ಪರಶುರಾಮ್ ತಹಸೀಲ್ದಾರ್, ವಿಸ್ತಾರ ನ್ಯೂಸ್ ಹುಬ್ಬಳ್ಳಿ
ಸೆಪ್ಟೆಂಬರ್ 26ರಂದು ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿರುವ ಪೌರ ಸನ್ಮಾನದಲ್ಲಿ ಸುಮಾರು ಐದು ಸಾವಿರ ಜನರು ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ನಗರದ ಜಿಮ್‌ಖಾನಾ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಆದರೆ ಜಿಮ್ಖಾನಾ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಗ್ರೌಂಡ್ ಬಚಾವೋ ಹೋರಾಟ ಸಮಿತಿ ವಿರೋಧ ವ್ಯಕ್ತಪಡಿಸುತ್ತಿದೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಗ್ರೌಂಡ್ ಬಚಾವೊ ಹೋರಾಟ ಸಮಿತಿ ಮುಖಂಡರಾದ ಪಿ.ಎಚ್. ನೀರಲಕೇರಿ, ಐ.ಜಿ. ಸನದಿ, ಸಿ.ಬಿ.ಎಲ್. ಹೆಗಡೆ, ಅಮೃತ್ ಇಜಾರೆ ಹಾಗೂ ನಾಡಿಗೇರ್ ಅವರು ಕಾರ್ಯಕ್ರಮವನ್ನು ವಿವಾದಿತ ಜಾಗದಲ್ಲಿ ನಡೆಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೋರಾಟ ಸಮಿತಿ ಮುಖಂಡ ಪಿ.ಎಚ್. ನೀರಲಕೇರಿ ಮಾತನಾಡಿ, ಹುಬ್ಬಳ್ಳಿಯ ಜಿಮ್ಖಾನಾ ಮೈದಾನ ವಿವಾದ ನ್ಯಾಯಾಲಯದಲ್ಲಿದೆ. ಸಾರ್ವಜನಿಕರ ಜಾಗವನ್ನು ಬಾರ್, ಸ್ಪಾ, ಮೋಜು ಮಸ್ತಿ ತಾಣವಾಗಿ ಮಾಡಲಾಗಿದೆ. ಕೆಲವು ಪ್ರಭಾವಿಗಳು ಜಾಗ ಕಬಳಿಸಿ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದೇವೆ. ಹೀಗಾಗಿ ವಿವಾದಿತ ಜಾಗದಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ಬೇಕಿದ್ದರೆ ಬೇರೆ ಕಡೆ ಕಾರ್ಯಕ್ರಮ ಆಯೋಜಿಸಲಿ. ಅದನ್ನು ಬಿಟ್ಟು ವಿವಾದಿತ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಿ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೂ ತರುತ್ತೇವೆ. ರಾಷ್ಟ್ರಪತಿ ಶಿಷ್ಟಾಚಾರ ವಿಭಾಗಕ್ಕೆ ಪತ್ರ ಬರೆಯುತ್ತೇವೆ ಹಾಗೂ ಇಮೇಲ್ ಕಳಿಸುತ್ತೇವೆ ಎಂದಿದ್ದಾರೆ.
ಏನು ಜಿಮ್ಖಾನಾ ಮೈದಾನ ವಿವಾದ?
1915 ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಆಟಕ್ಕಾಗಿ ಜಿಮ್ಖಾನಾ ಮೈದಾನವನ್ನು ಮೀಸಲಿಡಲಾಗಿತ್ತು. 2008ರ ವರೆಗೆ ಈ ಮೈದಾನವನ್ನು ಸಾರ್ವಜನಿಕರು ಬಳಸುತ್ತಿದ್ದರು. 2011ರಲ್ಲಿ ಕರ್ನಾಟಕ ಜಿಮ್ಖಾನಾ ಅಸೋಸಿಯೇಶನ್ ಮೈದಾನದಲ್ಲಿ ಕ್ಲಬ್ ತೆರೆದಿದೆ. ನಗರದ ಹೃದಯ ಭಾಗದಲ್ಲಿ ಇರುವ ಈ ಜಾಗ ಸುಮಾರು 200 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಮೈದಾನವನ್ನು ಉಳಿಸಲು ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ವಿರುದ್ಧ 2012ರಿಂದ ಗ್ರೌಂಡ್ ಬಚಾವೊ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತ್ತಾ ಬಂದಿದೆ. ಅಲ್ಲದೇ ನ್ಯಾಯಾಲಯದ ಮೊರೆ ಹೋಗಿದೆ.
ಮೈದಾನದಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಅನ್ನೋದು ಆರೋಪ. ಆರಂಭದಲ್ಲಿ ಕ್ಲಬ್ ತೆರೆದು ಜನಸಾಮಾನ್ಯರಿಗೆ ಪ್ರವೇಶ ನೀಡದೆ ಕೇವಲ ಕ್ಲಬ್‌ನ ಸದಸ್ಯರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಸದಸ್ಯರಲ್ಲದವರು ಈ ಕ್ಲಬ್‌ನಲ್ಲಿ ಪ್ರವೇಶಿಸಬಾರದು ಎನ್ನುವ ಉದ್ದೇಶದಿಂದ ಸುತ್ತ ಎತ್ತರದ ಗೋಡೆ ಕಟ್ಟಲಾಗಿದೆ. ತಲಾ ಐದು ಲಕ್ಷ ರೂಪಾಯಿ ಸದಸ್ಯತ್ವ ಶುಲ್ಕ ನೀಡಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ ಎನ್ನುವುದು ಸಾರ್ವಜನಿಕರ ದೂರು.
