ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ (Karnataka Election 2023) ಕಣ ದಿನೇ ದಿನೆ ಸಾಕಷ್ಟು ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯ ನಾಯಕರ ಏಟು – ಎದಿರೇಟುಗಳು ಪ್ರಾರಂಭವಾಗಿವೆ. ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, “ಸಿದ್ದರಾಮಯ್ಯ ಅವರು ಇದೇ ನನ್ನ ಕೊನೇ ಚುನಾವಣೆ ಎಂದು ಮತ ಕೇಳುತ್ತಿದ್ದಾರೆ. ಹೀಗಾಗಿ ಮತದಾರರು ಬಿಜೆಪಿಯ ಉತ್ಸಾಹಿ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಹೇಳಿಕೆಗೆ ಈಗ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದು, ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ನಾನು ಹೇಳಿಲ್ಲ. ಬೇಕಿದ್ದರೆ ನನ್ನೊಂದಿಗೆ ಓಟದ ಸ್ಪರ್ಧೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಟ್ವೀಟ್‌ನಲ್ಲೇನಿದೆ?
ನಾನು ನಿವೃತ್ತಿಯಾಗುತ್ತೇನೆ ಎಂದು ಹೇಳುತ್ತಿರುವುದು ಚುನಾವಣಾ ರಾಜಕಾರಣದಿಂದಲೇ ಹೊರತು, ಸಕ್ರಿಯ ರಾಜಕಾರಣದಿಂದ ಅಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿರುವಷ್ಟು ಆರೋಗ್ಯದಿಂದ ಇದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅವರು ಸಿದ್ಧ ಇದ್ದರೆ ಅವರ ಜತೆಯಲ್ಲಿ ಓಟದ ಸ್ಪರ್ಧೆಗೆ ನಾನು ಸಿದ್ಧ.
ಪ್ರಧಾನಿ ನರೇಂದ್ರ ಮೋದಿ ಅವರು ಏನನ್ನು ಹೇಳಲಿಕ್ಕೆ ಹೊರಟಿದ್ದಾರೆ? ಬಿ.ಎಸ್. ಯಡಿಯೂರಪ್ಪನವರನ್ನು
ವಯಸ್ಸಿನ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವಮಾನಕಾರಿಯಾಗಿ ಕಿತ್ತುಹಾಕಿದ ಬಿಜೆಪಿಯವರು ಈಗ ಅವರನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವುದಕ್ಕೆ ಕಾರಣ ಏನು? ಅವರ ಮೇಲಿನ ಗೌರವವೇ? ಅಥವಾ ಅನುಕಂಪ ಗಳಿಕೆಯ ತಂತ್ರವೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಈ ಟ್ವೀಟ್ ಬರೆದಿರುವ ಸಿದ್ದರಾಮಯ್ಯ ಅವರು ಅದಕ್ಕೆ ತಾವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜತೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಓಡಿರುವ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.
ಮೋದಿ ಭಾಷಣಕ್ಕೆ ಸಿದ್ದರಾಮಯ್ಯ 13 ಪ್ರಶ್ನೆಗಳ ಉತ್ತರ
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29ರಂದು ಶನಿವಾರ ರಾಜ್ಯ ವಿಧಾನಸಭಾ ಚುನಾವಣೆಯ ಅಧಿಕೃತ ಪ್ರಚಾರದ ಮೊದಲ ದಿನ ಮೂರು ಸಮಾವೇಶ ಮತ್ತು ಒಂದು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ ಮೂರು ಸಮಾವೇಶಗಳಲ್ಲಿ ಆಡಿದ ಮಾತುಗಳಿಗೆ ಪ್ರತಿಯಾಗಿ 13 ಪ್ರಶ್ನೆಗಳನ್ನು ಎತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು. ಮೋದಿ ಬರುವ ಮೊದಲೇ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದ ಅವರು ಬಳಿಕ ಮೋದಿ ಭಾಷಣ ಮುಗಿದ ಮೇಲೆ ಅಲ್ಲಿ ಎತ್ತಿದ ಪ್ರಶ್ನೆಗಳನ್ನೇ ಇಟ್ಟುಕೊಂಡು ಪ್ರಧಾನಿಯನ್ನು ಕೆಣಕಿದ್ದಾರೆ. ರಾಜ್ಯದ ಭ್ರಷ್ಟ ಸರ್ಕಾರವನ್ನು ಎದುರಿಗಿಟ್ಟುಕೊಂಡು ಎಷ್ಟೊಂದು ಸುಳ್ಳು ಹೇಳುತ್ತೀರಿ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಬೊಮ್ಮಾಯಿ ಎಂಬ ನಡ್ಡಾ ಮಾತಿಗೆ ನಾನು ಚಿರಋಣಿ ಎಂದ ಸಿಎಂ
ಸಿದ್ದರಾಮಯ್ಯ ಎತ್ತಿದ 13 ಸಂಗತಿಗಳು
1. ಹುಸಿಯ ನುಡಿಯಲು ಬೇಡ ಮೋದಿಯವರೇ!
