Site icon Vistara News

Smriti Irani: ಕೇರಳದಲ್ಲಿ ಬೆಗ್ಗಿಂಗ್‌, ಕರ್ನಾಟಕದಲ್ಲಿ ಥಗ್ಗಿಂಗ್;‌ ಕಾಂಗ್ರೆಸ್‌ಗೆ ಸ್ಮೃತಿ ಇರಾನಿ ಟಾಂಗ್!‌

Smriti Irani

Hugging In Delhi, Begging In Kerala, Thugging In Karnataka: Smriti Irani Attacks On Congress

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ತೀಕ್ಷ್ಣತೆ, ಚುರುಕು, ವ್ಯಂಗ್ಯ ಹಾಗೂ ಟೀಕೆಯ ರೂಪಗಳು ಪಡೆದಿವೆ. ಇದಕ್ಕೆ ನಿದರ್ಶನ ಎಂಬಂತೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ (India Bloc) ಪಕ್ಷಗಳ ವಿರುದ್ಧ ಚಾಟಿ ಬೀಸಿದ್ದಾರೆ. “ಪ್ರತಿಪಕ್ಷಗಳ ಸ್ಥಿತಿಯು ತುಂಬ ವಿಚಿತ್ರ ರೂಪ ತಾಳಿದೆ. ಕೇರಳದಲ್ಲಿ ಬೆಗ್ಗಿಂಗ್‌, ದೆಹಲಿಯಲ್ಲಿ ಹಗ್ಗಿಂಗ್‌ ಹಾಗೂ ಕರ್ನಾಟಕದಲ್ಲಿ ಥಗ್ಗಿಂಗ್”‌ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಬೆಂಗಳೂರಿನಲ್ಲಿ (Bengaluru) ನಡೆದ ಕಾರ್ಯಕ್ರಮವೊಂದರಲ್ಲಿ ವಾಗ್ದಾಳಿ ನಡೆಸಿದ್ದಾರೆ.

“ಪ್ರತಿಪಕ್ಷಗಳು ತುಂಬ ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿ ನರಳಾಡುತ್ತಿವೆ. ದೆಹಲಿಯಲ್ಲಿ ಪ್ರತಿಪಕ್ಷಗಳು ಪರಸ್ಪರ ತಬ್ಬಿಕೊಂಡು (Hugging) ಚುನಾವಣೆ ಎದುರಿಸುತ್ತಿವೆ. ಆದರೆ, ಕೇರಳದ ವಯನಾಡಿನಲ್ಲಿ ರಾಹುಲ್‌ ಗಾಂಧಿ ವಿರುದ್ಧ ತಮ್ಮದೇ ಮೈತ್ರಿಕೂಟದ ಸಿಪಿಎಂ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ. ಹಾಗಾಗಿ, ಇಲ್ಲಿ ಬೆಗ್ಗಿಂಗ್‌ (Begging) ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿ ಸಚಿವರ ಮಕ್ಕಳಿಗೇ ಟಿಕೆಟ್‌ ನೀಡಿರುವುದು ಥಗ್ಗಿಂಗ್‌ (Thugging-ಕುಟುಂಬದ ರಾಜಕಾರಣದ ಕ್ರೂರ ಅಣಕ ಎಂಬ ಅರ್ಥದಲ್ಲಿ ಹೇಳಿರುವುದು) ಆಗಿದೆ” ಎಂಬುದಾಗಿ ಕುಟುಕಿದ್ದಾರೆ.

ಧಾರಾವಾಹಿ ಬಿಡಿ, ರಾಜಕೀಯದ ಕಡೆ ಗಮನ ಕೊಡಿ

ಮಹಿಳಾ ಮತದಾರರ ಕುರಿತು ಕೂಡ ಸ್ಮೃತಿ ಇರಾನಿ ಮಾತನಾಡಿದರು. “ಹೆಣ್ಣುಮಕ್ಕಳು ಅತ್ತೆ-ಸೊಸೆಯ ಜಗಳವನ್ನೇ ತೋರಿಸುವ ಧಾರಾವಾಹಿಗಳನ್ನು ನೋಡುವುದನ್ನು ಬಿಡಬೇಕು. ಆ ಮೂಲಕ ರಾಜಕೀಯ ವಿಚಾರಗಳ ಕಡೆ ಹೆಚ್ಚು ಗಮನ ಹರಿಸಬೇಕು. ರಾಜಕೀಯ ವಿಚಾರಗಳನ್ನು ಹೆಣ್ಣುಮಕ್ಕಳು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕು. ಮಹಿಳಾ ಮತದಾರರ ವೋಟುಗಳು ನಿರ್ಣಾಯಕವಾಗಿವೆ ಎಂಬುದನ್ನು ಅವರು ಅರಿತುಕೊಳ್ಳಬೇಕು. ಆ ಮೂಲಕ ಉತ್ತಮರನ್ನು ಆಯ್ಕೆ ಮಾಡಬೇಕು” ಎಂದು ಸಲಹೆ ನೀಡಿದರು.

“ನಿಜ ಜೀವನಕ್ಕಿಂತ ಅತ್ತೆ-ಸೊಸೆ ಜಗಳದ ಧಾರಾವಾಹಿಗಳು ತುಂಬ ದೂರ ಇರುತ್ತವೆ. ಹಾಗಾಗಿ, ಚುನಾವಣೆ, ರಾಜಕೀಯ ಸಂಗತಿ, ಬೆಳವಣಿಗೆಗಳ ಕಡೆ ಗಮನ ಹರಿಸಬೇಕು. ಹೆಣ್ಣುಮಕ್ಕಳು ರಾಜಕೀಯ ಬೆಳವಣಿಗೆಗಳನ್ನು ಅರಿತಾಗ ಮಾತ್ರ ಸಕಾರಾತ್ಮಕ ರಾಜಕೀಯ ವ್ಯವಸ್ಥೆ ಹಾಗೂ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಹೆಣ್ಣುಮಕ್ಕಳು ರಾಜಕೀಯ ಸಂಗತಿಗಳನ್ನು ಅರಿತುಕೊಂಡು ಮತದಾನ ಮಾಡಬೇಕು. ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಮತದಾನ ಮಾಡುವುದು ತಮ್ಮ ಜವಾಬ್ದಾರಿ ಎಂಬುದನ್ನು ಅರಿಯಬೇಕು” ಎಂಬುದಾಗಿ ಸ್ಮೃತಿ ಇರಾನಿ ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಾರಾ ರಾಬರ್ಟ್ ವಾದ್ರಾ? ಪ್ರಿಯಾಂಕಾ ಪತಿ ಹೇಳಿದ್ದೇನು?

Exit mobile version