, ಇಷ್ಟು ಆಶೀರ್ವಾದವು ಲಭಿಸುತ್ತಿದೆ.

ಇದನ್ನೂ ಓದಿ: Modi in Karnataka: ಕರ್ನಾಟಕದ ಅಭಿವೃದ್ಧಿ ಮಾಡಲು ಡಬಲ್‌ ಇಂಜಿನ್‌ ಸರ್ಕಾರದಿಂದ ಮಾತ್ರ ಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ

ಈ ಹಿಂದೆ ಕರ್ನಾಟಕದ ಅನೇಕ ಕ್ಷೇತ್ರಗಳಿಗೆ ತೆರಳಿದ್ದೇನೆ. ರಾಜ್ಯದೆಲ್ಲೆಡೆ ಕನ್ನಡಿಗರು ನನಗೆ ನೀಡಿರುವ ಸ್ನೇಹ, ತಮ್ಮತನವು ಒಂದಕ್ಕಿಂತ ಒಂದು ಊರಿನಲ್ಲಿ ಪ್ರೀತಿ ವ್ಯಕ್ತವಾಗುತ್ತಿದೆ. ಈ ಸ್ನೇಹವು ನನ್ನ ಮೇಲೆ ಬಹುದೊಡ್ಡ ಋಣ. ಈ ಋಣವನ್ನು ನಾನು ಕರ್ನಾಟಕದ ಜನರ ಸೇವೆ ಮಾಡುವ ಮೂಲಕ ಚುಕ್ತಾ ಮಾಡುತ್ತೇನೆ.

ಕರ್ನಾಟಕದ ಪ್ರತಿ ವ್ಯಕ್ತಿಯ ಜೀವನ ಉತ್ತಮವಾಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು, ಸ್ತ್ರೀ ಸಬಲೀಕರಣ ಆಗಬೇಕು ಎಂಬ ಕುರಿತು ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರ ಪ್ರತಿ ಜಿಲ್ಲೆ, ತಾಲೂಕು ಅಭಿವೃದ್ಧಿಯ ಪೂರ್ಣ ವಿಕಾಸಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

Exit mobile version