Site icon Vistara News

PM Narendra Modi : ಬೇಗ ಬನ್ನಿ.. ಬೇಗ ಬನ್ನಿ.. ಮೋದಿ 5000 ರೂ. ಕೊಡ್ತಾರಂತೆ!

PM Narendra Modi Gas Connection

ಹುಬ್ಬಳ್ಳಿ: ಕಲಘಟಗಿಯ ಅಡುಗೆ ಅನಿಲ ವಿತರಣಾ ಕಚೇರಿಯೊಂದರ (Gas distribution office) ಕಡೆಗೆ ಶನಿವಾರ ಬೆಳಗ್ಗೆ ಮಹಿಳೆಯರು ದೌಡಾಯಿಸುತ್ತಿರುವುದು ಕಂಡಿತು. ಬೇರೆ ಬೇರೆ ವಾಹನಗಳಲ್ಲಿ, ನಡೆದುಕೊಂಡು ಬಂದವರು ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಇದಕ್ಕೆ ಕಾರಣ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗ್ಯಾಸ್‌ ಕನೆಕ್ಷನ್‌ (Gas Connection) ಇದ್ದವರಿಗೆ ಐದು ಸಾವಿರ (five thousand rupees) ಕೋಡ್ತಾರಂತೆ ಎಂಬ ಸುದ್ದಿ!

ಗ್ಯಾಸ್‌ ಕನೆಕ್ಷನ್‌ ಹೊಂದಿರುವವರು ಇ ಕೆವೈಸಿ ಮಾಡಿಸಬೇಕು ಎಂದು ಈಗಾಗಲೇ ಕೇಂದ್ರ ಪೆಟ್ರೋಲಿಯಂ ಇಲಾಖೆ ಸೂಚನೆ ನೀಡಿದೆ. ಡಿಸೆಂಬರ್‌ 31ರೊಳಗೆ ಎಲ್ಲರೂ ಇ ಕೆವೈಸಿ ಮಾಡಿಸಬೇಕು ಎಂದು ಸುಮಾರು ಎರಡು ವಾರದ ಹಿಂದೆಯೇ ಸೂಚನೆ ನೀಡಲಾಗಿತ್ತು. ಹೀಗಾಗಿ ಈಗ ಎಲ್ಲಾ ಗ್ಯಾಸ್‌ ಕಚೇರಿಗಳ ಮುಂದೆ ಜನ ನಿಂತಿರುವುದು ಸಾಮಾನ್ಯವಾಗಿದೆ. ವಿತರಕರು ಕೂಡಾ ತಮ್ಮ ಕಚೇರಿಗಳಲ್ಲಿ ಇ ಕೆವೈಸಿ ಮಾಡಿಸಲು ವ್ಯವಸ್ಥೆ ಮಾಡಿದ್ದಾರೆ. ಒಂದು ವೇಳೆ ಇ ಕೆವೈಸಿ ಮಾಡಿಸದೆ ಇದ್ದರೆ ಸಬ್ಸಿಡಿ ಸಿಗುವುದಿಲ್ಲ ಎಂದು ಹೇಳಲಾಗಿದೆ.

ಆದರೆ, ಕಳೆದ ಕೆಲವು ಸಮಯದಿಂದ ಸಬ್ಸಿಡಿಯೇ ಬಂದ್‌ ಆಗಿದೆ. ಜನರು ಸರ್ಕಾರ ಮತ್ತು ಕಂಪನಿಗಳು ನಿಗದಿಪಡಿಸಿದ ದರವನ್ನು ನೇರ ಪಾವತಿ ಮಾಡಿಯೇ ಗ್ಯಾಸ್‌ ಖರೀದಿಸುತ್ತಿದ್ದಾರೆ. ಹೀಗಾಗಿ ಇ ಕೆವೈಸಿ ಮಾಡಿಸಲು ಜನರು ತುಂಬಾ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ. ಆದರೆ, ಪ್ರಧಾನಿ ಮೋದಿ ಅವರು 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಕ್ಷಣ ಸಬ್ಸಿಡಿ ಮರು ಘೋಷಣೆ ಮಾಡಲೂಬಹುದು ಎಂಬ ಅಭಿಪ್ರಾಯಗಳು ಇರುವುದರಿಂದ ಕೆಲವರು ಮಾಡಿಸುತ್ತಿದ್ದಾರೆ. ಉಜ್ವಲಾ ಯೋಜನೆಯಡಿ ಗ್ಯಾಸ್‌ ಪಡೆದವರಿಗೆ ಸಬ್ಸಿಡಿ ಸಿಗುತ್ತಿದ್ದು, ಅವರು ಅಗತ್ಯವಾಗಿ ಇ ಕೆವೈಸಿ ಮಾಡಿಸುತ್ತಿದ್ದಾರೆ.

