ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣದಲ್ಲಿ (Neha Murder Case) ಜೈಲಲ್ಲಿ ಇರುವ ಆರೋಪಿ ಮೊಬೈಲ್‌ನಲ್ಲಿ ಇದ್ದ ಫೋಟೊವನ್ನು ಹರಿಬಿಟ್ಟವರು ಯಾರು? ರಾಜ್ಯ ಸರ್ಕಾರವೇ ಇದನ್ನು ಮಾಡಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ (ಏಪ್ರಿಲ್ 23) ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ, ಆರೋಪಿ ಫಯಾಜ್ ಪೊಲೀಸ್ ಕಸ್ಟಡಿಯಲ್ಲಿರುವಾಗ ಯಾರು ಹೇಗೆ ಫೋಟೋ ಲೀಕ್ ಮಾಡಲು ಸಾಧ್ಯ? ಸರ್ಕಾರವೇ ಇದನ್ನು ಮಾಡಿಸಿದೆ ಎಂದು ಆರೋಪಿಸಿದರು.
ಕುಟುಂಬದ ಬೇಡಿಕೆಯಂತೆ ತನಿಖೆ ನಡೆಸಲಿ
ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ. ಈ ಬಗ್ಗೆ ಆಕೆಯ ತಂದೆ, ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಂಜನ್ ಕುಟುಂಬದ ಬೇಡಿಕೆಯಂತೆ ತನಿಖೆ ನಡೆಸಬೇಕು ಎಂದು ಪ್ರಲ್ಹಾದ್ ಜೋಶಿ ಒತ್ತಾಯಿಸಿದರು.
ಮತ್ತೊಂದು ಹುಡುಗಿ ಮೇಲೆ ಹಲ್ಲೆ
ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹುಡುಗಿ ಮೇಲೆ ಹಲ್ಲೆ ನಡೆದಿದೆ. ಮತಾಂತರಕ್ಕೆ ಒಪ್ಪದಿದ್ದಾಗ ಯುವತಿಯನ್ನು ಮನಬಂದಂತೆ ಥಳಿಸಿದ್ದಾರೆ. ಹಿಂದೂ ನೆಲೆಗಟ್ಟಿನ ಹುಬ್ಬಳ್ಳಿಯಲ್ಲೇ ಹೀಗಾದರೆ ಹೇಗೆ? ಹಿಂದೂ ನೆಲೆಗಟ್ಟಿನ, ಹಿಂದೂ ಸಮಾಜ-ಸಂಘಟನೆ ಗಟ್ಟಿಯಾಗಿರುವ ಹುಬ್ಬಳ್ಳಿ ನೆಲದಲ್ಲೇ ಹೀಗಾಗಿರುವಾಗ ಇನ್ನು ರಾಜ್ಯದ ಬೇರೆಡೆ ಸ್ಥಿತಿ ಏನಾಗಿರಬೇಡ? ಎಂದು ಸಚಿವ ಜೋಶಿ ಆತಂಕ ವ್ಯಕ್ತಪಡಿಸಿದರು.
ತುಷ್ಟೀಕರಣ ಮಾಡುವವರನ್ನು ಮೊದಲು ಕಿತ್ತೊಗೆಯಬೇಕು
ತುಷ್ಟೀಕರಣ ರಾಜಕಾರಣ ಮಾಡುವವರನ್ನು ಮೊದಲು ಅಧಿಕಾರದಿಂದ ಕಿತ್ತು ಹಾಕಬೇಕು. ಇಲ್ಲದಿದ್ದರೆ ನಮ್ಮ ಮನೆಗಳಲ್ಲೂ ನಾವು ಹಿಂದೂ ಧರ್ಮ-ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು.
