ಹುಬ್ಬಳ್ಳಿ: ಎಸ್‌ಸಿಎಸ್‌ಟಿ ಮೀಸಲಾತಿ(SCST Reservation), ಪಂಚಮಸಾಲಿ ಮೀಸಲಾತಿ, ಒಕ್ಕಲಿಗ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರವು ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ವಿಚಾರದಲ್ಲಿ ಸರ್ಕಾರ ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ. ಮೂಗಿಗೆ ಸವರಿದ್ದರೆ ಕನಿಷ್ಟ ವಾಸನೆಯಾದರೂ ನೋಡಬಹುದಿತ್ತು. ಬೊಮ್ಮಾಯಿ ಸರ್ಕಾರ ತೆಲೆಗೆ ಸವರಿದೆ, ಅದನ್ನು ಹೇಗೆ ತಿನ್ನುವುದು? ಎಂದಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ ಸರಿಯಾಗಿ ಹೇಳಿದ್ದಾರೆ, ಅವರಿಗೆ ಧನ್ಯವಾದ ಹೇಳುತ್ತೇನೆ. ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ನೀಡಿದ ಶೇಕಡಾ 10ರ ಮೀಸಲಾತಿಯಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಸುಪ್ರೀಂಕೋರ್ಟ್ ಇದನ್ನು ಹೇಗೆ ಒಪ್ಪುತ್ತದೆ? ಸಂಪುಟದ ತಿರ್ಮಾನ ಅದೇಶದ ಬಳಿಕ ಯಾರಾದರೂ ಕೋರ್ಟಿಗೆ ಹೋದರೆ ಮುಗಿಯಿತು. ಮೀಸಲಾತಿ ಜಾರಿ ಆಗುವುದಿಲ್ಲ.
ಎಸ್‌ಸಿ- ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದರು, ಮುಂದೆ ಜಾರಿ ಆಗಿಲ್ಲ. ಇನ್ನು ೯೦ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದಿಲ್ಲ. ಇವರ ಕೈಯಲ್ಲಿ ಅಧಿಕಾರವೇ ಇರುವುದಿಲ್ಲ. ಇನ್ನು ಮೀಸಲಾತಿ ಹೇಗೆ ಜಾರಿ ಮಾಡುತ್ತಾರೆ?
ಕೊಟ್ಟ ಕುದುರೆಯನ್ನು ಏರದೆ, ಮತ್ತೊಂದು ಕುದುರೆ ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಪಂಚಮಸಾಲಿ ನಾಯಕರು ಎನ್ನಿಸಿಕೊಂಡವರು ಎಲ್ಲಿ ಹೋದರು? ಸರ್ಕಾರದ ಬಗ್ಗೆ ಏಕೆ ಮೌನವಾಗಿದ್ದಾರೆ? ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್ ಏಕೆ ಮಾತನಾಡುತ್ತಿಲ್ಲ? ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ವರಿಗೆ ಸಮಪಾಲು- ಸಮಬಾಳು ಎಂದರು.
ಇದನ್ನೂ ಓದಿ | SC ST Reservation | ಎಸ್‌ಸಿ ಎಸ್‌ಟಿ ಹೊಸ ಮೀಸಲಾತಿಯ ರೋಸ್ಟರ್ ಪ್ರಕಟ; ನೇಮಕಾತಿಗೆ ದಾರಿ ಸುಗಮ