Site icon Vistara News

Self Harming: ಆನ್‌ಲೈನ್‌ ಗೇಮಿಂಗ್‌ ಚಟ; ಹಣ ಕಳೆದುಕೊಂಡ ವಿದ್ಯಾರ್ಥಿ ಸೂಸೈಡ್‌

Self Harming

ಹುಬ್ಬಳ್ಳಿ: ಆನ್‌ಲೈನ್‌ ಗೇಮಿಂಗ್‌ನಲ್ಲಿ (Self Harming) ಹಣ ಕಳೆದುಕೊಂಡ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ (Student Death) ಶರಣಾಗಿದ್ದಾನೆ. ಹುಬ್ಬಳ್ಳಿಯ ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ರಾಕೇಶ್ ಜಂಬಲದಿನ್ನಿ (21) ಮೃತ ದುರ್ದೈವಿ.

ಬಿಇ 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಕೇಶ್‌ ಆನ್‌ಲೈನ್ ಗೇಮ್‌ ಚಟ ಹೊಂದಿದ್ದ. ದಿಢೀರ್ ಹಣ‌ ಗಳಿಸುವ ಆಸೆಗೆ ಬಿದ್ದ ರಾಕೇಶ್‌ ಆನ್‌ಲೈನ್‌ ಗೇಮ್‌ಗೆ ಸಾವಿರಾರು ರೂ. ಹಾಕಿ ಎಲ್ಲವನ್ನೂ ಕಳೆದುಕೊಂಡಿದ್ದ. ಇದರಿಂದ ಮನನೊಂದ ರಾಕೇಶ್‌ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಸಾಲಭಾದೆ ತಾಳಲಾರದೇ ರೈತ ಆತ್ಮಹತ್ಯೆ

ಸಾಲಭಾದೆ ತಾಳಲಾರದೆ ರೈತರೊಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹನುಮಂತ ಭೀಮಪ್ಪ ಮುರನಾಳ (55) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವರು. ಬಾಗಲಕೋಟೆಯ ಗುಳೇದಗುಡ್ಡ ತಾಲೂಕಿನ ಲಕ್ಕಸಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಗಳವಾರ ಜಮೀನಿನಲ್ಲಿ ವಿಷ ಸೇವಿಸಿದ್ದ ಹನುಮಂತರನ್ನು ಕುಟುಂಬಸ್ಥರು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರೈತ ಎರಡೂವರೆ ಎಕರೆ ಸ್ವಂತ ಜಮೀನು ಹೊಂದಿದ್ದರು. 2 ಎಕರೆ ಜಮೀನಿನಲ್ಲಿ ಲಾವಣಿ ಮಾಡುತ್ತಿದ್ದರು. ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Road Accident : ಮಂಡ್ಯದಲ್ಲಿ ಜವರಾಯನ ಅಟ್ಟಹಾಸ; ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸಾವು

ವಿದ್ಯಾರ್ಥಿನಿ ಆತ್ಮಹತ್ಯೆ; ಈಕೆ ಜೀವ ತೆಗೆದುಕೊಳ್ಳುವಂಥದು ಏನಾಗಿತ್ತು?

ಉಡುಪಿ: ಮಣಿಪಾಲದ ಹೆರ್ಗದಲ್ಲಿ ವೈಯಕ್ತಿಕ ಕಾರಣಕ್ಕೆ ಚಾರ್ಟರ್ಡ್ ಅಕೌಂಟೆಂಟ್‌ (chartered accountant) ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Student Self Harming) ಮಾಡಿಕೊಂಡಿದ್ದಾರೆ. ಕೌಟುಂಬಿಕ ಅಸೌಖ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಚಿಕ್ಕಮಗಳೂರು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡವರು. ಇವರು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದರು. ಬಾಡಿಗೆ ಮನೆಯ ರೂಮ್‌ನಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಕೊಪ್ಪ ಹರಂದೂರು ಗ್ರಾಮದ ಮಹೇಶ್ ಎನ್ನುವವರ ಮಗಳಾಗಿದ್ದಾರೆ. ಮಹೇಶ್‌ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಹಿನ್ನಲೆಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆರ್ಗ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಡ್ಡಿ ಬನಿಯನ್‌ ಗ್ಯಾಂಗ್‌ ಸೆರೆ