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ! ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ !
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ! ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ಧಿ !
ನರೇಂದ್ರ ಮೋದಿ ಅವರೇ ಅವರೇ ನಿಮ್ಮ ಭಾಷಣ ಕೇಳಿ ಬಸವಣ್ಣನವರ ಈ ವಚನ ನೆನಪಾಯಿತು.
ಇದು ನಿಮ್ಮ ನಡೆ-ನುಡಿಗೆ ಹೇಳಿ ಮಾಡಿಸಿದಂತಿದೆ.
2. ನಿಮ್ಮ ಅಕ್ಕಪಕ್ಕದಲ್ಲಿರುವ ಭ್ರಷ್ಟ ಮುಖಗಳು ಕಾಣಲಿಲ್ಲವೇ ಮೋದಿ?
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎನ್ನುವ ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ, ಅಲ್ಲಿರುವ ಅದಾನಿ, ಅಂಬಾನಿಗಳು ಕಾಣಲಿಲ್ಲವೇ? ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟ ಮುಖಗಳೂ ಕಾಣಲಿಲ್ಲವೇ ನರೇಂದ್ರ ಮೋದಿ?
3. ಹೌದು ಭ್ರಷ್ಟ ಬಿಜೆಪಿಗೆ ಇದು ಅಮೃತ ಕಾಲ, ಜನರಿಗೆ ಮಾತ್ರ ವಿಷಕಾಲ
ರಾಜ್ಯದ ಬಿಜೆಪಿ ಸರ್ಕಾರದ ಸಚಿವರ 40% ಕಮಿಷನ್ ಕಿರುಕುಳದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನಿಮ್ಮ ಕಾರ್ಯಾಲಯಕ್ಕೆ ಬರೆದ ಪತ್ರವೂ ನಿಮಗೆ ನೆನಪಾಗಲಿಲ್ಲವೇ? ನಿಮ್ಮದೇ ಸಚಿವರ ಕಿರುಕಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದ ನೆನಪೂ ನಿಮಗೆ ಆಗಲಿಲ್ಲವೇ?
ಕಳೆದ ಮೂರೂವರೆ ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿರುವ ರಾಜ್ಯದ ಬಿಜೆಪಿ ಸರ್ಕಾರದ ಸಚಿವರಿಗೆ ಖಂಡಿತ ಇದು ಅಮೃತ ಕಾಲ. ಆದರೆ ನಿಮ್ಮಂತಹ ಭ್ರಷ್ಟರ ಸರ್ಕಾರ ಪಡೆದ ರಾಜ್ಯದ ಜನತೆಗೆ ಇದು ವಿಷಕಾಲ ನರೇಂದ್ರ ಅವರೇ..
4.. ಯಡಿಯೂರಪ್ಪರನ್ನು ಜೈಲಿಗೆ ಕಳಿಸಿದಿರಿ, ಸಿಎಂ ಪಟ್ಟದಿಂದ ಇಳಿಸಿದಿರಿ
ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ಧಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ ಯಾಕೆ? ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದಿರಿ, ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ, ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ?
ಇದನ್ನೂ ಓದಿ: Karnataka Election 2023: ಮಂಡ್ಯದಲ್ಲಿ ಬುಲ್ಡೋಜರ್ ತಂದು ನೆಲಸಮ ಮಾಡ್ತೇನೆ ಅಂದರಾ ಯೋಗಿ?: ಎಚ್.ಡಿ. ಕುಮಾರಸ್ವಾಮಿ
5. ಲಿಂಗಾಯತ ನಾಯಕರ ರಾಜಕೀಯ ಜೀವನ ಮುಗಿಸಿದ್ದು ಯಾರು?
