Site icon Vistara News

ಕೆರೂರು ಗಲಾಟೆ | ಪಟ್ಟಣದಲ್ಲಿ ಗುಂಪು ಘರ್ಷಣೆಗೆ ಹುಡುಗಿಯನ್ನು ಚುಡಾಯಿಸಿದ್ದು ಮೂಲಕಾರಣವೇ?

ಬಾಗಲಕೋಟೆ: ಕೆರೂರು ಗಲಾಟೆ ಹಿನ್ನೆಲೆಯಲ್ಲಿ ಈಗಾಗಲೇ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪೊಲೀಸರು ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ಪ್ರಕರಣದ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಯಪ್ರಕಾಶ್‌, ಗಲಾಟೆಗೆ ಎರಡು ಗುಂಪುಗಳ ನಡುವಿನ ಹಳೇ ದ್ವೇಷ ಹಾಗೂ ಯುವತಿಯನ್ನು ಚೂಡಾಯಿಸಿದ್ದೇ ಮೂಲ ಕಾರಣ ಎಂದು ಹೇಳಿದ್ದಾರೆ.

ಬುಧವಾರ (ಜುಲೈ 6) ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಗಲಾಟೆಯಾಗಿತ್ತು. ಅನೇಕರು ಈ ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದು, ಪೊಲೀಸರು ಒಟ್ಟು 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಗಲಾಟೆಗೆ ಸಂಬಂಧಿಸಿದಂತೆ 4 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್‌ಪಿ ಜಯಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಗುಂಪು ಘರ್ಷಣೆಗೆ ಕಾರಣವೇನು?

ಇದೊಂದು ಹಳೇ ದ್ವೇಷ ಮತ್ತು ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳನ ಮಧ್ಯೆ ಜಗಳವಾಗಿದೆ. ಇದರಲ್ಲಿ ಬೇರೆ ಕಾರಣ ಇಲ್ಲ. ಯುವತಿಯರನ್ನು ಚುಡಾಯಿಸಿದ್ದು ಎಂಬ ಕಾರಣವಿಟ್ಟುಕೊಂಡು ಎರಡು ಗುಂಪುಗಳು ಗಲಾಟೆ ಆರಂಭಿಸಿವೆ ಎಂದು ಜಯಪ್ರಕಾಶ್‌ ತಿಳಿಸಿದ್ದಾರೆ. ಆದರೆ, ಯಾವ ಗುಂಪು ಚುಡಾಯಿಸಿದೆ? ಈ ಮಟ್ಟದ ಗಲಾಟೆ ಪ್ರಾರಂಭವಾಗಿದ್ದು ಹೇಗೆ? ಎಂಬಿತ್ಯಾದಿ ಅಂಶಗಳ ಸಹಿತ ಇನ್ನಷ್ಟು ಮಾಹಿತಿಯು ತನಿಖೆಯ ವೇಳೆ ಸಿಗಬೇಕಿದೆ.

ಗಲಾಟೆಯ ತೀವ್ರತೆ

ಎರಡು ಗುಂಪುಗಳ ನಡುವೆ ಈ ಗಲಾಟೆ ಉಂಟಾಗಿದ್ದು, ಇದರಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಈ ಘರ್ಷಣೆಯಲ್ಲಿ ಅರುಣ್ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ ಹಾಗೂ ಯಮನೂರ ಚುಂಗಿನ್ ಎಂಬುವವರಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಮೂವರು ಒಂದೇ ಗುಂಪಿಗೆ ಸೇರಿದವರಾಗಿದ್ದು, ಇವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಗುಂಪಿನ ವ್ಯಕ್ತಿಗೆ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ನಾಲ್ವರು ಈಗ ಅಪಾಯದಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಒಂದು ಬೈಕ್ ಮತ್ತು ತಳ್ಳುವ ಗಾಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, 6 ಬೈಕುಗಳಿಗೆ ಹಾನಿಯಾಗಿವೆ.

ತಪ್ಪು ಸಂದೇಶ ರವಾನೆ ಮಾಡಬಾರದು

ಇದೊಂದು ಕ್ಷುಲ್ಲಕ ಕಾರಣಕ್ಕೆ ಹುಟ್ಟಿಕೊಂಡ ಗಲಾಟೆ. ಈ ಬಗ್ಗೆ ಯಾರೂ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶ ರವಾನೆ ಮಾಡಬಾರದು. ಜನರು ಅನವಶ್ಯಕವಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಹಾಗೂ ಪೊಲೀಸ್‌ ಇಲಾಖೆಗೆ ಸಹಕರಿಸಬೇಕು ಎಂದು ಜಯಪ್ರಕಾಶ್ ಮನವಿ ಮಾಡಿದ್ದಾರೆ.

ಪೊಲೀಸರು ಕೈಗೊಂಡ ಕ್ರಮ

ಹಾಲಿ ಕೆರೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣವಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಅಂಗಡಿ ಮುಂಗಟ್ಟುಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಪೊಲೀಸ್‌ ಬಿಗಿ ಬಂದೋಬಸ್ತ್‌ ಮುಂದುವರಿದಿದೆ. ಅಲ್ಲದೆ, ಕೆಎಸ್‌ಆರ್‌ಪಿ, ಡಿಎಆರ್, ಅಗ್ನಿಶಾಮಕ ತುಕುಡಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಹಿಂಸಾಚಾರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ. ಜಯಪ್ರಕಾಶ್‌ ಅವರು ಕೆರೂರು ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ತುರ್ತು ಕಾರ್ಯಗಳಿಗೆ ತೆರಳುವವರಿಗೆ ಮಾತ್ರ ಅನುಮತಿ ನೀಡಲಾಗಿದೆ. ಶುಕ್ರವಾರ ರಾತ್ರಿ ೮ ಗಂಟೆವರೆಗೂ ಸೆಕ್ಷನ್‌ 144 ಜಾರಿಯಲ್ಲಿರಲಿದೆ.

ಗಲಾಟೆ ಉಂಟಾಗುವ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗಾಗಿ 5 IRB ತುಕುಡಿಗಳು ಸೇರಿದಂತೆ ಹೆಚ್ಚಿನ ಆಫೀಸರ್‌ಗಳನ್ನು ನಿಯೋಜಿಸಲಾಗಿದೆ ಎಂದು ಜಯಪ್ರಕಾಶ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಕೆರೂರು ಗುಂಪು ಘರ್ಷಣೆ: 144 ನಿಷೇಧಾಜ್ಞೆ ಜಾರಿ, ಕೆರೂರು ಪಟ್ಟಣ ಸ್ತಬ್ಧ

Exit mobile version