Site icon Vistara News

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Neha Murder Case

ಧಾರವಾಡ: ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ (Neha Murder Case) ಕೊಲೆಯಾಗಿದ್ದಳು. ಪಾಗಲ್‌ ಪ್ರೇಮಿಯ ಕೃತ್ಯಕ್ಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿದೆ. ಆರೋಪಿಯನ್ನು ಎನ್‌ಕೌಂಟರ್ ಮಾಡಿ ಬಿಸಾಕಿ ಎಂದು ಆಕ್ರೋಶಗಳು ಕೇಳಿಬರುತ್ತಿವೆ. ಈ ನಡುವೆ ಘಟನೆ ಬಗ್ಗೆ ಆರೋಪಿ ಫಯಾಜ್‌ ತಾಯಿ ಮಮ್ತಾಜ್ ಪ್ರತಿಕ್ರಿಯಿಸಿದ್ದು, ಫಯಾಜ್‌ಗೆ ಶಿಕ್ಷೆ ಆಗಬೇಕೆಂದು ಕಣ್ಣೀರು ಹಾಕಿದ್ದಾರೆ.

ನನ್ನ ಮಗ ಫಯಾಜ್‌ ಮಾಡಿದ ಕೃತ್ಯಕ್ಕೆ ತಕ್ಕ ಶಿಕ್ಷೆ ಆಗಬೇಕು. ಆತನ ತಪ್ಪಿಗೆ ನಾನು ರಾಜ್ಯದ ಜನತೆಗೆ ಹಾಗೂ ನೇಹಾಳ ತಂದೆ-ತಾಯಿಗೂ ಕ್ಷಮೆಯಾಚಿಸುತ್ತೆನೆ. ಅವರಿಗೆ ಎಷ್ಟು ದುಃಖ ಆಗಿದ್ದೀಯೋ ಅಷ್ಟೇ ನೋವಾನ್ನು ನಾವು ಅನುಭವಿಸುತ್ತಿದ್ದೇವೆ. ಯಾವ ಮಕ್ಕಳು ತಪ್ಪು ಮಾಡಿದರೂ ತಪ್ಪೇ.. ನನ್ನ ಮಗ ಮಾಡಿದ ತಪ್ಪಿಗೆ ಈ ನೆಲದ ಕಾನೂನು ಏನು ಶಿಕ್ಷೆ ವಿಧಿಸುತ್ತೋ ಆ ಪ್ರಕಾರ ಶಿಕ್ಷೆ ಆಗಲಿ ಎಂದರು.

ಫಯಾಜ್‌ನಿಗೆ ಪ್ರಪೋಸ್‌ ಮಾಡಿದ್ದಳಾ ನೇಹಾ?

ನೇಹಾ ಹಾಗೂ ಫಯಾಜ್‌ ಪ್ರೀತಿ ಬಗ್ಗೆಯೂ ಮಮ್ತಾಜ್‌ ಪ್ರತಿಕ್ರಿಯಿಸಿದ್ದಾರೆ. ಫಯಾಜ್‌ ಓದಿನಲ್ಲಿ ಜಾಣನಾಗಿದ್ದ, ಜಿಮ್‌ ಬಾಡಿ ಬಿಲ್ಡರ್‌ನಲ್ಲಿ ಯೂನಿವರ್ಸಿಟಿ ಬ್ಲ್ಯೂ ಆಗಿದ್ದ. ಆತನಿಗೆ ಹಲವಾರು ಸನ್ಮಾನಗಳು ನಡೆಯುತ್ತಿದ್ದವು. ಇದರಿಂದ ಖುಷಿಯಾದ ನೇಹಾ ಫಯಾಜ್‌ ಕ್ಯಾಂಟಿನ್‌ನಲ್ಲಿದ್ದಾಗ ಆಕೆಯೇ ಫೋನ್‌ ನಂಬರ್‌ ಪಡೆದಿದ್ದಳು. ಅವಳೇ ಫಯಾಜ್‌ಗೆ ಪ್ರಪೋಸ್ ಮಾಡಿದ್ದಳು. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಫಯಾಜ್‌ ನನ್ನ ಬಳಿ ಹೇಳಿಕೊಂಡಿದ್ದ. ನೇಹಾ ಎಂಬಾಕೆ ನನ್ನ ತುಂಬಾ ಲೈಕ್‌ ಮಾಡುತ್ತಾಳೆ, ಪ್ರೀತಿ ಮಾಡುತ್ತಿದ್ದಾಳೆ ಎಂದಿದ್ದ. ಆದರೆ ನಾನು ಈ ಲವ್ ಎಲ್ಲ ಬೇಡ ಎಂದು ಹೇಳಿದ್ದೆ. ಆದರೆ ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಫಯಾಜ್‌ ಭವಿಷ್ಯದಲ್ಲಿ ಕೆಎಎಸ್ ಆಫೀಸರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತೆ. ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ, ಅವರಿಬ್ಬರೂ ಮದುವೆ ಆಗಬೇಕು ಎಂದುಕೊಂಡಿದ್ದರು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂದರು.

