Site icon Vistara News

ಬೀದರ್‌-ಬಳ್ಳಾರಿ ಚತುಷ್ಪಥ ಎಕ್ಸ್‌ಪ್ರೆಸ್‌ ಹೈವೇ, ಮೂಲಸೌಕರ್ಯ ಅಭಿವೃದ್ಧಿ ಆದ್ಯತೆ: ಸಿಎಂ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸಾರಿಗೆ ಸಂಪರ್ಕ ಉತ್ತಮ ಗೊಳಿಸಲು ಈ ಹೆದ್ದಾರಿ ಪ್ರಮುಖ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಬೀದರ್‌ನಿಂದ ಬಳ್ಳಾರಿವರೆಗೆ ಚತುಷ್ಪಥ ಎಕ್ಸ್‌ಪ್ರೆಸ್‌ ಹೈವೇ ನಿರ್ಮಿಸಲಾಗುವುದು (Hyderabad-Karnataka Liberation Day) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಶನಿವಾರ ಇಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವಾದ ರಾಯಚೂರು, ಬಳ್ಳಾರಿ ವಿಮಾನ ನಿಲ್ದಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೇಂದ್ರದ ನೆರವಿನೊಂದಿಗೆ ಯಾದಗಿರಿ, ರಾಯಚೂರು, ಕಲಬುರಗಿ ರಿಂಗ್‌ರೋಡ್ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಕೈಗಾರಿಕಾ ಅಭಿವೃದ್ಧಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣ ಮಾಡಲು ತೀರ್ಮಾನ ಮಾಡಿದೆ. ರಾಜ್ಯ ಸರ್ಕಾರ ರಾಯಚೂರು ಹಾಗೂ ವಿಜಯಪುರದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಕನಿಷ್ಠ 25 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದಲ್ಲದೆ ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್, ಯಾದಗಿರಿಯಲ್ಲಿ ಫಾರ್ಮಾಸೂಟಿಕಲ್ ಕ್ಲಸ್ಟರ್ ನಿರ್ಮಿಸಲಾಗುವುದು. ಕೊಪ್ಪಳದಲ್ಲಿ ಈಗಾಗಲೇ ಆಟಿಕೆಗಳ ಕ್ಲಸ್ಟರ್ ನಿರ್ಮಾಣವಾಗುತ್ತಿದೆ. ಬೀದರ್‌ನಲ್ಲಿ ಕೇಂದ್ರದ ನೆರವಿನೊಂದಿಗೆ 90 ಕೋಟಿ ರೂ. ವೆಚ್ಚದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕುರಿತ ಸಿಪೆಟ್ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು. ಹೀಗೆ ಪ್ರತಿ ಜಿಲ್ಲೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ತಿಳಿಸಿದರು.

ಪಕ್ಷಭೇದ ಮರೆತು ಶ್ರಮಿಸಿ: ಸಿಎಂ ಕಿವಿಮಾತು
ಈ ಭಾಗದ ಅಭಿವೃದ್ಧಿಯಾಗಬೇಕೆಂದರೆ ರಾಜಕಾರಣಿಗಳು ಪಕ್ಷಭೇದ ಮರೆತು ಕೆಲಸ ಮಾಡಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ರಾಜಕಾರಣ ಮಾಡಿದರೆ ಈ ಭಾಗಕ್ಕೆ ದೊಡ್ಡ ದ್ರೋಹ ಮಾಡಿದಂತಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಕಲಬುರಗಿ ಅಭಿವೃದ್ಧಿ
ಕಲಬುರಗಿ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೀಡಿದ್ದೇನೆ. ಕಲಬುರಗಿ ಕರ್ನಾಟಕದ ಭವಿಷ್ಯದ ನಗರವಾಗಿದೆ. ಇಲ್ಲಿ ಎಲ್ಲ ರೀತಿಯ ವೈ ಫೈ ಕನೆಕ್ಟ್, ಕೇಬಲ್ ಕನೆಕ್ಟ್ ಮತ್ತಿತರ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ಅಂತಾರಾಷ್ಟ್ರೀಯ ನಗರ ಮಾಡಲು ತೀರ್ಮಾನಿಸಿದ್ದೇವೆ. ಸಮಸ್ತ ಕರ್ನಾಟಕ ಅಭಿವೃದ್ಧಿಯಾಗುತ್ತಿರುವ ಈ ಸಮಯದಲ್ಲಿ ಐತಿಹಾಸಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕವೂ ಅಷ್ಟೇ ವೇಗವಾಗಿ ಬೆಳೆಯಬೇಕು. ಕಲ್ಯಾಣ ಕರ್ನಾಟಕದ ಮೂಲಕ ನವ ಕರ್ನಾಟಕ ಹಾಗೂ ನವ ಭಾರತದ ಅಭಿವೃದ್ದಿಯಾಗಬೇಕು ಎಂದು ಮುಖ್ಯಮಂತ್ರಿಗಳು ಆಶಿಸಿದರು.

ಕಲಬುರಗಿ ಪೊಲೀಸ್ ಆಯುಕ್ತಾಲಯ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಕಲಬುರಗಿ ಪೊಲೀಸ್ ಆಯುಕ್ತಾಲಯ ಉದ್ಘಾಟನೆ
ಕಲಬುರಗಿ ಪೊಲೀಸ್ ಆಯುಕ್ತಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೆಕೆಆರ್ ಡಿ ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹಾಗೂ ಈ ಭಾಗದ ಶಾಸಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ | ಕಲ್ಯಾಣ ಕರ್ನಾಟಕದಲ್ಲಿ ʼಕಲ್ಯಾಣ ಉತ್ಸವʼ; ಏಳು ಜಿಲ್ಲೆಗಳಲ್ಲಿ ಜನರಲ್ಲಿ ಇಮ್ಮಡಿಗೊಂಡ ಉತ್ಸಾಹ

Exit mobile version