ಬೆಂಗಳೂರು: ಹುಬ್ಬಳ್ಳಿಯಲ್ಲಿ ಗಲಭೆ ನಂತರ ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಶನಿವಾರ ಬಂಧಿಸಲಾಗಿದೆ. ಬೆಂಗಳೂರಿನ ಕಾಟನ್‌ಪೇಟೆಯಲ್ಲಿರುವ ಹೋಟೆಲ್‌ನಿಂದ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತೂಫೇಲ್ ಮುಲ್ಲ ಇಬ್ಬರನ್ನೂ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 17ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಬಳಿ ಗಲಭೆ ನಡೆದಿತ್ತು. ಪಿಯು ವಿದ್ಯಾರ್ಥಿಯೊಬ್ಬ ಇಸ್ಲಾಂ ವಿರುದ್ಧ ಹಾಕಿದ್ದ ಪೋಸ್ಟ್ ನೆಪವಾಗಿಸಿ ಆರಂಭವಾದ ಪ್ರತಿಬಟನೆ, ನಂತರ ಪೊಲೀಸರು ಹಾಗೂ ಸಾರ್ವಜನಿಕರ ಆಸ್ತಿಪಾಸ್ತಿ ಹಾನಿಯಾಗುವ ಹಂತ ತಲುಪಿತ್ತು. ಪ್ರಕರಣದ ನಂತರ ಇಲ್ಲಿವರೆಗೆ ಎಐಎಂಐಎಂ ಕಾರ್ಪೊರೇಟರ್ ಪತಿ ಸೇರಿ 126 ಜನರನ್ನು ಬಂಧಿಸಿದ್ದು, 12 ಆರೋಫಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಪೊಲೀಸ್ ಜೀಪಿನ ಮೇಲೇರಿ ಗಲಭೆಕೋರರಿಗೆ ಪ್ರಚೋದನೆ ನೀಡುತ್ತಿದ್ದ ಎನ್ನಲಾಗುತ್ತಿರುವ ಆರೋಪಿ ವಾಸೀಂ ಪಠಾಣ್‌ನನ್ನು ಈಗಾಗಲೆ ಬಂಧಿಸಿರುವ ಪೊಲೀಸರು, ಮತ್ತೊಬ್ಬ ಪ್ರಮುಖ ಆರೋಪಿ ಮೊಹಮ್ಮದ್ ಆರಿಫ್‌ನನ್ನೂ ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಬೇಕಾಗಿದ್ದ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತೂಫೇಲ್ ಮುಲ್ಲಾ ಮೊಬೈಲ್ ಲೊಕೇಷನ್‌ಗಳನ್ನು ಹುಬ್ಬಳ್ಳಿ ಪೊಲೀಸರು ಟ್ರ್ಯಾಕ್ ಮಾಡುತ್ತಿದ್ದರು. ಇಬ್ಬರು ಆರೋಪಿಗಳೂ ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದು ಹಿರಿಯ ಅಧಿಕಾರಿ ಲಾಬೂರಾಮ್ ಅವರಿಗೆ ಮಾಹಿತಿ ನೀಡಿದ್ದಾರೆ. ಡಿಸಿಪಿ ಸಂಜೀವ್ ಪಾಟೀಲ್ ಅವರ ತಂಡ ಕಾಟನ್ ಪೇಟೆ ಬಳಿಯ ಹೋಟೆಲ್‌ನಿಂದ ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ.
ಇದನ್ನೂ ಓದಿ: ಖಡಕ್ CM ಅಂದರೆ ಏನು?: ಪ್ರತಿಪಕ್ಷಗಳಿಗೆ ಬಸವರಾಜ ಬೊಮ್ಮಾಯಿ ಪ್ರಶ್ನೆ
ಎಲ್ಲ ಆರೋಪಿಗಳನ್ನೂ ಬಂಧಿಸಬೇಕೆಂಬ ಯೋಜನೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಹುಬ್ಬಳ್ಳಿಯ ಕೇಶವಾಪುರ ಜಗದೀಶ್ ಅಂಚಿನಾಳ್ ಗಲಭೆ ಸಂಬಂಧಿಸಿದ ಆರೋಪಿಗ ಹುಡುಕಾಟದಲ್ಲಿದ್ದರು. ಗಲಭೆ ನಂತರ ಹುಬ್ಬಳ್ಳಿಯಿಂದ ಪರಾರಿಯಾಗಿದ್ದ ಒಟ್ಟು ನಾಲ್ವರು ಆರೋಪಿಗಳು ಹಾವೇರಿಯ ಬಂಕಾಪುರ ಬಸ್ಟಾಪ್‌ನಲ್ಲಿ ಇಳಿದು ಬೇರೆಡೆ ತೆರಳಿದ್ದರು. ಇಬ್ಬರು ಬೇರೆಡೆ ತೆರಳಿದರೆ ಮತ್ತಿಬ್ಬರು ಬೆಂಗಳೂರಿಗೆ ಆಗಮಿಸಿದ್ದರು.
ನಟೋರಿಯಸ್ ರೌಡಿಶೀಟರ್ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತೂಫೇಲ್ ಮುಲ್ಲಾ ಎರಡು ದಿನದ ಹಿಂದೆ ಬೆಂಗಳೂರಿಗೆ ಬಂದಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಂಗಳವಾರ ಒಂದು ರೂಮ್ ಮಾಡಿಕೊಂಡ ಆರೋಪಿಗಳು ಅಂದು ರಾತ್ರಿ ಮತ್ತೊಂದು ರೂಮ್ ಪಡೆದಿದ್ದರು. ಬುಧವಾರ ಬೆಳಿಗ್ಗೆ ರಂಜಾನ್‌ಗೆ ಬಟ್ಟೆ ಖರೀದಿ ಮಾಡಿದ್ದರು. ಸಂಜೆ ನಂತರ ತವಕಲ್ ಮಸೀದಿ ಬಳಿ ಇದ್ದ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದರು. ಅಷ್ಟರಲ್ಲಾಗಲೇ ಸಾಕಷ್ಟು ಬಳಲಿದ್ದ ಆರೋಪಿಗಳು ಹೋಟೆಲ್‌ನಲ್ಲಿ ಊಟಕ್ಕೆ ತೆರಳಿದ್ದರು. ಅಷ್ಟರಲ್ಲಿ ಸ್ಥಳೀಯ ಪೊಲೀಸರು ಆರೋಫಿಗಳ ನಿಖರ ಸ್ಥಳದ ಮಾಹಿತಿ ಪಡೆದು, ಇಬ್ಬರನ್ನೂ ಬಂಧಿಸಿದ್ದಾರೆ.
ಗಲಭೆಗಳ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಇದು ಅವರ ದಾರ್ಷ್ಟ್ಯ, ಅಹಂಕಾರವನ್ನು ತೋರಿಸುತ್ತಿದೆ. ನಮ್ಮ ಸಂಖ್ಯೆ ಹೆಚ್ಚಾದರೆ ಪೊಲೀಸರನ್ನೂ ಎದುರಿಸುತ್ತೇವೆ ಎಂಬ ಸಂದೇಶ ನೀಡಲು ಹೊರಟಿದ್ದಾರೆ. ಅಲ್ಪಸಂಖ್ಯಾತರು ಬಹುಸಂಖ್ಯಾತರು ಎನ್ನದೆ ಎಲ್ಲರೂ ಒಟ್ಟಾಗಿ ಬದುಕಬೇಕು ಎನ್ನುವುದು ನಮ್ಮ ಆಶಯ. ಇಂತಹ ಗಲಭೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.