| ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಕಳೆದ ಎರಡು ದಶಕಗಳಲ್ಲಿ ಹಲವು ಹೊಸ ಮಂದಿರಗಳ ನಿರ್ಮಾಣದ ಮೂಲಕ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಪರಿವರ್ತನೆಯಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇದೀಗ ಮತ್ತೊಂದು ವಿಶಿಷ್ಟ ದೇವಾಲಯ ಗಮನ ಸೆಳೆಯುತ್ತಿದೆ. ತಾಲೂಕಿನ ಪಾಲಿಕೊಪ್ಪ ಬಳಿ ಪಿ.ಬಿ. ರಸ್ತೆಗೆ ಹೊಂದಿಕೊಂಡು ನಿರ್ಮಾಣವಾಗಿರುವ ಶಿವ ದೇವಾಲಯ (Shiva Temple) ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಲವಾರು ಸಂತ ಮಹಾಂತರು ಆಗಿ ಹೋಗಿರುವ ಹುಬ್ಬಳ್ಳಿಯಲ್ಲಿ ಭಕ್ತಿ ಸುಧೆ ಹರಿಸಲು ಹೊಸ ಶಿವ ದೇವಾಲಯ ಸಜ್ಜುಗೊಂಡಿದೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಮತ್ತು ಎಂ.ಡಿ ಡಾ. ಆನಂದ ಸಂಕೇಶ್ವರ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಫೆ.22ರಂದು ನೆರವೇರಲಿದೆ.
ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರ ಪಾರ್ಕ್‌ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಇಸ್ಕಾನ್ ಟೆಂಪಲ್, ಐತಿಹಾಸಿಕ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನ… ಹೀಗೆ ಐತಿಹಾಸಿಕ ಹಾಗೂ ನವ್ಯ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಂದ ಹೆಸರುವಾಸಿಯಾಗಿರುವ ಹುಬ್ಬಳ್ಳಿ -ಧಾರವಾಡ ಇದೀಗ ಮತ್ತೊಂದು ಭವ್ಯ ಮಂದಿರದ ಮೂಲಕ ಭಕ್ತರ ಸುಕ್ಷೇತ್ರವಾಗಿ ಹೊರಹೊಮ್ಮುತ್ತಿದೆ.
ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಶಿವ ದೇವಸ್ಥಾನವು ಕಣ್ಮನ ಸೆಳೆಯುತ್ತಿದೆ. ಶಿವನು ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾದೇವನಾಗಿದ್ದಾನೆ. ಅಂತಹ ಶಿವನ ಭವ್ಯ ಮಂದಿರ ಇದೀಗ ಹುಬ್ಬಳ್ಳಿ ಸಮೀಪದಲ್ಲಿ ನಿರ್ಮಾಣವಾಗಿರುವುದು ಭಕ್ತರಿಗೆ ಸಂತಸ ತಂದಿದ್ದು, ಸಂಪೂರ್ಣ ಶಿಲೆಯಲ್ಲಿ ನಿರ್ಮಿಸಿದ ಇದರ ವಿಶೇಷ ಶೈಲಿಯು ನೋಡುಗರನ್ನು ಆಕರ್ಷಿಸುವಂತಿದೆ.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ
ವಿಶಾಲವಾದ ದೇವಸ್ಥಾನ ಆವರಣದಲ್ಲಿ ಶಿವ, ಗಣೇಶ, ಪಾರ್ವತಿ ಹೀಗೆ ವಿವಿಧ ದೇವಸ್ಥಾನಗಳು ಇವೆ. ಒಂದೇ ಜಾಗದಲ್ಲಿ ಹಲವು ದೇವರನ್ನು ಕಾಣುವ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾಗುವ ಅವಕಾಶ ಇಲ್ಲಿ ಸಿಗಲಿದೆ.
ಇಲ್ಲಿ ನಿರ್ಮಾಣವಾದ ಪ್ರತಿಯೊಂದು ದೇವಸ್ಥಾನವೂ ವಿಶಿಷ್ಟ ಹಾಗೂ ಪರಂಪರೆಯನ್ನು ಸಾರುವಂತಿವೆ.