ಈ ನಡುವೆ, ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಒಂದು ವದಂತಿ ಹಬ್ಬಿತ್ತು. ಗ್ಯಾಸ್‌ ಕನೆಕ್ಷನ್‌ ಹೊಂದಿದ ಮಹಿಳೆಯರಿಗೆ ಮೋದಿಯವರು ಐದು ಸಾವಿರ ನೀಡುತ್ತಿದ್ದಾರೆ ಎಂಬುದೇ ಆ ವದಂತಿ. ಹೀಗಾಗಿ ಕಲಘಟಗಿಯ ಲೋಕಪೂಜ್ಯ ಗ್ಯಾಸ್ ಕಚೇರಿ ಶನಿವಾರ ಬೆಳಗ್ಗೆ ಮಹಿಳೆಯರ ದಂಡೇ ನೆರೆದಿತ್ತು.

ಸಾಮಾನ್ಯವಾಗಿ ಇ ಕೆವೈಸಿ ಮಾಡಲು ಬರುವ ಮಹಿಳೆರು ಮತ್ತು ಇತರರ ಒಂದು ಸಾಲು ಬೆಳಗ್ಗೆ ಇರುತ್ತಿತ್ತು. ಆದರೆ, ಬೆಳಗ್ಗೆ ಕಚೇರಿ ಮುಂದೆ ಜನ ಜಾತ್ರೆ ಸೇರಿದ್ದು ಕಂಡು ಅಲ್ಲಿನ ಸಿಬ್ಬಂದಿಗಳು ಹೌಹಾರಿದರು. ಯಾಕೆ ಇಷ್ಟು ಜನ ಸೇರಿದ್ದಾರೆ ಎಂದು ವಿಚಾರಿಸಿದಾಗ ಮೋದಿಯವರು ಐದು ಸಾವಿರ ರೂ. ಕೊಡುತ್ತಾರೆ ಎಂಬ ಸುದ್ದಿ ಕೇಳಿ ಅವರು ಓಡೋಡಿ ಬಂದಿದ್ದು ಅರಿವಾಯಿತು.

ಇದನ್ನೂ ಓದಿ: LPG Subsidy: ಎಲ್‌ಪಿಜಿ ಸಬ್ಸಿಡಿ ಸಿಗಬೇಕೆಂದರೆ ಡಿಸೆಂಬರ್‌ 31ರೊಳಗೆ ಈ ಕೆಲಸ ಮಾಡಲೇಬೇಕು!

ಆದರೆ, ಅಂಥ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರೂ ಜನರು ನಂಬುತ್ತಿಲ್ಲ. ಹೀಗಾಗಿ ಕಚೇರಿಯ ಎದುರಿನ ಜನಸಂದಣಿ ಕರಗುತ್ತಿಲ್ಲ. ಇದರಿಂದಾಗಿ ಇ ಕೆವೈಸಿ ಮಾಡುವ ಪ್ರಕ್ರಿಯೆಗೂ ತಡೆಯಾಗಿದೆ. ಈ ನಡುವೆ, ಇ ಕೆವೈಸಿ ಮಾಡಲೂ ಅಂತಿಮ ದಿನಾಂಕ ನಿಗದಿ ಮಾಡಿಲ್ಲ ಎಂದು ವಿತರಕರು ಹೇಳಿದ್ದಾರೆ. ಡಿಸೆಂಬರ್‌ 31 ಅಂತಿಮ ಗಡುವೇನಲ್ಲ, ಅದು ವಿಸ್ತರಣೆಯಾಗುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Ration Card : ರೇಷನ್‌ ಕಾರ್ಡ್‌ಗೆ ಇ-ಕೆವೈಸಿ ಇಕ್ಕಟ್ಟು; ನಿಮ್ಮಿಂದ ಈ ಎಡವಟ್ಟಾದರೂ ಅನ್ನಭಾಗ್ಯ ಸಿಗಲ್ಲ!

ಇ ಕೆವೈಸಿಗೂ ಏಕಾಏಕಿ ನೂಕುನುಗ್ಗಲು

ಈ ನಡುವೆ, ಕಲಬುರಗಿ ಭಾಗದಲ್ಲಿ ಇ ಕೆವೈಸಿ ಮಾಡಲು ಕೂಡಾ ಜನರ ಸಾಗರವೇ ಸೇರುತ್ತಿದೆ. ಇದಕ್ಕೆ ಕಾರಣ, ಮೋದಿ ಅವರು ಮುಂದಿನ ವರ್ಷದಿಂದ 500 ರೂ.ಗೆ ಒಂದು ಗ್ಯಾಸ್‌ ಸಿಲಿಂಡರ್‌ ನೀಡುತ್ತಾರೆ. ಆದರೆ ಅದು ಕೆವೈಸಿ ಮಾಡಿದವರಿಗೆ ಮಾತ್ರ ಸಿಗಲಿದೆ ಎಂಬ ಸುದ್ದಿ ಈ ಭಾಗದಲ್ಲಿ ಹರಡಿದ್ದು ಒಂದು ಕಾರಣ.

Exit mobile version