ಹುಬ್ಬಳ್ಳಿ: ನಾನು ಸತ್ಯ ಹೇಳುತ್ತೇನೆ ಎನ್ನುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ನನ್ನನ್ನು ಕಂಡರೆ ಭಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆಗಾಗಿ ಕಲಬುರಗಿ ಮತ್ತು ಯಾದಗಿರಿಗೆ ಗುರುವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ, ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು. ಈಗ ಚುನಾವಣೆ ಇರುವ ಹಿನ್ನೆಲೆ ಪ್ರಧಾನಿ ಮೋದಿಯವರನ್ನು ಕರೆಸಿ ನಾವೇ ಮಾಡಿದವರು ಅಂತ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಅಡುಗೆ ಮಾಡಿದವರು ನಾವು ಊಟ ಮಾಡೋರು ಬಿಜೆಪಿಯವರು ಎಂದರು.
ಸೇವಲಾಲ್ ಜಯಂತಿ, ಲಂಬಾಣಿ ಅಭಿವೃದ್ಧಿ ನಿಗಮ ಆರಂಭಿಸಿದ್ದು ನಾವು. ಸೇವಾಲಾಲ್ ಹುಟ್ಟಿದ ಸ್ಥಳವನ್ನು ಅಭಿವೃದ್ಧಿಪಡಿಸಿದವರು ನಾವು, ನೂರಾರು ಕೋಟಿ ಅನುದಾನ ನೀಡಿದ್ದೇವೆ. ಲಂಬಾಣಿ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಮೂರು ವರ್ಷದಲ್ಲಿ ಕೇವಲ ಮೂವತ್ತು ಕೋಟಿ ರೂ. ಕೊಟ್ಟಿದೆ. ಹಕ್ಕುಪತ್ರ ನಾವು ಸಿದ್ದಪಡಿಸಿದ್ದೇವೆ, ಅವರು ಈಗ ವಿತರಣೆ ಮಾಡುತ್ತಿದ್ದಾರೆ.
ನಮ್ಮ ಸರ್ಕಾರದಲ್ಲಿ ಮೂವತ್ತು ಸಾವಿರ ಕೋಟಿ ರೂ. ಎಸ್‌ಸಿಪಿಟಿಎಸ್‌ಪಿ ಹಣವಿತ್ತು. ಈಗ ಅದು 42 ಸಾವಿರ ಕೋಟಿ ರೂ. ಆಗಬೇಕಿತ್ತು, ಆದರೆ 28 ಸಾವಿರ ಕೋಟಿ ರೂ. ಆಗಿದೆ. ಇದರ ಅರ್ಥ ಬಿಜೆಪಿ ಸರ್ಕಾರ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದೆ. ಬಿಜೆಪಿ ಸುಳ್ಳು ಸೃಷ್ಟಿ ಮಾಡುವ ಮಾಡುವ ಫ್ಯಾಕ್ಟರಿ ಎಂದರು.
ನರೇಂದ್ರ ಮೋದಿಯವರಿಂದ ಬರಿ ಸುಳ್ಳು ಹೇಳಿಸುತ್ತಿದ್ದಾರೆ ಎಂದ ಸಿದ್ದರಾಮಯ್ಯ, ನನಗೆ ಮೋದಿ ಕಂಡರೆ ಭಯವಿಲ್ಲ ಆದರೆ ನನ್ನ ಕಂಡರೆ ಮೋದಿಗೆ ಭಯ. ನಾನು ಆರ್‌ಎಸ್‌ಎಸ್ ಟೀಕೆ ಮಾಡುತ್ತೇನೆ, ಸತ್ಯ ಹೇಳುತ್ತೇನೆ ಎನ್ನುವ ಭಯ. ಮೋದಿ ಈ ದೇಶದ ಪ್ರಧಾನಿ ಎನ್ನುವ ಗೌರವ ಇದೆ, ಭಯ ಯಾಕೆ ಬೇಕು? ಪ್ರಧಾನಿ ಎನ್ನುವುದನ್ನು ಬಿಟ್ಟರೆ ಅವರು ಒಬ್ಬ ಬಿಜೆಪಿ ನಾಯಕ. ಭಯ ಪಡುವ ಅಗತ್ಯ ಇಲ್ಲ. ಮೋದಿ ಭಾಷಣ ಮಾಡಿದ ತಕ್ಷಣ ಬಿಜೆಪಿ ಗೆಲ್ಲುವುದಿಲ್ಲ. ಸುಳ್ಳು ಹೇಳಿದರೆ ಜನ ನಂಬುವುದಿಲ್ಲ. ಮೋದಿ ಬಂದರೆ ಮೋಡಿ ಆಗುವುದಿಲ್ಲ. ಏನು ಅವರು ಭಾಷಣ ಮಾಡಿದ ಕಡೆಯೆಲ್ಲ ಬಿಜೆಪಿ ಗೆದ್ದಿದೆಯ? ಪಂಜಾಬ್‌ನಲ್ಲಿ ಏನಾಯ್ತು? ಹಿಮಾಚಲದಲ್ಲಿ ಏನಾಯ್ತು? ಎಲ್ಲವನ್ನೂ ಜನರೇ ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ | Varthur Prakash | ಯಾವುದೇ ಕಾರಣಕ್ಕೂ ಕೋಲಾರ ಸ್ಪರ್ಧೆಯಿಂದ ಹಿಂದೆ ಸರೀಬೇಡಿ: ಸಿದ್ದರಾಮಯ್ಯಗೆ ವರ್ತೂರು ಹೀಗೆ ಹೇಳಿದ್ಯಾಕೆ?