ಶಿವ ದೇವಸ್ಥಾನವನ್ನು ಆಗಮ ಶಿಲ್ಪ ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ವಾಸ್ತು ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ.
ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವನ್ನು ಚೌಕ ಆಕಾರದಲ್ಲಿ ನಿರ್ಮಿಸಲಾಗಿದ್ದು, ಏಕಶಿಲಾ ಮೂರ್ತಿ ಇದಾಗಿದೆ. ಇಲ್ಲಿನ ಎಲ್ಲ ಮೂರ್ತಿಗಳನ್ನು ವಿಶೇಷ ಪದ್ಧತಿಯಲ್ಲಿ ಕೆತ್ತಲಾಗಿದೆ. ಗರ್ಭಗುಡಿ, ಮಹಾಮಂಟಪ, ಧ್ವಜಸ್ತಂಭ, ರಾಜಗೋಪುರ ಎಲ್ಲವೂ ಅತ್ಯಂತ ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ಸಜ್ಜುಗೊಂಡಿವೆ.
ನಮ್ಮ ಪಾರಂಪರಿಕ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ಎಂಬಂತೆ ಶಿವ ದೇವಸ್ಥಾನ ನಿರ್ಮಿಸಲಾಗಿದೆ. ಪುರಾತನ ಕಾಲದ ಅನೇಕ ದೇವಾಲಯಗಳಲ್ಲಿ ಈಗಲೂ ಪುಷ್ಕರಣಿ, ನೀರಿನ ಹೊಂಡಗಳು ಕಾಣಸಿಗುತ್ತವೆ. ಅಂತಹ ಪುಷ್ಕರಣಿ ಇಲ್ಲಿಯೂ ಇದೆ. ಅತ್ಯಂತ ಶುದ್ಧ ಜಲ ಇಲ್ಲಿ ಸಂಗ್ರಹವಾಗಿದೆ. ಈ ನೀರು ಪೂಜೆಗೆ ಬಳಸಲಾಗುತ್ತಿದೆ.
ಡಾ. ವಿಜಯ ಸಂಕೇಶ್ವರ ಸಂಕಲ್ಪ
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಹಾಗೂ ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರ ಸಂಕಲ್ಪದೊಂದಿಗೆ ಈ ಭವ್ಯವಾದ ದೇವಸ್ಥಾನ ನಿರ್ಮಾಣವಾಗಿದೆ. ಡಾ. ಆನಂದ ಸಂಕೇಶ್ವರ ಮಾರ್ಗದರ್ಶನ, ಡಾ. ವಿ.ಎಸ್.ವಿ. ಪ್ರಸಾದ್ ಸಹಕಾರ, ಆರಾಧನಾ ಟ್ರಸ್ಟ್ ಸಹಯೋಗದಲ್ಲಿ ಈ ದೇವಾಲಯ ತಲೆ ಎತ್ತಿ ನಿಂತಿದೆ.
ಶೃಂಗೇರಿ ಪೀಠಕ್ಕೆ ಹಸ್ತಾಂತರ
ದೇವಸ್ಥಾನದಲ್ಲಿ ಫೆಬ್ರವರಿ 22ರಂದು ದೇವರ ಪ್ರಾಣ ಪ್ರತಿಷ್ಠಾಪಣೆ ಮುಗಿದ ನಂತರ ಶ್ರಂಗೇರಿ ಪೀಠಕ್ಕೆ ಹಸ್ತಾಂತರಿಸಲಾಗುತ್ತಿದೆ. ದೇವಸ್ಥಾನದ ಸಂಪೂರ್ಣ ನಿರ್ವಹಣೆಯನ್ನು ಶೃಂಗೇರಿ ಪೀಠವೇ ನೋಡಿಕೊಳ್ಳಲಿದೆ.
ಶಿವ ದೇವಾಲಯದ ದರ್ಶನ ಹೇಗೆ?
ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಪಿ.ಬಿ. ರಸ್ತೆ ಮೂಲಕ ಹಾವೇರಿಯತ್ತ ಹೋಗುವ ಮಾರ್ಗದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ವಿಶಾಲ ಹಾಗೂ ಭವ್ಯ ಮಂದಿರ ಗೋಚರಿಸುತ್ತದೆ, ಅದುವೇ ಶಿವ ದೇವಾಲಯ. ಆರಾಧನಾ ಟ್ರಸ್ಟ್ ವತಿಯಿಂದ ಆರೂವರೆ ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ಮಿಸಲಾಗಿದ್ದು, ಭಕ್ತರ ತನು-ಮನಗಳನ್ನು ಸಂತೈಸುವ ತಾಣವಾಗಿದೆ. ಅತ್ಯಂತ ಸುಂದರ ಹಾಗೂ ಹಸಿರು ಉದ್ಯಾನದ ಮಧ್ಯ ತಲೆ ಎತ್ತಿರುವ ಮಂದಿರ ಆಹ್ಲಾದಕರ ವಾತಾವರಣದಲ್ಲಿ ಭಕ್ತರಿಗೆ ತಂಪೆರೆಯುತ್ತದೆ.
ದ್ರಾವಿಡ ಶೈಲಿ
ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಶಿವ ದೇವಾಲಯ, ಪಾರ್ವತಿ ದೇವಾಲಯ, ಗಣಪತಿ, ಶನೇಶ್ವರ, ನವಗ್ರಹ, ಕಾಳಭೈರವ ದೇವಸ್ಥಾನಗಳಿವೆ. ಒಂದೇ ಆವರಣದಲ್ಲಿ ಸುತ್ತು ಹಾಕಿದರೆ ಎಲ್ಲ ದೇವರ ದರ್ಶನ ಪಡೆದು ಪುನೀತರಾಗುವ ತಾಣ ಇದಾಗಿದೆ.
ಈ ದೇವಾಲಯ ಒಳಗೆ ಪ್ರವೇಶಿಸುವ ಮುನ್ನ ಮಹಾದ್ವಾರ ಕತ್ತು ಮೇಲೆತ್ತಿ ನೋಡುವಂತೆ ಮಾಡುತ್ತದೆ. ಇದನ್ನು ನೋಡುತ್ತಿದ್ದಂತೆ ಮನದಲ್ಲಿ ಭಕ್ತಿಯ ಭಾವನೆ ಶುರುವಾಗುತ್ತದೆ. ಹಾಗೆಯೇ ಒಳ ಪ್ರವೇಶ ಪಡೆಯುತ್ತಿದ್ದಂತೆಯೇ ರಥಬೀದಿ, ರಾಜಗೋಪುರ, ಹೋಮಕುಂಡ ಕಣ್ಣಿಗೆ ಬೀಳುತ್ತವೆ. ಶಿವನನ್ನು ಕಣ್ತುಂಬಿಕೊಳ್ಳಲು ಕುಳಿತರೆ ಸಾಕು ಮನಸ್ಸು ಹೂವಿನಂತೆ ಅರಳುತ್ತದೆ. ನಂತರ ಪಾರ್ವತಿದೇವಿ, ಗಣೇಶನ ಮೂರ್ತಿಯನ್ನು ಸಂದರ್ಶಿಸಿದರೆ ಮನಸು ಹಗುರವಾಗುತ್ತದೆ. ಅತ್ಯದ್ಭುತ ಕಲ್ಪನೆಯೊಂದಿಗೆ ಈ ದೇವಸ್ಥಾನ ನಿರ್ಮಿಸಲಾಗಿದೆ.
