ಹುಬ್ಬಳ್ಳಿ: ಇಡೀ ವಿಶ್ವವು ಭಾರತದ ಕಡೆಗೆ ಬೆರಗುಗಣ್ಣಿನಿಂದ ನೋಡುತ್ತಿರುವುದಕ್ಕೆ ಇಲ್ಲಿರುವ ಯುವ ಶಕ್ತಿಯೇ ಕಾರಣ. ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗವಹಿಸಿ, ನೆರೆದಿದ್ದ ಬೃಹತ್ ಯುವಸ್ತೋಮವನ್ನುದ್ದೇಶಿಸಿ ಮಾತನಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, “ಮೂರು ಸಾವಿರ ಮಠ, ಸಿದ್ಧಾರೂಢ ಮಠದಂತಹ ಅನೇಕ ಮಠಗಳ ಕ್ಷೇತ್ರಕ್ಕೆ ನಮ್ಮ ನಮಸ್ಕಾರಗಳು. ರಾಣಿ ಚೆನ್ನಮನ ನಾಡು, ರಾಯಣ್ಣನ ಬೀಡು, ಈ ಪುಣ್ಯ ಭೂಮಿಗೆ ನನ್ನ ನಮಸ್ಕಾರಗಳು” ಎಂದರು. ಕರ್ನಾಟಕದ ಈ ಪ್ರದೇಶ ಸಂಸ್ಕೃತಿ ಹಾಗೂ ಜ್ಞಾನಕ್ಕೆ ಪ್ರಸಿದ್ಧಿ. ಇಲ್ಲಿನ ಅನೇಕ ಗಣ್ಯರಿಗೆ ಜ್ಞಾನಪೀಠದಿಂದ ಸನ್ಮಾನಿಸಲಾಗಿದೆ. ಈ ದೇಶಕ್ಕೆ ಒಬ್ಬರಿಗಿಂತ ಒಬ್ಬರು ಮಹಾನ್ ಸಂಗೀತಗಾರರನ್ನು ನೀಡಿದೆ. ಕುಮಾರ್ ಗಂಧರ್ವ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಭೀಮಸೇನ ಜೋಶಿ, ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ನಾನು ನಮಿಸುತ್ತೇನೆ ಎಂದು ಹೇಳಿದರು. ಕೆಲವೇ ದಿನಗಳ ಹಿಂದೆ ಕರ್ನಾಟಕ ಮಣ್ಣಿನ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ದೇಹಾಂತ್ಯ ಮಾಡಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
2023ರಲ್ಲಿ ರಾಷ್ಟ್ರೀಯ ಯುವದಿನ ವಿಶೇಷವಾದದ್ದು. ಇದು ಶಕ್ತಿಯ ಉತ್ಸವ ಒಂದೆಡೆಯಾದರೆ, ಸ್ವಾತಂತ್ರ್ಯದ 75ನೇ ವರ್ಷವೂ ಹೌದು. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ಈ ಉದ್ಘೋಷ ಭಾರತದ ಯುವಕರ ಅಮೃತ ಮಂತ್ರ. ಅಮೃತಕಾಲದಲ್ಲಿ ನಮ್ಮ ಕರ್ತವ್ಯಗಳ ಮೇಲೆ ಒತ್ತು ನೀಡಿ, ನಮ್ಮ ಕರ್ತವ್ಯಗಳನ್ನು ತಿಳಿದುಕೊಳ್ಳುತ್ತ ದೇಶವನ್ನು ಮುನ್ನಡೆಸಬೇಕಿದೆ.