ಪ್ರತಿಭಟನೆ ಬಳಿಕ ವಾಕಿಂಗ್‌ಗೆ ಅವಕಾಶ
2013-2015 ರಲ್ಲಿ ನಡೆದ ನಿರಂತರ ಪ್ರತಿಭಟನೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಮೈದಾನದ ಒಳಗಡೆ ಬೆಳಗ್ಗೆ ಹಾಗೂ ಸಂಜೆ 5 ರಿಂದ 7 ಗಂಟೆಯ ವರೆಗೆ ವಾಕಿಂಗ್ ಹೋಗಲು ಅವಕಾಶ ನೀಡಲಾಗಿದೆ.
ಏನೇನಿದೆ ಈಗ ಜಿಮ್ಖಾನಾ ಮೈದಾನದಲ್ಲಿ?
ಮೈದಾನದಲ್ಲಿ ಬಾರ್ ತೆರೆಯಲಾಗಿದೆ. ಇದಲ್ಲದೆ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪಾ ಮಸಾಜ್ ಸೆಂಟರ್, ಪಾರ್ಟಿ ಹಾಲ್, ಅತಿಥಿ ಕೋಣೆಗಳು, ಟೆನ್ನಿಸ್ ಕೋರ್ಟ್, ಟೇಬಲ್ ಟೆನ್ನಿಸ್ ಕೋರ್ಟ್ ತೆರೆದಿದ್ದಾರೆ. ಝುಂಬಾ, ಏರೋಬಿಕ್, ಯೋಗ, ಸ್ವಿಮ್ಮಿಂಗ್ ಪೂಲ್ ಇತ್ಯಾದಿಗಳಿವೆ.
ಮೈದಾನದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಕಾನೂನುಬಾಹಿರವಾಗಿ ಕ್ಲಬ್‌ನ ಒಳಗಡೆ ಬಾರ್ ತೆರೆಯಲಾಗಿದೆ. ಪ್ರಭಾವಿಗಳ ಕೈವಾಡದಿಂದಾಗಿ ಆಟದ ಮೈದಾನದಲ್ಲಿ ಲಕ್ಸುರಿ ಕ್ಲಬ್ ನಿರ್ಮಾಣವಾಗಿದೆ.
ಪ್ರತಿಭಟನೆಗೆ ಪಾಟೀಲ್ ಪುಟ್ಟಪ್ಪ ನೇತೃತ್ವ
ಸಾರ್ವಜನಿಕರ ಬಳಕೆಗಾಗಿ ಪಾಲಿಕೆಯಲ್ಲಿ ಮೀಸಲಿಟ್ಟಿದ್ದ ಆಟದ ಮೈದಾನದಲ್ಲಿ ಲಕ್ಸುರಿ ಕ್ಲಬ್ ತೆಗೆದಿದ್ದು ಸರಿಯಲ್ಲ ಎಂದು ಸ್ಥಳೀಯರು ಪಾಟೀಲ್ ಪುಟ್ಟಪ್ಪನವರ ನೇತೃತ್ವದಲ್ಲಿ ಈ ಹಿಂದೆ ಹಲವು ಹೋರಾಟ ನಡೆಸಿದ್ದರು. 2013ರಲ್ಲಿ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿಯವರು ಜಿಮ್ಖಾನಾ ಕ್ಲಬ್‌ನಲ್ಲಿ ಗೌರವದ ಹುದ್ದೆ ಹೊಂದಿದ್ದರು. ಗ್ರೌಂಡ್ ಬಚಾವೋ ಸಮಿತಿ ನಡೆಸಿದ ಪ್ರತಿಭಟನೆಯ ನಂತರ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ್ ಜೋಶಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಹಾಗೂ ಕ್ಲಬ್‌ನ ಚಟುವಟಿಕೆಗಳೊಂದಿಗೆ ಯಾವುದೇ ಸಂಬಂಧವಿಲ್ಲವೆಂದು ಘೋಷಿಸಿದ್ದರು.
ವಿವಾದ ಕೋರ್ಟ್‌ನಲ್ಲಿದ್ದರೂ ಆಕ್ಷೇಪಾರ್ಹ ಸ್ಥಳದಲ್ಲಿ ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರ ಸನ್ಮಾನ ಏರ್ಪಡಿಸಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಜನ ಹಿತಕ್ಕೆ ವಿರುದ್ಧವಾಗಿ ಆಟದ ಮೈದಾನವನ್ನು ಖಾಸಗಿ ಕ್ಲಬ್ ಮಾಡಿರುವ ಜಿಮ್ಖಾನಾ ಅಸೋಸಿಯೇಷನ್ ವಿರುದ್ಧ ಗ್ರೌಂಡ್ ಬಚಾವೋ ಹೋರಾಟ ಸಮಿತಿ ಅಸಮಾಧಾನ ವ್ಯಕ್ತಪಡಿಸುತ್ತಿದೆ. ರಾಷ್ಟ್ರಪತಿಗಳ ಆಗಮನದ ಕಾರಣ ಕೋರ್ಟ್‌ನಲ್ಲಿರುವ ವಿವಾದ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.