ತಮಿಳುನಾಡಿನ ಕೆ. ಸ್ವಾಮಿನಾಥನ್ ಸ್ಥಪತಿ (ಆರ್ಕಿಟೆಕ್ಚರ್) ಇದರ ಉಸ್ತುವಾರಿ ವಹಿಸಿದ್ದು, ಮಣಿ ಸೂಪರ್‌ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸತತ 4 ವರ್ಷದಿಂದ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಧುರೈನ 50 ಶಿಲ್ಪಿಗಳು ನಿತ್ಯ ಕಾಯಕದಲ್ಲಿ ತೊಡಗಿದ್ದರು. ದೊಡ್ಡಬಳ್ಳಾಪುರದಿಂದ ಕಲ್ಲುಗಳನ್ನು ತರಿಸಿ, ಬೃಹತ್ ದೇವಾಲಯ ನಿರ್ಮಿಸಲಾಗಿದೆ. ತಮಿಳುನಾಡಿನ ವಾಲಜಾಬಾದ್‌ನಿಂದ ಕಪ್ಪು ಶಿಲೆಗಳನ್ನು ತರಿಸಿ, ವಿಗ್ರಹ ಕೆತ್ತಲಾಗಿದೆ. ಕವಚ, ಕಲಶ, ಪ್ರಭಾವಳಿಗಳನ್ನು ಕುಂಭಕೋಣಂನಿಂದ ತರಿಸಲಾಗಿದೆ.
ಶಿವ ದೇವಾಲಯದ ಆಕರ್ಷಣೆ
ಶಿವ ದೇವಾಲಯವು ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ಗರ್ಭಗುಡಿಯಲ್ಲಿ ಶಿವನ ಮೂರ್ತಿ ಇದೆ. ಮುಂದಿನ ಮಹಾಮಂಟಪದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿ ಮುಂದೆ ದ್ವಾರಪಾಲಕರು ಇದ್ದಾರೆ. ಅದರ ಬಳಿ ಚಂಡಿಕೇಶ್ವರ ದೇವಸ್ಥಾನವಿದೆ. ನಂತರ ಪಾರ್ವತಿ ದೇವಾಲಯವನ್ನು ನಿರ್ಮಿಸಲಾಗಿದೆ. ಶಿವ ದೇವಾಲಯದ ಬಲಕ್ಕೆ ಗಣಪತಿ ದೇವಸ್ಥಾನವಿದ್ದು, ಅದರ ಮುಂದೆ ಹೋಮಕುಂಡ ನಿರ್ಮಿಸಿದ್ದು, ಹೋಮ-ಹವನ ಕೈಂಕರ್ಯ ನಡೆಸಲು ಯೋಗ್ಯ ಸ್ಥಳವಾಗಿದೆ. ಶನೈಚ್ಚರ, ನವಗ್ರಹ ಹಾಗೂ ಕಾಳಭೈರವೇಶ್ವರ ದೇವರ ದರ್ಶನವೂ ಭಕ್ತರಿಗೆ ಸಿಗಲಿದೆ. ಒಂದೇ ಸುತ್ತಿಗೆ ಇಷ್ಟೆಲ್ಲ ದೇವಸ್ಥಾನಗಳನ್ನು ಸುತ್ತು ಹಾಕಿ ಪಾಪ ಕಳೆದುಕೊಳ್ಳಲು ಪ್ರಶಸ್ತ ಸ್ಥಳವಾಗಿದೆ ಎಂಬುದು ಭಕ್ತರ ಅಂಬೋಣ.
32 ಅಡಿ ಎತ್ತರದ ಏಕಶಿಲಾ ಧ್ವಜಸ್ತಂಭ
ದೇವಸ್ಥಾನಕ್ಕೆ ಮುಕುಟ ಪ್ರಾಯ ಧ್ವಜಸ್ತಂಭ. ಇದು 32 ಅಡಿ ಎತ್ತರವಿದ್ದು, ಏಕಶಿಲೆಯಲ್ಲಿ ನಿರ್ಮಿಸಲಾಗಿದೆ. ಬೇರೆಡೆ ತುಂಡಾದ ಕಲ್ಲುಗಳನ್ನು ಒಂದರ ಮೇಲೊಂದು ಇಟ್ಟಿರುವುದನ್ನು ನೋಡಿದ್ದೇವೆ. ಇದು ಏಕಶಿಲೆ. ಹಾಗಾಗಿ ಈ ಧ್ವಜಸ್ತಂಭ ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ರಾಜಗೋಪುರ 60 ಅಡಿ ಎತ್ತರವಿದೆ. 5 ಅಂತಸ್ತುಗಳನ್ನು ಹೊಂದಿದ್ದು, ಪಂಚವರ್ಣಗಳು ಕಣ್ಣಿಗೆ ಮುದ ನೀಡುತ್ತವೆ.