ಸ್ವಾಮಿ ವಿವೇಕಾನಂದರಿಗೆ ಕರ್ನಾಟಕದೊಂದಿಗೆ ಅದ್ಭುತ ಸಂಬಂಧವಿತ್ತು. ಕರ್ನಾಟಕ ಹಾಗೂ ಈ ಪ್ರದೇಶಗಳಲ್ಲಿ ಅವರು ಸಂಚರಿಸಿದ್ದರು. ಬೆಂಗಳೂರಿಗೆ ಹೋಗುವ ಮುನ್ನ ಹುಬ್ಬಳ್ಳಿ-ಧಾರವಾಡಕ್ಕೂ ಆಗಮಿಸಿದ್ದರು. ಮೈಸೂರು ಮಹಾರಾಜರೂ, ಸ್ವಾಮಿ ವಿವೇಕಾನಂದರನ್ನು ಶಿಕಾಗೊ ಯಾತ್ರೆಗೆ ಕಳಿಸಲು ಸಹಾಯ ಮಾಡಿದವರು. ಪ್ರಾರಂಭದಿಂದಲೂ ನಮ್ಮ ಚೇತನಾ, ಆತ್ಮ ಒಂದೇ ಆಗಿತ್ತು ಎನ್ನುವುದಕ್ಕೆ ಸ್ವಾಮಿ ವಿವೇಕಾನಂದರು ಅಮರ ಉದಾಹರಣೆ. ಏಕ ಭಾರತ ಶ್ರೇಷ್ಠ ಭಾರತ ಎನ್ನುವುದಕ್ಕೂ ಇದೇ ಉದಾಹರಣೆ.
ಯಾವಾಗ ಯುವ ಶಕ್ತಿ ಇರುತ್ತದೆಯೋ, ಆಗ ಭವಿಷ್ಯದ ನಿರ್ಮಾಣ ಮಾಡುವುದು, ಭಾರತದ ನಿರ್ಮಾಣ ಮಾಡುವುದು ಅಷ್ಟೇ ಸುಲಭವಾಗುತ್ತದೆ. ಕರ್ನಾಟಕದ ಈ ಮಣ್ಣು ಇಂತಹ ಅನೇಕ ಮಹಾನ್ ಮಾನವರನ್ನು ಸೃಷ್ಟಿಸಿದೆ. ಇವರೆಲ್ಲರೂ ಅತ್ಯಂತ ಕಡಿಮೆ ವಯಸ್ಸಿನಲ್ಲೆ ಅಸಾಧಾರಣ ಕೆಲಸ ಮಾಡಿದ್ದಾರೆ. ಕಿತ್ತೂರು ಚೆನ್ನಮ್ಮ, ದೇಶದ ಪ್ರಮುಖ ಸ್ವಾತಂತ್ರ್ಯ ಸೇನಾನಿಯಲ್ಲೊಬ್ಬರು. ಚೆನ್ನಮ್ಮನ ಸೇನೆಯಲ್ಲಿದ್ದ ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ಸೈನ್ಯದ ಶಕ್ತಿಯನ್ನು ಕುಂದಿಸಿತ್ತು. ನಾರಾಯಣ ಮಹಾದೇವ ದೋನಿ ಕೇವಲ 14 ವರ್ಷದಲ್ಲೇ ದೇಶಕ್ಕೆ ಪ್ರಾಣಾರ್ಪಣೆ ಮಾಡಿದರು. ಯುವಕರ ಶೌರ್ಯ ಎಂಥದ್ದು ಎಂದು, ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ತೋರಿಸಿಕೊಟ್ಟರು. ಯುವಕರನ್ನು ಒಂದೇ ಕ್ಷೇತ್ರಕ್ಕೆ ಸೀಮಿತ ಮಾಡಲಾಗದು ಎನ್ನುವುದನ್ನು ತಮ್ಮ ಇಂಜಿನಿಯರಿಂಗ್ ಸಾಧನೆಗಳ ಮೂಲಕ ಸರ್. ಎಂ ವಿಶ್ವೇಶವರಯ್ಯನವರೂ ಸಾಬೀತುಪಡಿಸಿದರು. ಇಂದಿಗೂ ವಿಜ್ಞಾನದಿಂದ ಗಣಿತದವರೆಗೆ ಯಾವುದೇ ಸ್ಪರ್ಧೆ ನಡೆದರೆ ಭಾರತೀಯ ಯುವಕರ ಸಾಮರ್ಥ್ಯವು ವಿಶ್ವವನ್ನೇ ಚಕಿತಗೊಳಿಸುತ್ತದೆ.
