ಮೈಸೂರು: ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ ದೇವರಾಜ ಅರಸು ಅವರ ಕರ್ಮಭೂಮಿ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಜಿ.ಡಿ ಹರೀಶ್ ಗೌಡ (94666) ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರಸ್ನ ಎಚ್ .ಪಿ ಮಂಜುನಾಥ್ (92254) ವಿರುದ್ಧ 2412 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2019ರಲ್ಲಿ ನಡೆದ ಆಪರೇಷನ್ ಕಮಲದ ಬಳಿಕ ಜೆಡಿಎಸ್ ಶಾಸಕ ಎಚ್ ವಿಶ್ವನಾಥ್ ರಾಜೀನಾಮೆ ನೀಡಿ ಮರಳಿ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನ ಎಚ್ ಪಿ ಮಂಜುನಾಥ್ ಎದುರು ಸೋಲುಕಂಡಿದ್ದರು.
1957ರಲ್ಲಿ ಅವಿಭಜಿತ ಮೈಸೂರು ಜಿಲ್ಲೆಯ ದ್ವಿಸದಸ್ಯತ್ವದ ಕ್ಷೇತ್ರವಾಗಿ ಹುಣಸೂರು ಅಸ್ತಿತ್ವಕ್ಕೆ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ 19 ಚುನಾವಣೆಗಳು ನಡೆದಿವೆ. ಇದರಲ್ಲಿ 12 ಬಾರಿ ಕಾಂಗ್ರೆಸ್, 5 ಬಾರಿ ಜೆಡಿಎಸ್, 2 ಬಾರಿ ಬಿಜೆಪಿ ಪಕ್ಷ ಗೆದ್ದಿದೆ. ದೇವರಾಜ್ ಅರಸು ಅವರು ಸತತ ಆರು ಚುನಾವಣೆಗಳನ್ನು ಗೆದ್ದು ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು.
2018 ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಅಡಗೂರು ಎಚ್.ವಿಶ್ವನಾಥ್ 91,667 ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್ ಪಿ ಮಂಜುನಾಥ್ ಅವರನ್ನು 8,575 ಮತಗಳ ಅಂತರದಿಂದ ಸೋಲಿಸಿದ್ದರು.
ಇದನ್ನೂ ಓದಿ : Rajaji Nagar Election Results : ರಾಜಾಜಿನಗರದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ಗೆ ಜಯ
ಹುಣಸೂರು ಕ್ಷೇತ್ರ 2,33,168 ಮತಗಳನ್ನು ಹೊಂದಿವೆ. ಇದರಲ್ಲಿ 1,16,843 ಪುರುಷ ಹಾಗೂ 1,16,307 ಮಹಿಳಾ ಮತದಾರರಿದ್ದಾರೆ. ಪರಿಶಿಷ್ಟ ಜಾತಿಯ 52,000, ಒಕ್ಕಲಿಗ ಸಮುದಾಯದ 48,000, ಕುರುಬರ 28000, ಪರಿಶಿಷ್ಟ ಪಂಗಡದ 27000, ಮುಸ್ಲಿಂ 15,000, ಲಿಂಗಾಯತ 12,000 ಹಾಗೂ ಇತರೆ ವರ್ಗದ 51,162 ಮತಗಳಿವೆ.