ಸೇವಾ ಕೈಂಕರ್ಯ ಕೊಠಡಿಗಳು
ದೇವಸ್ಥಾನ ಪ್ರಾಂಗಣದ ರಾಜಗೋಪುರ ಬಳಿ ಸೇವಾ ಕಚೇರಿ, ನೈವೇದ್ಯ ತಯಾರಿಕೆಗೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯೇ ನೈವೇದ್ಯ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತಿದೆ. ಪ್ರಾಶಸ್ತ್ಯ ಸ್ಥಳದಲ್ಲಿ ಇದನ್ನು ನಿರ್ಮಿಸಿದ್ದು, ಶುಚಿಯಾಗಿ ಮಡಿಯಿಂದ ದೇವರಿಗೆ ನೈವೇದ್ಯ ಅರ್ಪಿಸಲು ಅನುಕೂಲವಾಗಿದೆ. ಸೇವಾ ಕಚೇರಿಯಿಂದ ದೇವರಿಗೆ ಅಗತ್ಯ ಸೇವಾ ಕೈಂಕರ್ಯ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮಹಾದ್ವಾರದ ಬಳಿ ಸೆಕ್ಯೂರಿಟಿ ಕೊಠಡಿಗಳಿವೆ. ಪೂಜಾ ಕೊಠಡಿ, ಬಜಾರ್ ಸ್ಟ್ರೀಟ್, ಪಾದರಕ್ಷೆ ಸ್ಟ್ಯಾಂಡ್ ಕೊಠಡಿಗಳಿವೆ.
ವಿಶಿಷ್ಟ ಗೋಶಾಲೆ
ದೇವಸ್ಥಾನದ ಆವರಣದಲ್ಲಿ ವಿಶಿಷ್ಟವಾಗಿ ಗೋಶಾಲೆ ನಿರ್ಮಿಸಲಾಗಿದೆ. ಇಲ್ಲಿ ಗೋಮಾತೆಗೆ ಪೂಜೆ, ಮೇವು ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ಗೋವುಗಳು ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನ ಪಡೆಯುವುದಲ್ಲದೇ ಗೋಮಾತೆಯನ್ನೂ ಪೂಜಿಸಿ ಕೃತಾರ್ಥರಾಗಲು ಸೂಕ್ತ ಸ್ಥಳವಾಗಿ ಮಾರ್ಪಟ್ಟಿದೆ. ಕಲ್ಯಾಣಿ, ಕೆರೆ ಹಾಗೂ ಭಾವಿಗಳನ್ನು ನಿರ್ಮಿಸಲಾಗಿದೆ.
ಬೃಹತ್ ಭೋಜನ ಶಾಲೆ
ದೇವಸ್ಥಾನಕ್ಕೆ ಬಂದ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಬೃಹತ್ ಭೋಜನ ಶಾಲೆ ನಿರ್ಮಿಸಲಾಗಿದೆ. ಅತ್ಯಾಧುನಿಕ ಆಹಾರ ತಯಾರಿಕಾ ಪರಿಕರಗಳನ್ನು ಅಳವಡಿಸಲಾಗಿದೆ. ವಿಐಪಿಗಳು, ಭಕ್ತರು, ಅರ್ಚಕರು ಪ್ರಸಾದ ಸೇವಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಋತ್ವಿಜರು ಉಳಿದುಕೊಳ್ಳಲು 6 ಕೊಠಡಿಗಳು ಇವೆ. ಇದಕ್ಕೆ ಅರ್ಚಕರ ವಸತಿ ಗೃಹವೆಂದು ಹೆಸರಿಡಲಾಗಿದೆ. 4 ಕೊಠಡಿಗಳಿದ್ದು, ಎರಡು 1 ಬಿಎಚ್‌ಕೆ ರೂಮ್‌ಗಳಿವೆ. ಗೆಸ್ಟ್ ಹೌಸ್ ಜಿ ಪ್ಲಸ್ 2 ಇದ್ದು, ಕೆಳಮಹಡಿಯಲ್ಲಿ 3 ಕೊಠಡಿಗಳಿವೆ. ಒಂದು ಊಟದ ಮನೆ ಹಾಗೂ ಸಭಾಂಗಣ ಇದೆ. ಮೊದಲ ಮಹಡಿಯಲ್ಲಿ 7 ರೂಮ್‌ಗಳಿದ್ದು, ಎರಡನೇ ಮಹಡಿಯಲ್ಲಿ ಪ್ರವಚನ ಸಭಾಗೃಹ ನಿರ್ಮಿಸಲಾಗಿದೆ.