ನೇಹಾ ಕೊಲೆ ಪ್ರಕರಣ ಸಿಐಡಿ ಹೆಗಲಿಗೆ; ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಅವರ ಭೀಕರ ಕೊಲೆ (Neha Murder Case) ಪ್ರಕರಣದ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಲೆ ಆರೋಪಿ ಫಯಾಜ್‌ನನ್ನು (Fayaz) ಎನ್‌ಕೌಂಟರ್ ಮಾಡಬೇಕು ಎಂಬುದಾಗಿ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ ಅವರು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ಸಿಬಿಐ ತನಿಖೆಯಾಗಬೇಕು ಎಂಬುದಾಗಿ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಈಗ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸೋಮವಾರ (ಏಪ್ರಿಲ್ 22) ಶಿವಮೊಗ್ಗದಲ್ಲಿ ಹೇಳಿದ್ದಾರೆ.
“ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ. ಪ್ರಕರಣದ ಕುರಿತು ಕೂಲಂಕಷ ತನಿಖೆಯಾಗಲಿ ಎಂಬ ದೃಷ್ಟಿಯಿಂದ ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಿದ್ದೇವೆ” ಎಂಬುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪವೂ ಕೇಳಿಬಂದಿವೆ. ಅದರಲ್ಲೂ, ನೇಹಾ ಹಿರೇಮಠ ಪ್ರಕರಣವು ಚುನಾವಣೆ ಹೊತ್ತಿನಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಹಾಗಾಗಿ, ರಾಜ್ಯ ಸರ್ಕಾರವು ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
9 ಸಲ ಅಲ್ಲ 14 ಬಾರಿ ಇರಿದು ಕೊಂದ ಫಯಾಜ್
ವಿದ್ಯಾರ್ಥಿನಿ ನೇಹಾಳಿಗೆ ಪಾಗಲ್ ಫಯಾಜ್ 9 ಬಾರಿ ಅಲ್ಲ, 14 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಇದಕ್ಕೂ ಮೊದಲು, ನೇಹಾ ಹಿರೇಮಠ್‌ಗೆ ಫಯಾಜ್ 9 ಬಾರಿ ಚಾಕು ಇರಿದು ಕೊಲೆ ಮಾಡಿದ್ದ ಎಂಬುದಾಗಿ ಹೇಳಲಾಗಿತ್ತು. ಆದರೆ, ಈಗ 14 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾಣೆ ಎಂದು ಮರಣೋತ್ತರ ವರದಿ ತಿಳಿಸಿದೆ. ಏಪ್ರಿಲ್ 19ರಂದು ಬಿವಿಬಿ ಕಾಲೇಜು ಆವರಣದಲ್ಲಿ ಭೀಕರವಾಗಿ ಕೊಲೆ ನಡೆದಿತ್ತು.
ಇದನ್ನೂ ಓದಿ: HD Kumaraswamy: ಜನರ ಕಣ್ಣಿಗೆ ಮಣ್ಣೆರಚಬೇಡಿ; ಮಂಡ್ಯಕ್ಕೆ ಕಾವೇರಿ ಗ್ಯಾರಂಟಿ ಕೊಡಿ: ಕಾಂಗ್ರೆಸ್‌ಗೆ ಎಚ್‌ಡಿಕೆ ಸವಾಲು
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ದಾಳಿ ಮಾಡಿದ್ದ ಫಯಾಜ್ ಕೇವಲ 30 ಸೆಕೆಂಡ್‌ಗಳಲ್ಲಿ 14 ಬಾರಿ ಇರಿದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನೇಹಾ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಪ್ರೀತಿ ನಿರಾಕರಿಸಿದ ನೇಹಾಳ ಹೃದಯಕ್ಕೆ ಮೊದಲು ಚಾಕು ಇರಿದ ಆತ, 30 ಸೆಕೆಂಡ್‌ಗಳಲ್ಲೇ 14 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕತ್ತಿನ ಬಳಿ ಚಾಕು ಇರಿಯುತ್ತಿದ್ದಂತೆ ರಕ್ತನಾಳ ಕತ್ತರಿಸಿದ್ದು, ಇದರಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಅತಿಯಾದ ರಕ್ತಸ್ರಾವದಿಂದ ನೇಹಾ ಹಿರೇಮಠ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.