ಬೆಂಗಳೂರು: ಅವರಿಬ್ಬರೂ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗಿದ್ದ ಜೋಡಿ. ಆರಂಭದಲ್ಲಿ ಖುಷಿ ಖುಷಿಯಾಗಿದ್ದ ಅವರ ದಾಂಪತ್ಯ ಜೀವನದಲ್ಲಿ ಅದೇನು ಆಯಿತೊ ಏನು ಗಂಡನಿಗೆ, ಹೆಂಡತಿ ಶೀಲದ ಮೇಲೆ ಅನುಮಾನ (Husband Harassment) ಶುರುವಾಗಿತ್ತು. ಹೆಂಡತಿಯ ಶೀಲ ಪರೀಕ್ಷೆಗೆ ಇಳಿದ ಆತ ಮೊರೆ ಹೋಗಿದ್ದು, ಅಷ್ಟಮಂಗಲ ಪ್ರಶ್ನೆಗೆ!
ಮಂಜುನಾಥ್ ಎಂಬಾತ ಅಷ್ಟಮಂಗಲ ಮೊರೆ ಹೋದ ಸೈಕೋ ಪತಿ. ಈತನಿಗೆ ಬಿಡಬ್ಲ್ಯೂಎಸ್‌ಎಸ್‌ಬಿಯಲ್ಲಿ ನೌಕರಿ ಮಾಡುತ್ತಿದ್ದ ಯುವತಿಯೊಬ್ಬರು ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿದ್ದರು. ಬಳಿಕ ಮಾಹಿತಿ ವಿನಿಮಯ ಸೇರಿದಂತೆ ವಿಚಾರಣೆಗಳು ನಡೆದು, ಪರಸ್ಪರ ಒಪ್ಪಿ, ಆಂಧ್ರದ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಮದುವೆ ಆದ ಆರೇ ತಿಂಗಳಿಗೆ ಮಂಜುನಾಥ್‌ಗೆ ಪತ್ನಿ ಮೇಲೆ ಅನುಮಾನ ಪ್ರಾರಂಭವಾಗಿದೆ. ಆಕೆಗೆ ಬೇರೊಬ್ಬರ ಜತೆ ಸಂಬಂಧವಿದೆ ಎಂದು ಚಿಂತೆ ಮಾಡುತ್ತಿದ್ದ.
ಈ ಅನುಮಾನ ಪರಿಹರಿಸಲು ಮಂಜುನಾಥ್ ಕಳ್ಳ ಗುರುವಿನ ಮೊರೆ ಹೋಗಿದ್ದ. ಆತನ ಬಳಿ ಅಷ್ಟಮಂಗಲ ಪ್ರಶ್ನೆ ಹಾಕಿಸಿದ್ದು, ಈ ವೇಳೆ ಪತ್ನಿಗೆ ಪರ ಪುರುಷನ ಜತೆ ಸಂಬಂಧ ಇದ್ದು, ಆಕೆಗೆ ಗರ್ಭಪಾತವೂ ಆಗಿದೆ ಎಂಬ ಉತ್ತರ ಸಿಕ್ಕಿದೆ. ಇದನ್ನು ತಿಳಿದು ಕೆಂಡಾಮಂಡಲವಾದ ಮಂಜುನಾಥ್, ಮನೆಗೆ ಬಂದವನೇ ಹೆಂಡತಿಗೆ ಕಿರುಕುಳ ಕೊಡಲು ಶುರು ಮಾಡಿದ. ವಿನಾಕಾರಣ ಪತ್ನಿ ಜತೆಗೆ ಜಗಳ ತೆಗೆಯುವುದಲ್ಲದೆ, ಹಲ್ಲೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
ಅಷ್ಟಮಂಗಲದಿಂದ ಬಂದ ಉತ್ತರವನ್ನು ನಂಬಿದ ಮಂಜುನಾಥ್, ಪತ್ನಿಗೆ ಕಿರುಕುಳ ನೀಡುತ್ತಾ, ಪ್ರತಿ ದಿನ ಹಲ್ಲೆ ನಡೆಸುತ್ತಿದ್ದ. ಗಂಡನ ನಿರಂತರ ಕಿರುಕುಳಕ್ಕೆ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಗಂಡನಿಂದ ದೂರವಾಗಿ ತಂದೆ ಮನೆ ಸೇರಿದರು.
ಅಲ್ಲಿಗೂ ಬಂದ ಈ ಪಾಪಿ, ಕುಟುಂಬದವರ ಎದುರಿಗೆ ಪತ್ನಿಗೆ ಹಲ್ಲೆ ಮಾಡಿದ್ದಾನೆ. ಜತೆಗೆ ಪತ್ನಿಯ ತಂದೆಗೆ ತಲೆ ಹಿಡುಕ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇಷ್ಟೆಲ್ಲ ಹುಚ್ಚಾಟದಿಂದ ಬೇಸತ್ತ ಪತ್ನಿ, ನಿರಂತರ ಹಲ್ಲೆ ನಡೆಸುತ್ತಿದ್ದವನ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ | Cruel husband| ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಸಂಶಯ ಪಿಶಾಚಿ ಗಂಡ