ಇನ್ನೊಂದು ಸಮುಚ್ಚಯದ ಕೆಳಮಹಡಿಯಲ್ಲಿ ಪ್ರಸಾದ ನಿಲಯವಿದೆ. 20 ವಿಐಪಿಗಳು ಊಟ ಮಾಡಬಹುದು. ಹಾಲ್‌ನಲ್ಲಿ 60 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಮೊದಲ ಮಹಡಿಯಲ್ಲಿ 200 ಜನರು ಕುಳಿತು ಊಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಎರಡನೇ ಮಹಡಿಯಲ್ಲಿ ಕನ್ವೆನ್ಷನ್ ಸಭಾಗೃಹವಿದೆ. ಪಕ್ಕದಲ್ಲಿಯೇ ಮಹಿಳೆಯರು, ಪುರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಭಕ್ತರು ಹೋಗಿ ಬರಲು 2 ಲಿಫ್ಟ್ ಹಾಗೂ ಊಟದ ಸಾಮಗ್ರಿ, ಪಾತ್ರೆ ಕಳುಹಿಸಲು ಡಂಬ್ ಎಲಿವೇಟರ್ ಇದೆ.
ಭದ್ರತೆಗೆ ವಿಶೇಷ ಕಾಳಜಿ
ಬೇರೆಬೇರೆ ಕಡೆಗಳಿಂದ ಬರುವ ಭಕ್ತರಿಗೆ ಹಲವು ಅನುಕೂಲಗಳನ್ನು ಒದಗಿಸಲಾಗಿದೆ. ಇದೇ ರೀತಿ ಭದ್ರತೆಗೂ ಗಮನ ನೀಡಲಾಗಿದೆ. ದೇವಸ್ಥಾನದ ಆವರಣದಲ್ಲಿ 60 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 3 ಪಿಟಿಜೆಡ್ ಕ್ಯಾಮೆರಾಗಳಿವೆ. ಇದರ ವಿಶಿಷ್ಟತೆ ಎಂದರೆ ಬರುವ ಮತ್ತು ಹೋಗುವ ವ್ಯಕ್ತಿಗಳ ಭಾವಚಿತ್ರವನ್ನು ಸ್ಪಷ್ಟವಾಗಿ ಸೆರೆ ಹಿಡಿಯಲಿದೆ. ವಾಹನದ ಸಂಖ್ಯೆ ಸೆರೆ ಹಿಡಿಯಲು ಮತ್ತೊಂದು ವಿಶಿಷ್ಟ ಕ್ಯಾಮೆರಾ ಅಳವಡಿಸಲಾಗಿದೆ. ಹೀಗೆ ಅತ್ಯದ್ಭುತ ಸಿಸಿ ಕ್ಯಾಮೆರಾಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸಲಾಗಿದೆ.
ಪಾರ್ಕಿಂಗ್ ಸ್ಥಳ ಗುರುತು
ಬೃಹತ್ ದೇವಸ್ಥಾನ ನಿರ್ಮಿಸಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗಾಗಿ ದೊಡ್ಡದಾಗಿ ಪಾರ್ಕಿಂಗ್ ಸ್ಥಳವನ್ನು ಕಾಯ್ದಿರಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರು ಸುಮಾರು 60 ವಾಹನಗಳನ್ನು ನಿಲ್ಲಿಸಲು ಪ್ರತ್ಯೇಕ ಸ್ಥಳ ಕಾಯ್ದಿರಿಸಲಾಗಿದೆ. ಸರತಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಿ ದೇವರ ದರ್ಶನ ಪಡೆದು ಹೋಗಲು ಇಂಥ ಪ್ರದೇಶವನ್ನು ನಿಗದಿಪಡಿಸಲಾಗಿದೆ.
