ಹುಬ್ಬಳ್ಳಿ: ವಾದ-ವಿವಾದ ಹಾಗೂ ನ್ಯಾಯಾಲಯ ಹೋರಾಟದ ನಡುವೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮೊದಲ ಬಾರಿ ಆಯೋಜಿಸಿದ್ದ ಗಣೇಶೋತ್ಸವ ಅದ್ಧೂರಿ ಹಾಗೂ ಶಾಂತ ರೀತಿಯಲ್ಲಿ ನೆರವೇರಿದೆ. ಗಣೇಶ ಹಬ್ಬದಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಸಾವಿರಾರು ಜನರ ಸಮ್ಮುಖದಲ್ಲಿ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ದು ಗಜಮುಖನನ್ನು ವಿಸರ್ಜನೆ ಮಾಡಲಾಗಿದ್ದು, ಮೂರು ದಿನಗಳ ಉತ್ಸವಕ್ಕೆ ಶುಕ್ರವಾರ ತೆರೆಬಿದ್ದಿದೆ.
ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಮೂರು ದಿನಗಳ ಅನುಮತಿ ನೀಡಿತ್ತು. ಶುಕ್ರವಾರಕ್ಕೆ ಮೂರು ದಿನಗಳ ಕಾಲಾವಕಾಶ ಮುಕ್ತಾಯವಾದ ಕಾರಣ ಗಣೇಶ ಮೂರ್ತಿಯನ್ನು ವಿಸರ್ಜಿಸಲು ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಗಜಾನನ ಉತ್ಸವ ಮಹಾಮಂಡಳದಿಂದ ಗಣೇಶನಿಗೆ ವಿಸರ್ಜನೆ ಪೂಜೆ, ಮಹಾ ಮಂಗಳಾರತಿ ಬಳಿಕ ಗಣೇಶನ ಬಳಿ ಇರಿಸಿ ಪೂಜಿಸಲಾಗಿದ್ದ ವಸ್ತುಗಳನ್ನು ಹರಾಜು ಹಾಕಲಾಯಿತು.
ಇದನ್ನೂ ಓದಿ | Ambedkar Ganesh | ಅಂಬೇಡ್ಕರ್ ಹೋಲುವ ಗಣೇಶ ಮೂರ್ತಿ; ಪ್ರತಿಷ್ಠಾಪಿಸಿದವರ ಮೇಲೆ ಪ್ರಕರಣ ದಾಖಲು
ಗಣೇಶನಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಶಾಂತ ರೀತಿಯಿಂದ ಪೂಜಿಸಿದ್ದೇವೆ. ಹಿಂದುಗಳೆಲ್ಲ ಒಂದಾಗಿದ್ದು ಹುಬ್ಬಳ್ಳಿಯ ಜನ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದಾರೆ. ಏನೋ ಅವಘಡ, ಗಲಾಟೆ ಆಗಿಬಿಡುತ್ತದೆ ಎಂದು ಅಂಜುಮನ್ ಸಂಸ್ಥೆ ಮತ್ತು ಕಾಂಗ್ರೆಸ್‌ನವರು ಆರೋಪ ಮಾಡಿದ್ದರು. ಅತ್ಯಂತ ಶಾಂತಿಯುತವಾಗಿ ಗಣೇಶೋತ್ಸವ ನೆರವೇರಿದೆ. ಹಿಂದುಗಳು ಶಾಂತಿಪ್ರಿಯರು ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದರು.
ಈದ್ಗಾ ಮೈದಾನದಿಂದ ಮಧ್ಯಾಹ್ನ 12 ಗಂಟೆಗೆ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ವೇಳೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಶ್ರೀರಾಮ ಸೇನೆ ಕಾರ್ಯಕರ್ತರ ಜತೆ ಪ್ರಮೋದ್ ಮುತಾಲಿಕ್ ನಾಸಿಕ್ ಡೋಲು ಸದ್ದಿಗೆ ಹೆಜ್ಜೆ ಹಾಕಿ, ಭಗವಾಧ್ವಜ ಹಿಡಿದು ಸಂಭ್ರಮಿಸಿದರು. ನಾಸಿಕ್ ಡೋಲು ಮತ್ತು ಝಾಂಜ್ ಮೇಳ ಸೇರಿ ವಿವಿಧ ಕಲಾತಂಡಗಳು, ವಾದ್ಯಮೇಳಗಳು ಮೆರವಣಿಗೆಗೆ ರಂಗು ತಂದವು.
ಚೆನ್ನಮ್ಮ ವೃತ್ತದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಿಡಿದು ಅಭಿಮಾನಿಗಳು ಭಾಗವಹಿಸಿದ್ದರು. ಇನ್ನೊಂದೆಡೆ ವೀರ ಸಾವರ್ಕರ್ ಭಾವಚಿತ್ರ ಹಿಡಿದು ಹಿಂದುಪರ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಮಾರ್ಗ ಮಧ್ಯ ಜಿಟಿ ಜಿಟಿ ಸುರಿದ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಾಲ್ಕು ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಟ್ರ್ಯಾಕ್ಟರ್ ಮುಖಾಂತರ ಕೊಂಡೊಯ್ಯಲಾಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದರು. ಪಾಲಿಕೆ ಸದಸ್ಯ ಸಂತೋಷ್ ಚವ್ಹಾಣ್, ಶಿವು ಮೆಣಸಿನಕಾಯಿ, ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ್ ಭಡಾಸ್ಕರ್, ಹನುಮಂತಸಾ ನಿರಂಜನ್ ಉಪಸ್ಥಿತರಿದ್ದರು.
ಇದನ್ನೂ ಓದಿ | Modi in Mangalore | ಕಿಸಾನ್ ಕಾರ್ಡ್, ಆಳ ಸಮುದ್ರ ಮೀನುಗಾರಿಕೆಗೆ ಸಹಾಯ: ಮೀನುಗಾರರ ಮನಸೂರೆಗೊಂಡ ಮೋದಿ