Site icon Vistara News

M B Patil: ನಾನೂ ಸಿಎಂ ಆಗಲು ಸಮರ್ಥ, ಹೈಕಮಾಂಡ್‌ ಒಪ್ಪಿದರೆ ಆಗುವೆ; ಮನದಾಸೆ ಬಿಚ್ಚಿಟ್ಟ ಎಂ.ಬಿ.ಪಾಟೀಲ್‌

phone-tapping-‌accusation by M B Patil

ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣೆ ಕಣ ದಿನೇದಿನೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಯಾಗಿ, ಅಭ್ಯರ್ಥಿಗಳು ಇನ್ನಿಲ್ಲದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಗೆದ್ದು ಶಾಸಕನಾಗುವ, ಸಚಿವನಾಗುವ ಕನಸು ಕಾಣುತ್ತಿದ್ದಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ (M B Patil) ಅವರು ಮುಖ್ಯಮಂತ್ರಿಯಾಗುವ ಕನಸನ್ನು ಬಿಚ್ಚಿಟ್ಟಿದ್ದಾರೆ. “ನಾನೂ ಮುಖ್ಯಮಂತ್ರಿ ಆಗಲು ಸಮರ್ಥನಿದ್ದೇನೆ. ಹೈಕಮಾಂಡ್‌ ಒಪ್ಪಿದರೆ ಆಗುವೆ” ಎಂದು ಮನದಾಸೆ ಹೇಳಿಕೊಂಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಶಾಸಕರ ಬೆಂಬಲ ಸಿಕ್ಕರೆ, ಹೈಕಮಾಂಡ್‌ ಒಪ್ಪಿದರೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯ ಇದ್ದಾರೆ, ಡಿ.ಕೆ.ಶಿವಕುಮಾರ್‌ ಇದ್ದಾರೆ, ನಾನಿದ್ದೇನೆ, ಡಾ.ಜಿ.ಪರಮೇಶ್ವರ್‌ ಇದ್ದಾರೆ. ನಾನು ಕೂಡ ಸಿಎಂ ಆಗಲು ಸಮರ್ಥನಿದ್ದೇನೆ. ಇದಕ್ಕೂ ಮೊದಲು ರಾಜ್ಯದ ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಹೈಕಮಾಂಡ್‌ ಒಪ್ಪಿದರೆ ಯಾರು ಬೇಕಾದರೂ ಸಿಎಂ ಆಗಬಹುದು. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಒಪ್ಪಿದರೆ ಖರ್ಗೆ ಅವರನ್ನು ನನ್ನನ್ನು ಪ್ರಧಾನಿಯನ್ನಾಗಿಯೂ ಮಾಡಬಹುದು” ಎಂದು ತಿಳಿಸಿದರು.

ಬೊಮ್ಮಾಯಿ ಆ್ಯಕ್ಸಿಡೆಂಟಲ್‌ ಸಿಎಂ

ಬಸವರಾಜ ಬೊಮ್ಮಾಯಿ ಅವರು ಆ್ಯಕ್ಸಿಡೆಂಟಲ್‌ ಚೀಫ್‌ ಮಿನಿಸ್ಟರ್‌ ಎಂದು ಎಂ.ಬಿ.ಪಾಟೀಲ್‌ ಟೀಕಿಸಿದರು. “ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿ ಹಲವು ಲಿಂಗಾಯತ ನಾಯಕರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ ಬಳಿಕ ಲಿಂಗಾಯತ ನಾಯಕನನ್ನೇ ಆ ಹುದ್ದೆಯ ಮೇಲೆ ಕೂರಿಸುವುದ ಉದ್ದೇಶ ಬಿಜೆಪಿ ಹೈಕಮಾಂಡ್‌ಗೆ ಇರಲಿಲ್ಲ. ಆದರೆ, ಹೋರಾಟ ಆರಂಭವಾದ ಬಳಿಕ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಯಿತು. ಹಾಗಾಗಿ, ಬೊಮ್ಮಾಯಿ ಅವರು ಆ್ಯಕ್ಸಿಡೆಂಟಲ್‌ ಸಿಎಂ” ಎಂದು ಕುಟುಕಿದರು.

ರಾಹುಲ್‌ ಗಾಂಧಿ ರೋಡ್‌ ಶೋ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಕುರಿತು ಮಾತನಾಡಿದ ಅವರು, “ರಾಹುಲ್‌ ಗಾಂಧಿ ಅವರು ಭಾನುವಾರ ಬೆಳಗ್ಗೆ ಕೂಡಲಸಂಗಮಕ್ಕೆ ಆಗಮಿಸುತ್ತಾರೆ. ಐಕ್ಯಮಂಟಪಕ್ಕೆ ನಮನ ಸಲ್ಲಿಸಿದ ಬಳಿಕ ಬಸವ ಭವನದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ವಿಜಯಪುರಕ್ಕೆ ಆಗಮಿಸುವ ಅವರು ರೋಡ್‌ ಶೋ ನಡೆಸಲಿದ್ದಾರೆ” ಎಂದರು. ಲಿಂಗಾಯತ ಮತಗಳನ್ನು ಸೆಳೆಯಲೆಂದೇ ಬಸವ ಜಯಂತಿ ದಿನ ರಾಹುಲ್‌ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, “ಬಸವಣ್ಣನವರು ಲಿಂಗಾಯತ ಸಮುದಾಯಕ್ಕೆ ಮಾತ್ರ ಸೀಮಿತ ಅಲ್ಲ” ಎಂದು ಹೇಳಿದರು.

ಇದನ್ನೂ ಓದಿ: Tipu Sultan: ಸಿಎಂ ಆದರೆ ಮತ್ತೆ ಟಿಪ್ಪು ಜಯಂತಿ ಆಚರಿಸ್ತೀರ? ಎಂಬ ಪ್ರಶ್ನೆಗೆ ಜಾಣ ಉತ್ತರ ಕೊಟ್ಟ ಸಿದ್ದರಾಮಯ್ಯ

Exit mobile version