Site icon Vistara News

Road Accident: ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಸ್ಪಾಟ್‌ ಡೆತ್‌; ಕಿತ್ತು ಬಂತು ಸವಾರನ ಕಣ್ಣು ಗುಡ್ಡೆ

Road Accident

ಹುಬ್ಬಳ್ಳಿ: ಹಿಟ್ ಆ್ಯಂಡ್ ರನ್‌ಗೆ (Hit and Run case) ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದುರ್ಮರಣ (Road Accident) ಹೊಂದಿದ್ದಾರೆ. ಹುಬ್ಬಳ್ಳಿ ಹೊರವಲಯದ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಆನಂದ ನಾಯಕ್ಕರ್ (34), ಈರಣ್ಣ ಬಡಿಗೇರ (35) ಮೃತ ದುರ್ದೈವಿಗಳು. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಸವಾರರೊಬ್ಬರ ಕಣ್ಣುಗುಡ್ಡೆಯೇ ಹೊರಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹುಬ್ಬಳ್ಳಿಯ ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಹಿಟ್ ಆ್ಯಂಡ್ ರನ್‌ ಕೇಸ್‌ ದಾಖಲಿಸಿಕೊಂಡಿದ್ದು, ಅಪಘಾತ ಮಾಡಿ ಎಸ್ಕೇಪ್‌ ಆಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Road Accident: ಟ್ರಕ್‌ ಹರಿದು ಅಪರಿಚಿತ ಸಾವು; ಕುಡಿದ ಮತ್ತಿನಲ್ಲಿ ವಾಹನದಡಿ ಮಲಗಿದ್ದೇ ಯಡವಟ್ಟು

ಮೇಕೆ ಮೇಯಿಸುತ್ತಿದ್ದ ದಂಪತಿ ರೈಲಿಗೆ ಸಿಲುಕಿ ಸಾವು

ದೊಡ್ಡಬಳ್ಳಾಪುರ: ರೈಲ್ವೆ ಹಳಿ (Railway Track) ಮೇಲೆ ಮೇಕೆಗಳನ್ನು ಮೇಯಿಸುತ್ತಿದ್ದ ದಂಪತಿ, ವೇಗವಾಗಿ ಬಂದ ರೈಲಿಗೆ ಸಿಕ್ಕಿಹಾಕಿಕೊಂಡು (Train Accident) ಬಲಿಯಾಗಿದ್ದಾರೆ. ಈ ಭೀಕರ ದುರಂತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Doddaballapura news) ತಾಲೂಕಿನ ಕೆಳಗಿನ ನಾಯಕರಂಡಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಚಂದ್ರ ನಾಯಕ್ ಮತ್ತು ಜಯಬಾಯಿ ಮೃತ ದಂಪತಿಗಳು. ಮೇಕೆ ಮೇಯಿಸಲು ಹೋಗಿದ್ದ ವೇಳೆ ಗಂಡ ರೈಲ್ವೆ ಹಳಿ ಮೇಲೆ ಹೋಗಿದ್ದರು. ಈ ವೇಳೆ ರೈಲು ಬರುತ್ತಿದ್ದುದನ್ನು ಕಂಡು ಕಂಡು ಪತ್ನಿಯು ಗಂಡನ ರಕ್ಷಣೆಗೆ ಧಾವಿಸಿದ್ದಳು. ವೇಗವಾಗಿ ಬಂದ ರೈಲು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಘಾತ; ಡಿವೈಡರ್‌ಗೆ ಕಾರು ಡಿಕ್ಕಿಯಾಗಿ 2 ಸಾವು

ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾಗಿ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಘಟಿಸಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯ ನಡುವಿನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಬಗಲಕುಂಟೆ ನಿವಾಸಿಗಳಾದ ಕಲಾ (40), ಪುತ್ರ ದರ್ಶನ್ (21) ಮೃತಪಟ್ಟವರು.

ಕಾರಿನ ಹಿಂಬದಿಯಲ್ಲಿದ್ದ ಪುತ್ರಿ ಮೇಘನ ಹಾಗೂ ಅಳಿಯ ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಿಮ್ಸ್ ಶವಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version