ಕೊಲೆ ಸುದ್ದಿ ಕೇಳಿ ಕುಸಿದು ಬಿದ್ದುಬಿಟ್ಟೆ

ಗುರುವಾರ ಸಂಜೆ ಪರಿಚಯಸ್ಥರು ಫೋನ್‌ ಮಾಡಿ ಟಿವಿ ನೋಡಲು ಹೇಳಿದ್ದರು. ಫಯಾಜ್‌ ಸಂಬಂಧ ಬ್ರೇಕಿಂಗ್‌ ನ್ಯೂಸ್‌ ಬರುತ್ತಿದೆ ಎಂದಿದ್ದರು. ಮಗನಿಗೆ ಏನಾಯಿತು ಎಂದು ಆತಂಕದಲ್ಲೇ ಟಿವಿ ನೋಡಿದಾಗ, ಫಯಾಜ್‌ ನೇಹಾಳನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿ ಬಂದಿತ್ತು. ಈ ಕೊಲೆ ಸುದ್ದಿ ಕೇಳಿ ನಾನು ಕುಸಿದು ಬಿದ್ದು ಬಿಟ್ಟೆ ಎಂದು ಫಯಾಜ್‌ ತಾಯಿ ಮಮ್ತಾಜ್‌ ಪ್ರತಿಕ್ರಿಯಿಸಿದರು.

ಇದು ಒನ್‌ಸೈಡ್‌ ಲವ್‌ ಅಲ್ಲ

ಸತ್ಯಾಸತ್ಯತೆ ಪರಿಶೀಲಿಸಿ ಅವನಿಗೆ ಶಿಕ್ಷೆ ನೀಡಬೇಕು. ಅವರು ಏನೇ ಶಿಕ್ಷೆ ಕೊಟ್ಟರೂ ಸಹ ನಾನು ಒಪ್ಪಿಕೊಳ್ಳುತ್ತೇನೆ. ತಪ್ಪು ಒಬ್ಬರಿಂದ ಆಗಲೂ ಸಾಧ್ಯವೇ ಇಲ್ಲ, ತಪ್ಪು ಇಬ್ಬರಲ್ಲೂ ಇರುತ್ತೆ. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು, ಅದು ಹೇಗೆ ಒನ್ ಸೈಡ್ ಲವ್ ಆಗುತ್ತೆ ಎಂದು ಪ್ರಶ್ನೆ ಮಾಡಿದರು.

ಇಬ್ಬರೂ ಕ್ಲಾಸ್ ಮೇಟ್ ಆಗಿದ್ದವರು, ಅವರಲ್ಲಿ ಏನು ನಡೆಯಿತು ಅದು ಗೊತ್ತಿಲ್ಲ. ಫೋನ್‌ನಲ್ಲಿ ಅವಳ ಜತೆ ಮಾತನಾಡಿದ ಎಲ್ಲ ರೆಕಾರ್ಡ್‌ಗಳಿವೆ. ಇದರ ಮೇಲೆ ಕಾನೂನು ಯಾವ ರೀತಿ ಕ್ರಮ ಕೈಗೊಳ್ಳುತ್ತೋ ತೆಗೆದುಕೊಳ್ಳಲಿ. ಇರುವೆಯನ್ನು ಸಾಯಿಸಿದ ಅವನು ಇಷ್ಟೊಂದು ಧೈರ್ಯ ಹೇಗೆ ಬಂತು ಎಂದು ನಮಗೆ ಗೊತ್ತಿಲ್ಲ. ಜಿಮ್ ಮಾಡಿ ಒಳ್ಳೆಯ ಬಾಡಿ ಇಟ್ಟುಕೊಂಡಿದ್ದ. ಅವಳ ಜತೆಗಿನ ಪ್ರೀತಿ-ಸ್ನೇಹದಿಂದಲೇ ಅವನು ಡಿಪ್ರೆಶನ್ ಹೋಗಿದ್ದ. ಊಟ ಸಹ ಸರಿಯಾಗಿ ಮಾಡುತ್ತಿರಲಿಲ್ಲ. ನಾವು ನೂರಾರು ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದೇವೆ, ಅವರು ತಪ್ಪು ಮಾಡಿದಾಗ ಹೊಡೆದು ಬುದ್ಧಿ ಹೇಳುತ್ತೇವೆ. ಆದರೆ ನನ್ನ ಮಗನೆ ಈಗ ತಪ್ಪು ಮಾಡಿದ್ದಾನೆ ಅದು ತಪ್ಪು ತಪ್ಪೇ. ಕಾನೂನು ಪ್ರಕಾರ ಏನು ಶಿಕ್ಷೆ ಆಗಬೇಕೋ ಅದು ಆಗಲಿ. ಒಬ್ಬನೇ ಮಗ ಎಂದು ಉತ್ತಮ ಶಿಕ್ಷಣ ಕೊಡಿಸಿದ್ದೆವು. ಅವನ ತಪ್ಪಿನಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version