ಸ್ಥಳೀಯರಿಂದಲೇ ಸಮುಚ್ಚಯ ನಿರ್ಮಾಣ
ದೇವಸ್ಥಾನದ ಗರ್ಭಗುಡಿ, ಗೋಪುರ ಹಾಗೂ ಪ್ರಾಂಗಣವನ್ನು ತಮಿಳುನಾಡು ಮೂಲದವರು ನಿರ್ಮಿಸಿದ್ದಾರೆ. ವಸತಿ ಸಮುಚ್ಚಯವನ್ನು ಸ್ಥಳೀಯ ಗುತ್ತಿಗೆದಾರರು ನಿರ್ಮಿಸಿದ್ದು, ವಿಶಿಷ್ಟವಾಗಿ ಕಾಣುತ್ತಿವೆ. ಪ್ರತಿಯೊಂದು ಕೊಠಡಿಯೂ ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಶೌಚಾಲಯ, ವಾಸದ ಕೊಠಡಿ, ಬಾತ್‌ರೂಮ್‌ಗಳನ್ನು ಅಂದವಾಗಿ ಕಟ್ಟಲಾಗಿದೆ. ಇದರಿಂದ ಸ್ಥಳೀಯವಾಗಿಯೇ ಬಹಳಷ್ಟು ಜನರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ.
ರಥಬೀದಿಯ ವೈಭವ
ಮಹಾದ್ವಾರ ದಾಟುತ್ತಿದ್ದಂತೆ ರಥಬೀದಿಯು ಕಣ್ಣಿಗೆ ಕಾಣಲಿದೆ. ಅದರಲ್ಲಿ ಸಾಗುತ್ತಿದ್ದಂತೆ ಕೃಷ್ಣದೇವರಾಯ ಕಾಲದ ವೈಭವವು ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದರೊಳಗೆ ಪ್ರವೇಶ ಮಾಡುತ್ತಿದ್ದಂತೆ ಕಣ್ಣಿಗೆ ಹಾಗೂ ಮನಸ್ಸಿಗೆ ಮುದ ನೀಡುತ್ತದೆ. ಇತರ ಕಟ್ಟಡಗಳ ಮೇಲೆ ನಿಂತು ನೋಡಿದರೆ, ಅತ್ಯದ್ಭುತವೆನಿಸುತ್ತದೆ. ಈ ಕಲ್ಪನೆ ಇಷ್ಟೊಂದು ಪರಿಪೂರ್ಣವಾಗಿ ಅನುಷ್ಠಾನಗೊಂಡಿದೆಯೇ ಎಂಬ ಅಚ್ಚರಿ ನೋಡುಗರಿಗೆ ಅನುಭವವಾಗುತ್ತದೆ.
ಇದನ್ನೂ ಓದಿ | Nirmalanandanatha Swamiji : ವರ್ಷ 10, ಸಾಧನೆ ನೂರಾರು: ನಿರ್ಮಲ ಮನಸ್ಸಿನ ಸಂತ ವಿಜ್ಞಾನಿ
ಸಭಾಗೃಹ
ದೇವಸ್ಥಾನದ ಆವರಣದ ಒಳಭಾಗದಲ್ಲಿ ಸಭಾಗೃಹ ನಿರ್ಮಿಸಲಾಗಿದೆ. ಏನಾದರೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ಇದರ ಸೊಬಗು ಮತ್ತಷ್ಟು ಹೆಚ್ಚಲಿದೆ. ಸಭಾಗೃಹದ ಕೆಳಗೆ 4 ನೀರಿನ ಟ್ಯಾಂಕ್‌ಗಳಿವೆ. ಪ್ರತಿ ಟ್ಯಾಂಕ್‌ನಲ್ಲಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯವಿದೆ. ಹುಲ್ಲು ಹಾಸು ಹಾಕಲಾಗಿದೆ. ಇದರಿಂದ ಸಭಾಗೃಹದ ಅಂದ ಹೆಚ್ಚಾಗಿ ಕಾಣುತ್ತಿದೆ