ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಲು ಟಿಕೆಟ್ ಸಿಗದೆ ಇರುವುದರಿಂದ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ (KS Eshwarappa) ಅವರಿಗೆ ಬೇಸರ ಆಗಿರಬಹುದು. ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Pralhad Joshi) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಈಶ್ವರಪ್ಪ ಅವರ ಜತೆ ಪಕ್ಷದ ರಾಷ್ಟ್ರೀಯ ನಾಯಕರು (National leaders) ಮತ್ತು ಸ್ಥಳೀಯ ನಾಯಕರು ಮಾತುಕತೆ ನಡೆಸಿ ಬೇಸರ ದೂರ ಮಾಡಲಿದ್ದಾರೆ ಎಂದು ತಿಳಿಸಿದರು.
ಈಶ್ವರಪ್ಪ ಅವರು ಅತ್ಯಂತ ಹಿರಿಯ ನಾಯಕರು. ನನಗಿಂತ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದ್ದವರು. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅನ್ಯ ಯೋಚನೆ ಮಾಡಲಾರರು ಎಂದು ಜೋಶಿ ಹೇಳಿದರು. ಈಶ್ವರಪ್ಪ ಅವರನ್ನು ಸದ್ಯದಲ್ಲೇ ನಾನೂ ಭೇಟಿ ಮಾಡಿ ಮಾತನಾಡುವೆ. ಅವರ ಮನವೊಲಿಸುವ ವಿಶ್ವಾಸವಿದೆ. ಪಕ್ಷದ ಹಿರಿಯ ನಾಯಕರಾಗಿ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಸಚಿವ ಜೋಶಿ ತಿಳಿಸಿದರು.
ಟಿಕೇಟ್ ಸಿಗದೇ ಇದ್ದಾಗ ಸಹಜವಾಗಿಯೇ ಎಲ್ಲರಿಗೂ ಬೇಸರ ಆಗುತ್ತದೆ. ಹಾಗಾಗಿ ಪರ-ವಿರೋಧ ಅಭಿಪ್ರಾಯ ಸಾಮಾನ್ಯವಾಗಿರುತ್ತದೆ. ಆದರೆ, ಪಕ್ಷದ ಹೈಕಮಾಂಡ್ ಅದೆಲ್ಲವನ್ನು ಸರಿಪಡಿಸುತ್ತದೆ ಎಂದು ಹೇಳಿದರು.
ವಿಚಾರಧಾರೆಗೆ ಬದ್ಧತೆ ಇರುವ ನಾಯಕ ಈಶ್ವರಪ್ಪ
ಕಲಬುರಗಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಈಶ್ವರಪ್ಪನವರು ನಮ್ಮ ಪಕ್ಷದ ಅತ್ಯಂತ ಹಿರಿಯರು. ವಿಚಾರಕ್ಕೆ, ವಿಚಾರಧಾರೆಗೆ ಅತ್ಯಂತ ಬದ್ಧತೆಯುಳ್ಳವರು. ನಮ್ಮ ರಾಷ್ಟ್ರೀಯ ನಾಯಕರು, ನಾವೆಲ್ಲರು ಮಾತುಕತೆ ಮೂಲಕ ಸರಿಪಡಿಸುತ್ತೇವೆ, ಅಸಮಾಧಾನವಾದ ಎಲ್ಲಾ ಕಡೆ ಸರಿಪಡಿಸುತ್ತೇವೆ ಎಂದರು.
ʻಗೆಲ್ಲುವ ಪಕ್ಷದಲ್ಲಿ ಅಪೇಕ್ಷಿತರು, ಆಕಾಂಕ್ಷಿಗಳು ಜಾಸ್ತಿ ಇರ್ತಾರೆ. ಒಂದೆರಡು ದಿನ ಸಣ್ಣ ಪುಟ್ಟ ಅಸಮಾಧಾನಗಳು ಇರ್ತವೆ, ಅವುಗಳನ್ನು ಸರಿಪಡಿಸುತ್ತೇವೆ. ಬಿಜೆಪಿ ಒಂದು ಸಂಘಟನಾತ್ಮಕ ಇರುವ ಪಾರ್ಟಿ. ಮುಂದೆ ನಾವು ಎಲ್ಲರನ್ನು ಮಾತುಕತೆ ಮೂಲಕ ಸರಿ ಮಾಡುತ್ತೇವೆʼ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ʻʻಸಮಾಧಾನ, ಅಸಮಾಧಾನ ಇದ್ದವರದ್ದು ಎಲ್ಲರದ್ದೂ ಒಂದೇ ಧ್ಯೇಯ. ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎನ್ನುವುದು. ಹೀಗಾಗಿ ಅವರನ್ನು ಸಮಾಧಾ ಮಾಡುವುದು ಕಷ್ಟದ ಕೆಲಸವಲ್ಲʼʼ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ : KS Eshwarappa : ಶಿವಮೊಗ್ಗದಲ್ಲಿ ಪಕ್ಷೇತರನಾಗಿ ಸ್ಪರ್ಧೆ; ಬಂಡಾಯ ಸಾರಿದ ಈಶ್ವರಪ್ಪ
ಏನಿದು ಈಶ್ವರಪ್ಪ ಬಂಡಾಯ ಪ್ರಕರಣ?
ಕೆ.ಎಸ್. ಈಶ್ವರಪ್ಪ ಅವರು ಹಾವೇರಿ ಕ್ಷೇತ್ರದಿಂದ ಪುತ್ರ ಕೆ.ಇ ಕಾಂತೇಶ್ ಅವರಿಗೆ ಟಿಕೆಟ್ ಬಯಸಿದ್ದರು. ಆದರೆ, ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟಿದೆ. ಇದರಿಂದ ನಿರಾಸೆಗೊಂಡಿರುವ ಕೆ.ಎಸ್. ಈಶ್ವರಪ್ಪ್ ಅವರು ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.