Site icon Vistara News

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case in hubblli

ಹುಬ್ಬಳ್ಳಿ: ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣಕ್ಕೆ (Neha Murder Case) ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಈಗಾಗಲೇ ನೇಹಾ ಮನೆಗೂ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದು, ನೇಹಾ ತಂದೆ-ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ನಡುವೆ ಅನಾಮಧೇಯ ವ್ಯಕ್ತಿಗಳು ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಆತಂಕವನ್ನು ಹೊರಹಾಕಿದ್ದಾರೆ.

ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಆದರೆ ಮಗಳ ಹತ್ಯೆಯಾದ ಐದನೇ ದಿನ, ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ಮನೆಗೆ ಬಂದು ವಿಡಿಯೊ ಮಾಡಿಕೊಂಡು ಹೋಗಿದ್ದಾರೆ. ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದ ಎಂದು ತಿಳಿದು ಬಂದಿದೆ. ಇವತ್ತು ಕೆಲ ವ್ಯಕ್ತಿಗಳು ಯಾವುದೊ ಸಂಚು ಹಾಕಿದ್ದಾರೆ ಎಂಬ ಅನುಮಾನ ಬಂದಿದೆ. ಈ ವಿಷಯವನ್ನು ಪೊಲೀಸ್ ಆಯುಕ್ತರಿಗೆ ಹೇಳಿದ್ದೇವೆ, ಅವರು ಭದ್ರತೆ ಕೊಡುವುದಾಗಿ ಹೇಳಿದ್ದು, ಪೊಲೀಸರನ್ನು ನಿಯೋಜಿಸಿದ್ದಾರೆ ಎಂದು ನಿರಂಜನ್‌ ತಿಳಿಸಿದ್ದಾರೆ.

ಇನ್ನೂ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮಿಂದಲೂ ಕೆಲ ಮಾಹಿತಿ ಕೇಳಿದ್ದಾರೆ. ಪ್ರಕರಣದ ತನಿಖೆಗೆ ನಮ್ಮ ಸಹಕಾರ ಕೇಳಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ. ಸದ್ಯ ತನಿಖೆ ವಿವರಗಳನ್ನು ಹೇಳದಿರುವಂತೆ ಮನವಿ ಮಾಡಿದ್ದಾರೆ. ಸಿಐಡಿ ವರದಿ ಕೊಟ್ಟ ನಂತರ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: Self Harming : ಬೆಂಗಳೂರಲ್ಲಿ ರೈಲಿಗೆ ಸಿಲುಕಿ ಮೂವರು ಸಾವು; ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳು

ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಸಿಐಡಿ ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಗುರುವಾರ (ಏ.25) ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದರು. ಸಿಐಡಿ ಎಡಿಜಿಪಿ ಬಿಕೆ‌ ಸಿಂಗ್, ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ಸುಮಾರು ಒಂದು ಗಂಟೆಗಳ ಸುದೀರ್ಘ ವಿಚಾರಣೆಯನ್ನು ನಡೆಸಿದರು. ನಂತರ ನೇಹಾ ತಂದೆ ನಿರಂಜನ್‌ ಹಿರೇಮಠ್‌, ತಾಯಿ ಗೀತಾರಿಂದ ಹೇಳಿಕೆಯನ್ನು ಪಡೆದರು.

ಇನ್ನೂ ನೇಹಾ ಹತ್ಯೆ ಪ್ರಕರಣ (Neha Murder Case) ಸಂಬಂಧ ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಆರು ದಿನಗಳ‌ ಕಾಲ‌ ಕಸ್ಟಡಿಗೆ ನೀಡಿದ ಹಿನ್ನೆಲೆ ಆರೋಪಿಯನ್ನು ಧಾರವಾಡದ ಕಾರಾಗೃಹದಿಂದ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು. ಇದೀಗ ನೇಹಾ ತಂದೆ- ತಾಯಿಯಿಂದ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿರುವ ಸಿಐಡಿ ಅಧಿಕಾರಿಗಳು 1 ಗಂಟೆಯ ವಿಚಾರಣೆ ನಡೆಸಿ ವಾಪಸ್‌ ಆದರು.

ರಹಸ್ಯ ಸ್ಥಳದಲ್ಲಿ ಆರೋಪಿ ಫಯಾಜ್‌ ವಿಚಾರಣೆ

ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಧಾರವಾಡದಲ್ಲಿ ಬೀಡು ಬಿಟ್ಟಿದೆ. ಆರೋಪಿ ಫಯಾಜ್‌ನನ್ನು ಧಾರವಾಡದ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ಅಧಿಕಾರಿಗಳು ನಿನ್ನೆ ಬುಧವಾರ ಸ್ಥಳ ಮಹಜರು ಜತೆಗೆ ಪ್ರಾಥಮಿಕ ಹಂತದ ವಿಚಾರಣೆ ಪೂರ್ಣಗೊಳಿಸಿದ್ದಾರೆ.