ಲಿಂಗಾಯತ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕರೇ ಇರಬಾರದೆಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಹೀಗೆ ಸಾಲು ಸಾಲು ನಾಯಕರಿಗೆ ಈ ಬಾರಿ ಟಿಕೆಟ್ ನೀಡದೆ ಅವರ ರಾಜಕೀಯ ಜೀವನವನ್ನೇ ಮುಗಿಸುವ ಹುನ್ನಾರ ಮಾಡಿರುವವರು ನೀವೇ ಅಲ್ಲವೇ ನರೇಂದ್ರ ಮೋದಿಜಿ?
6. ಜಗದೀಶ್ ಶೆಟ್ಟರ್ ಅವರನ್ನು ನೀವು ಮೂಲೆಗೆ ತಳ್ಳಿದ್ದು ಯಾಕೆ? ಇದು ಲಿಂಗಾಯತರ ಪ್ರಶ್ನೆಯೂ ಹೌದು
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಲಿಂಗಾಯತರ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಯಾವ ಕಾರಣಕ್ಕೆ ಈ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದಿರಿ? ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿತ್ತಾ? ಸಿಡಿ ಹಗರಣ ಇತ್ತೇ? ಅವರು ಒಳ್ಳೆಯ ಆಡಳಿತಗಾರರರಾಗಿರಲಿಲ್ಲವೇ? ಯಾಕೆ ಅವರನ್ನು ಮೂಲೆಗೆ ತಳ್ಳಿದ್ದೀರಿ? ಅವರ ಈ ಪ್ರಶ್ನೆಗಳು ರಾಜ್ಯದ ಲಿಂಗಾಯತರ ಪ್ರಶ್ನೆಯೂ ಹೌದು. ಧಮ್-ತಾಕತ್ ಇದ್ದರೆ ಇದಕ್ಕೆ ಉತ್ತರ ಕೊಡಿ ನರೇಂದ್ರ ಮೋದಿಜಿ.
7. ಬಂಜಾರರು- ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ಕುತಂತ್ರ ಫಲಿಸದು
ಬಂಜಾರ ಸಮುದಾಯ ಮತ್ತು ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ನಿಮ್ಮ ಕುತಂತ್ರ ಫಲ ನೀಡಲಾರದು. ಬಂಜಾರರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿಯನ್ನು ತಂದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ?
8. ಸೋನಿಯಾ, ರಾಹುಲ್ ನಿಂದನೆಯೇ ನಿಮ್ಮ, ಪಕ್ಷದ ನಾಯಕರ ದಿನಚರಿ ಅಲ್ಲವೇ?
ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎನ್ನುವುದು ನಿಮ್ಮ ಇತ್ತೀಚಿನ ಸುಳ್ಳು. ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಿಂದಿಸುವುದೇ ನಿಮ್ಮ ಮತ್ತು ನಿಮ್ಮ ಪಕ್ಷದ ನಾಯಕರ ದಿನಚರಿ ಅಲ್ಲವೇ?
ಇದನ್ನೂ ಓದಿ: Mann Ki Baat : ದಿಲ್ಲಿಗೆ ಬಂದ ಬಳಿಕ ಜನರಿಗೆ ಹತ್ತಿರವಾಗಲು ನೆರವಾಗಿದ್ದು ಮನ್ ಕೀ ಬಾತ್: ಪ್ರಧಾನಿ ಮೋದಿ
9. ಸೋನಿಯಾ ಗಾಂಧಿಯನ್ನು ಜರ್ಸಿ ಕೌ ಎಂದವರು ನೀವಲ್ಲವೇ ಮೋದಿ?
ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾ ಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯೆಯ ವಿಷ ಇಲ್ಲವೇ?
