ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್, ಉಪಮೇಯರ್ ಚುನಾವಣೆ ಮೇ 28ರಂದು ನಡೆಯಲಿದ್ದು, ಎರಡೂ ಹುದ್ದೆಗಳನ್ನು ಬಿಜೆಪಿ ಸೆಳೆದುಕೊಳ್ಳುವ ಸಾಧ್ಯತೆ ಇದೆ.
ಬೆಳಗ್ಗೆ 9.30ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ನಾಮಪತ್ರಗಳ ಪರಿಶೀಲನೆ ಹಾಗೂ ಹಿಂಪಡೆಯಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 1.30ಕ್ಕೆ ಪಾಲಿಕೆ ಸದಸ್ಯರು ಕೈ ಎತ್ತುವ ಮೂಲಕ ಮೇಯರ್, ಉಪಮೇಯರ್ ಆಯ್ಕೆ ಮಾಡಲಿದ್ದಾರೆ. ಚುನಾವಣಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲನ್ ಬಿಸ್ವಾಸ್ ಕಾರ್ಯ ನಿರ್ವಹಿಸಲಿದ್ದಾರೆ. ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ, ಉಪ ಮೇಯರ್ ಸ್ಥಾನವು ಮಹಿಳಾ ವರ್ಗಕ್ಕೆ ಮೀಸಲಾಗಿದೆ.
ಅಭ್ಯರ್ಥಿಗಳ ಘೋಷಣೆ
ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮೇಯರ್ ಅಭ್ಯರ್ಥಿಯಾಗಿ ಮಯೂರ್ ಮೋರೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ದೀಪಾ ಸಂತೋಷ್ ನೀರಲಕಟ್ಟಿ ಹೆಸರನ್ನು ಘೋಷಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್ ಪಾಟೀಲ್ ತಿಳಿಸಿದ್ದಾರೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಪಕ್ಷದ ಹಿರಿಯ ಮಖಂಡರ ಸಭೆ ಬೆಳಗ್ಗೆ ಏರ್ಪಡಿಸಲಾಗಿದೆ. ಶುಕ್ರವಾರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಬಳಿಕ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ಪಕ್ಷದ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸಮ್ಮುಖದಲ್ಲಿ ಪಾಲಿಕೆ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಶನಿವಾರ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ.
ಬಿಜೆಪಿಗೆ ಅಧಿಕಾರ ಖಚಿತ
ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದೆ. ಒಟ್ಟು ವಾರ್ಡುಗಳ ಸಂಖ್ಯೆ 82. ಗೆಲ್ಲಲು ಮ್ಯಾಜಿಕ್ ನಂಬರ್ 42 ಬೇಕಾಗಿದೆ. ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, AIMIM 3 ಹಾಗೂ 6 ಜನ ಪಕ್ಷೇತರ ಸದಸ್ಯರಿದ್ದಾರೆ. ಹೀಗಾಗಿ ಪಾಲಿಕೆ ಪಕ್ಷೇತರರ ಪೈಕಿ ಮೂವರು ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಬಲ 42ಕ್ಕೆ ಏರಿದೆ. ಪಕ್ಷೇತರರಾಗಿದ್ದ ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ ಹಾಗೂ ಕಿಷನ್ ಬೆಳಗಾವಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 42 ಪಾಲಿಕೆ ಸದಸ್ಯರ ಜತೆಗೆ 6 ವಿಶೇಷ ಮತಗಳು ಬಿಜೆಪಿಗೆ ಸಿಗಲಿವೆ. ವಿಶೇಷ ಮತವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ ಹಾಗೂ ಎಸ್.ವಿ. ಸಂಕನೂರ ಚಲಾಯಿಸಲಿದ್ದಾರೆ. ಇದರಿಂದಾಗಿ ಬಿಜೆಪಿಗೆ ಒಟ್ಟು 48 ಮತಗಳು ಬರುವುದರಿಂದ ಸ್ಪಷ್ಟ ಬಹುಮತ ಪಡೆಯಲಿದೆ ಎನ್ನಲಾಗಿದೆ.
ಧಾರವಾಡದವರೇ ಮೇಯರ್ ಆಗಲಿ
ಚುನಾವಣೆ ಹಿನ್ನೆಲೆಯಲ್ಲಿ ಹು-ಧಾ ಮೇಯರ್ ಪಟ್ಟ ಈ ಬಾರಿ ಧಾರವಾಡದವರಿಗೆ ಸಿಗಬೇಕು ಎಂದು ಮುಖಂಡರು ಒತ್ತಾಯ ಮಾಡಿದ್ದಾರೆ. ಹಲವು ವರ್ಷಗಳಿಂದ ಹುಬ್ಬಳ್ಳಿಯವರೆ ಮೇಯರ್ ಆಗಿ ಆಯ್ಕೆಯಾಗುತ್ತಿದ್ದಾರೆ. ಹೀಗಾಗಿ ಈ ಬಾರಿ ಧಾರವಾಡದ ಪ್ರತಿನಿಧಿಗೆ ಮೇಯರ್ ಸ್ಥಾನ ನೀಡಬೇಕೆಂದು ಪಟ್ಟು ಸ್ಥಳೀಯ ನಾಯಕರು ಒತ್ತಾಯ ಮಾಡಿದ್ಧಾರೆ. ಮೇಯರ್ ಸ್ಥಾನ ಧಾರವಾಡಕ್ಕೆ ಸಿಗದಿದ್ದರೆ ಮತ್ತೆ ಪ್ರತ್ಯೇಕ ಕೂಗು ಬಿಜೆಪಿ ನಾಯಕರಿಂದ ಕೇಳಿಬರಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ | ಹುಬ್ಬಳ್ಳಿ ಅಪಘಾತ: ಮಡಿದವರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