ಸ್ಥಳ ಮಹಜರು ವೇಳೆ ಕಾಲೇಜು ಬಳಿ ಎವಿಬಿಪಿ ಪ್ರತಿಭಟನೆ ನಡೆಸಿತ್ತು. ಇದೀಗ ಧಾರವಾಡದಲ್ಲಿಯೂ ಪ್ರತಿಭಟನೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಫಯಾಜ್‌ನನ್ನು ರಹಸ್ಯ ಸ್ಥಳದಲ್ಲಿಟ್ಟಿದ್ದಾರೆ. ಫಯಾಜ್‌ ನೇಹಾಳನ್ನು ಹತ್ಯೆ ಮಾಡಲು ಧಾರವಾಡದಲ್ಲೇ ಚಾಕು ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಾಕು ಖರೀದಿಸಿದ ಸ್ಥಳ, ಸ್ನೇಹಿತರ ಭೇಟಿಯಾದ ಸ್ಥಳಗಳಿಗೆ ಸಿಐಡಿ ಟೀಂ ಭೇಟಿ ನೀಡುವ ಸಾಧ್ಯತೆ ಇದೆ.

ಏನಿದು ನೇಹಾ ಹತ್ಯೆ ಪ್ರಕರಣ?

ಪ್ರೀತಿಸಲು‌ ನಿರಾಕರಿಸಿದಳು (Refusal to love) ಎಂಬ ಕಾರಣಕ್ಕಾಗಿ ಪಾಗಲ್‌ ಪ್ರೇಮಿ ಫಯಾಜ್‌ ಎಂಬಾತ ಕಾರ್ಪೋರೇಟರ್‌ ಮಗಳನ್ನು ಭೀಕರವಾಗಿ ಕೊಲೆ (Stab wound) ಮಾಡಿದ್ದ. ಚಾಕುವಿನಿಂದ 9 ಬಾರಿ ಇರಿದು (Murder Case) ಕೊಂದು ಎಸ್ಕೇಪ್‌ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು (Hubballi BVB College) ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.

ನೇಹಾ ಹಿರೇಮಠ ಹುಬ್ಬಳ್ಳಿಯ ಬಿವಿಬಿ‌ ಕಾಲೇಜಿನಲ್ಲಿ ಓದುತ್ತಿದ್ದಳು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಆರೋಪಿ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಆದರೆ, ನೇಹಾ ನಿರಾಕರಣೆ ಮಾಡುತ್ತಲೇ ಬಂದಿದ್ದಳು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಆತ ಏ.18ರ ಗುರುವಾರ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ. ಪುನಃ ಆಕೆ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ, ಆದರೆ ನೇಹಾ ಪ್ರೀತಿಸಲು‌ ನಿರಾಕರಿಸಿದ್ದಾಳೆ.

ಹೀಗಾಗಿ ಮೊದಲೇ ನಿರ್ಧರಿಸಿ ಬಂದಿದ್ದ ಆರೋಪಿ ಫಯಾಜ್‌ ಏಕಾಏಕಿ ನೇಹಾಳಿಗೆ ಕಾಲೇಜು ಕ್ಯಾಂಟೀನ್‌ನಲ್ಲಿಯೇ ಚಾಕುವಿನಿಂದ ಇರಿದಿದ್ದ. ಆತನಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ನೇಹಾಳನ್ನು ಹಿಡಿದುಕೊಂಡ ಪಾಗಲ್‌ ಪ್ರೇಮಿ, ಮನಬಂದಂತೆ ಚಾಕುವಿನಿಂದ ಇರಿದಿದ್ದ. ಒಟ್ಟು ಒಂಭತ್ತು ಬಾರಿ ಚಾಕುವಿನಿಂದ ಚುಚ್ಚಿದ್ದರಿಂದ ನೇಹಾಳಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅಲ್ಲಿದ್ದವರು ಕಿಮ್ಸ್ ಆಸ್ಪತ್ರೆಗೆ ಆಕೆಯನ್ನು ರವಾನೆ ಮಾಡಿದ್ದರು. ಆದರೆ, ಅಷ್ಟರಲ್ಲಾಗಲೇ ನೇಹಾ ಮೃತಪಟ್ಟಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version