10. ನೀವು ಕಟ್ಟಿಸಿದ 9 ಲಕ್ಷ ಮನೆಗಳನ್ನು ತೋರಿಸಿ.. ಇದು ನನ್ನ ಸವಾಲು
ರಾಜ್ಯದ ಬಿಜೆಪಿ ಸರ್ಕಾರ 9 ಲಕ್ಷ ಮನೆಗಳನ್ನು ಕಟ್ಟಿದೆ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಿರಲ್ಲಾ, ನಾವು ಕಟ್ಟಿರುವ ಮನೆಗಳ ಲೆಕ್ಕವನ್ನು ನಿಮಗೆ ಕೊಟ್ಟು ನಿಮ್ಮಿಂದ ಸುಳ್ಳು ಹೇಳಿಸಿದ ವಸತಿ ಸಚಿವರನ್ನು ಒಮ್ಮೆ ಜನರ ಮಧ್ಯೆ ಬಹಿರಂಗ ಚರ್ಚೆಗೆ ಕರೆತನ್ನಿ. ಇದು ನನ್ನ ಸವಾಲು.
11. ನೀರಾವರಿಗೆ ಹಣ ಕೊಟ್ಟವರು ನಾವು, ನಿರ್ಲಕ್ಷ್ಯ ಮಾಡಿದ್ದು ನೀವು..
2013-18ರ ಅವಧಿಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೀರಾವರಿಗೆ ಖರ್ಚು ಮಾಡಿ ರೈತರ ಹೊಲಕ್ಕೆ ನೀರು ಹರಿಸಿದ ಹೆಮ್ಮೆ ನಮ್ಮದು.. ಮೇಕೆದಾಟು, ಕಳಸ -ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳೆರಡೂ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದನ್ನು ರಾಜ್ಯದ ರೈತರಿಗೆ ಗೊತ್ತಿದೆ.
12. ಮಠಗಳಿಗೆ ಬಿಡುಗಡೆ ಮಾಡಿದ ಹಣದಲ್ಲೂ ಕಮಿಷನ್ ಪಡೆದಿರಲ್ಲವೇ?
ಕಮಿಷನ್ ನುಂಗುವ ಕರ್ನಾಟಕ ಸರ್ಕಾರದ ಚಾಳಿ ಮಠ-ಮಂದಿರಗಳನ್ನೂ ಬಿಟ್ಟಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೆ ಅದು ತಲುಪುವಾಗ ಕಡ್ಡಿ ಮಾತ್ರ ಉಳಿಯುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಗಳ ಆಕ್ರೋಶ ನಿಮಗೆ ಕೇಳಿಸಿಲ್ಲವೇ ನರೇಂದ್ರ ಮೋದಿ?
ಇದನ್ನೂ ಓದಿ: Karnataka Election 2023: ಶೀಘ್ರ ಕಾಂಗ್ರೆಸ್‌ನ 50 ನಾಯಕರ ಮೇಲೆ ಐಟಿ, ಲೋಕಾ ದಾಳಿ: ಲಕ್ಷ್ಮೀ ಹೆಬ್ಬಾಳಕರ್ ಆರೋಪ
13. ಮಾಡಾಳ್ ಜೈಲಿನಲ್ಲಿರುವುದು ದೇಶ ಸೇವೆ ಮಾಡಿದ್ದಕ್ಕಾ ನರೇಂದ್ರ ಮೋದಿಜಿ?
ನಿಮ್ಮದೇ ಪಕ್ಷದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಅವರ ಮಗ ಈಗ ಜೈಲಲ್ಲಿರುವುದು ಯಾವ ದೇಶ ಸೇವೆ ಮಾಡಿದ್ದಕ್ಕಾಗಿ ಮೋದಿಯವರೇ? ಪ್ರತಿಷ್ಠಿತ ಕೆಎಸ್ ಡಿಸಿಎಎಲ್ ಕಚೇರಿಯಲ್ಲಿಯೇ ಈ ಶಾಸಕರ ಮಗ ಲಂಚ ತಿನ್ನುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದನ್ನಲ್ಲಾ? ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲಿ ಎಂಟುವರೆ ಕೋಟಿ ಹಣವನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದರಲ್ಲಾ ಅದೇನು ಅವರು ಬೆಳೆದ ಅಡಿಕೆ ಮಾರಾಟದ ದುಡ್ಡೇ
ನರೇಂದ್ರ ಮೋದಿ ಅವರೇ?