ಮಂಗಳೂರು: ಸರಣಿ ದರೋಡೆ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಪೊಲೀಸರು ಚೆಡ್ಡಿ ಬನಿಯನ್ ಗ್ಯಾಂಗ್ (Chaddi Baniyan Gang)​ ಸದಸ್ಯರನ್ನು ಬಂಧಿಸಿದ್ದಾರೆ. ಮಂಗಳೂರಿನ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಡ್ಡಿ, ಬನಿಯನ್ ಗ್ಯಾಂಗ್​ಗೆ ಸೇರಿದ ಮಧ್ಯಪ್ರದೇಶದ ನಾಲ್ಕು ಜನ ದರೋಡೆಕೋರರ ಬಂಧವಾಗಿದೆ. ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಬಂಧನಕ್ಕೆ ಒಳಗಾದವರು.

ಇಂದು ರಾತ್ರಿ ವೃದ್ಧ ದಂಪತಿಗಳಿದ್ದ ಮನೆಗೆ ಕನ್ನ ಹಾಕಿದ್ದ ಈ ತಂಡ ದರೋಡೆ ಮಾಡಿತ್ತು. ವೃದ್ಧ ದಂಪತಿಗೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿಗಳಿಂದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦00 ರೂಪಾಯಿ ನಗದು ಹಣವನ್ನು ದರೋಡೆ ಮಾಡಿದ್ದರು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್​​ನಲ್ಲಿ ದರೋಡೆಕೋರರರು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಬಳಿಕ ಬಸ್ ಫಾಲೋ ಮಾಡಿ ಬಂಧಿಸಿದ್ದರು.

ಏನಾಗಿತ್ತು ದರೋಡೆ?

ಮಂಗಳೂರಿನಲ್ಲಿ (Mangalore news) ಕಮಿಷನರೆಟ್ ವ್ಯಾಪ್ತಿಯಲ್ಲಿ ಖತರ್ನಾಕ್ ಚಡ್ಡಿ ಗ್ಯಾಂಗ್ (Chaddi gang) ತನ್ನ ಬಾಲ ಬಿಚ್ಚಿದೆ. ಮಂಗಳೂರು ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಮತ್ತೊಂದು ದರೋಡೆ (Robbery Case) ನಡೆದಿದ್ದು, ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಲಾಗಿದೆ.

ವಿಕ್ಟರ್ ಮತ್ತು ಪೆಟ್ರೀಷಾ ದಂಪತಿ ಹಲ್ಲೆಗೊಳಗಾದವರು. ರಾತ್ರಿ 2 ಗಂಟೆ ಹೊತ್ತಿಗೆ ಕಿಟಕಿಯ ಸರಳು ಕತ್ತರಿಸಿ ಈ ಚಡ್ಡಿ ಗ್ಯಾಂಗ್‌ ದಂಪತಿಯ ಮನೆಗೆ ನುಗ್ಗಿದೆ. ಪ್ರತಿರೋಧಿಸಿದ ವೃದ್ಧ ದಂಪತಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು ಲೂಟಿ ಮಾಡಿದೆ. 4 ಜನ ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿತ್ತು.

ಘಟನೆಯಲ್ಲಿ ವಿಕ್ಟರ್ ಅವರಿಗೆ ಗಂಭೀರ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿದ್ದ ಕಾರನ್ನು ಕೂಡ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಡ್ಡಿ ಟಿಶರ್ಟ್‌ ಧರಿಸಿ ಬರುವ ಈ ಗ್ಯಾಂಗ್‌ನಲ್ಲಿ 4-5 ಜನರಿದ್ದಾರೆ. ಒಬ್ಬಾತ ರಸ್ತೆಯ ಬದಿಯಲ್ಲಿ ಅವಿತು ಕೂತು ಒಳಗಿದ್ದವರಿಗೆ ಸಿಗ್ನಲ್‌ ಕೊಟ್ಟರೆ, ಇನ್ನ ಮೂವರು ಒಳಗೆ ನುಗ್ಗಿ ಕಳವು, ದರೋಡೆ ಮಾಡುತ್ತಾರೆ ಎಂದು ಗೊತ್ತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version