ಈ ಸಮಯವು ನಮಗೆ ಅನೇಕ ಶತಮಾನಗಳ ನಂತರ ಲಭಿಸಿದೆ. ಇದಕ್ಕೆ ಕಾರಣ ನಮ್ಮ ಯುವ ಸಾಮರ್ಥ್ಯ. ಇಂದು ಭಾರತವು ಯುವಕರ ದೇಶ. ವಿಶ್ವದ ಅತಿ ದೊಡ್ಡ ಯುವಜನರು ನಮ್ಮ ದೇಶದಲ್ಲಿದ್ದಾರೆ. ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ. ಯುವಶಕ್ತಿಯ ಕಸನುಗಳೇ ಭಾರತದ ದಿಕ್ಕನ್ನು ಬದಲಿಸುತ್ತದೆ. ಯುವಶಕ್ತಿಯ ಬಯಕೆಗಳೇ ಭಾರತದ ಗುರಿಯನ್ನು ನಿರ್ಧರಿಸುತ್ತದೆ. ಯುವಶಕ್ತಿಯನ್ನು ನಮ್ಮ ಪರಿಶ್ರಮದಿಂದ ಸಾಕಾರಗೊಳಿಸಬೇಕಿದೆ. ನಮ್ಮ ಆಲೋಚನೆ, ದೃಷ್ಟಿಕೋನದಲ್ಲಿ ಯುವವಾಗಿರಬೇಕು ಎಂದರು.
ಇಂದು ಭಾರತವು ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿದ್ದು, ನಾವಿದನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯಬೇಕಿದೆ. ನಮಗೆ ಅನೇಕ ಅವಕಾಶಗಳಿವೆ. ಕೃಷಿ ಕ್ಷೇತ್ರದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಹೊಸ ಕ್ರಾಂತಿ ಉಂಟಾಗಲಿದೆ. ಇದರಿಂದ ಯುವಕರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.
ಕ್ರೀಡಾ ಕ್ಷೇತ್ರದಲ್ಲೂ ಭಾರತ ದೊಡ್ಡ ಶಕ್ತಿಯಾಗುವತ್ತ ಸಾಗುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದಲೇ ಇದು ಸಾಧ್ಯವಾಗುತ್ತಿದೆ. ಗ್ರಾಮವಾಗಲಿ, ನಗರವಾಗಲಿ, ಎಲ್ಲ ಕಡೆಯೂ ಯುವಕರ ಉತ್ಸಾಹ ಮೇರೆ ಮೀರಿದೆ. ಇದೇ ಶಕ್ತಿಯಿಂದಲೇ ನೀವೆಲ್ಲರೂ ಭವಿಷ್ಯದ ನಾಯಕರಾಗುತ್ತೀರಿ. ನೀವು ವಿಶೇಷ ಪೀಳಿಗೆ, ನಿಮಗೆ ವಿಶೇಷ ಗುರಿಯಿದೆ. ಭಾರತದ ಗುರುತನ್ನು ವಿಶ್ವದಲ್ಲಿ ಮೂಡಿಸುವ ಗುರಿ ನಿಮ್ಮ ಮುಂದಿದೆ. ಇಡೀ ವಿಶ್ವವೇ ಭಾರತದ ಕಡೆಗೆ ನೋಡುತ್ತಿದೆ. ಇದು ಭಾರತದ ಶತಮಾನ. ಅನೇಕ ಜಾಗತಿಕ ಹೂಡಿಕೆದಾರರು ಭಾರತದ ಯುವಕರ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | National Youth Festival | ಮೋದಿ ನೇತೃತ್ವದಲ್ಲಿ ಭಾರತ ಸಶಕ್ತ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