Site icon Vistara News

DK Shivakumar: ನಾನೇ ಮುಂದಿನ ಸಿಎಂ ಅಂದರೇ ಡಿ.ಕೆ. ಶಿವಕುಮಾರ್?; ಸಿದ್ದರಾಮಯ್ಯ ಸಹಕಾರ ಕೋರಿದ ಡಿಕೆಶಿ

dk shivakumar next CM

ತುಮಕೂರು: ತಾನೇ ಮುಂದಿನ ಮುಖ್ಯಮಂತ್ರಿ (Next CM) ಆಗಲಿದ್ದೇನೆ ಎಂಬ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ರವಾನೆ ಮಾಡಿದ್ದಾರೆ. ಇಲ್ಲಿನ ನೊಣವಿನಕೆರೆ ಅಜ್ಜಯ್ಯನ ದರ್ಶನದ ಬಳಿಕ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಈ ಹಿಂದೆ ನಾನು ಮಂತ್ರಿ ಆಗದೇ ಇದ್ದಾಗ ತಾಳ್ಮೆಯಿಂದ ಇರಲಿಲ್ಲವಾ‌? ಅವರಿಗೆ (ಸಿದ್ದರಾಮಯ್ಯ – Siddaramaiah) ನಾನು ಸಹಕಾರ ಕೊಟ್ಟಿದ್ದೇನೆ. ಈಗ ಅವರು ನನಗೆ ಸಹಕಾರ ಕೊಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರ ಸರ್ಕಾರ ಅವಧಿಯಲ್ಲಿ ನನಗೆ ಸಚಿವಗಿರಿ ಸಿಗದೇ ಇದ್ದಾಗ ಅವರಿಗೆ ನಾನು ಸಹಕಾರವನ್ನು ಕೊಟ್ಟಿದ್ದೆ. ಈಗ ಅವರು ನನಗೆ ಸಹಕಾರ ಕೊಡುವ ವಿಶ್ವಾಸವಿದೆ. ಅಜ್ಜಯ್ಯನ ಆಶೀರ್ವಾದದಿಂದ ಇನ್ನೂ ಎತ್ತರಕ್ಕೆ ಹೋಗುವ ನಂಬಿಕೆ ಇದೆ ಎಂದು ಪ್ರತಿಕ್ರಿಯೆ ನೀಡಿದರು.

ನಾನು ಪಕ್ಷಕ್ಕೆ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ. ದಿನೇಶ್ ಗುಂಡೂರಾವ್ ಅವರು ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಟ್ಟಾಗ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ನನ್ನ ಹೆಗಲಿಗೆ ಜವಾಬ್ದಾರಿಯನ್ನು ಹೊರೆಸಿದ್ದರು. ನಾನು ಜೈಲಿಂದ ಹೊರಬರುತ್ತಲೇ ಅಧಿಕಾರ ಹಿಡಿದೆ. ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದಿದ್ದೇನೆ. ಮಂಡ್ಯ ಜಿಲ್ಲೆಯ ಎಲ್ಲ ಶಾಸಕರು, ಸ್ಥಳೀಯ ಶಾಸಕರು ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಇಲ್ಲಿ ಬಂದಿದ್ದಾರೆ. ಎಲ್ಲರೂ ಅವರವರಾಗಿಯೇ ಬಂದಿದ್ದಾರೆ. ನೋಡೋಣ, ಮುಖ್ಯಮಂತ್ರಿ ಆಗುತ್ತೇನೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ ಜಯದ ಹಿಂದಿನ ಚಾಣಕ್ಯ ಈ ಸುನೀಲ್‌ ಕನುಗೋಲು! ಇವರು ಎಲ್ಲಿಯವರು?

ನೊಣವಿನಕೆರೆ ಅಜ್ಜಯ್ಯನ ಮಠ ನನಗೆ ದೈವ ಕ್ಷೇತ್ರ

ಈ ಮಠ ನನಗೆ ಪುಣ್ಯ, ದೈವ ಕ್ಷೇತ್ರವಾಗಿದೆ. ನನಗೆ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ನಾನು ಅಧಿಕಾರ ತೆಗೆದುಕೊಂಡಾಗಿನಿಂದಲೂ ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ನಿರ್ಧಾರ ಮಾಡಿದ್ದೇನೆ. ಇಲ್ಲೇ ಮಾರ್ಗದರ್ಶನ ಪಡೆದು ನಿರ್ಧಾರ ಮಾಡಿದ್ದೇನೆ. ನನಗೆ ಸಂಪೂರ್ಣವಾದ ಮಾರ್ಗದರ್ಶನ ಕೊಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇ.ಡಿ., ಐಟಿ ರೇಡ್ ಆದಾಗಲೂ ನಾನು ಅಜ್ಜಯ್ಯನ ಮಾರ್ಗದರ್ಶನ ಪಡೆದಿದ್ದೆ. ಹೆಲಿಕಾಪ್ಟರ್ ಅವಘಡ ಆದ ನಂತರ ಕೂಡ ನನ್ನ ಮಗಳು ಇಲ್ಲಿಗೆ ಬಂದು ಹೋದಳು. ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟವರು ಅಜ್ಜಯ್ಯನವರು. ನಾನು 134 ಸೀಟು ಕೇಳಿಕೊಂಡಿದ್ದೆ. ಯಾರ ಹಂಗಿನಲ್ಲೂ ನಾವು ಅಧಿಕಾರ ಮಾಡಬಾರದು ಎಂದು ಬೇಡಿಕೊಂಡಿದ್ದೆ. ನಾನು ಅಧಿಕಾರ ಹಿಡಿದಾಗಲೇ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕು ಅನ್ನೋ ಮಾರ್ಗದರ್ಶನ ಬಂದಿತ್ತು. ಹೀಗಾಗಿಯೇ ನಾವು ಗೃಹ ಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವ ಯೋಜನೆ ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇವತ್ತು ಚೆಲುವರಾಯಸ್ವಾಮಿ ಇಲ್ಲಿ ಬಂದಿದ್ದಾರೆ. ಅವರಿಗೆ ಒಂದು ಆತಂಕ ಇತ್ತು. ಮಂಡ್ಯದಲ್ಲಿ ಏನಾಗುತ್ತದೋ ಏನೋ ಎನ್ನುವ ಆತಂಕ ಇತ್ತು. ಅವರಿಗೇ ಕೂಡ ಧೈರ್ಯ ತುಂಬಿದೆ. ಈಗ ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿದೆ. ಇದು ಮಂಡ್ಯ ಜನತೆಯ ಗೆಲುವು. ನಾಮಿನೇಷನ್ ಹಾಕುವಾಗಲೂ ಅಜ್ಜನ ನೆನಸಿಕೊಂಡು ಹಾಕಿದ್ದೆ. ಹೀಗಾಗಿ ಎಲ್ಲ ರಿಸಲ್ಟ್ ಬಂದ ಮೇಲೆ ಮೊದಲು ಇಲ್ಲಿಗೆ ಬಂದಿದ್ದೇನೆ. ಗುರಿ ತಲುಪಬೇಕಾದರೆ ಗುರು ಮಾರ್ಗದರ್ಶನ ಬೇಕಾಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಕುಟಂಬದ ಜತೆ ಹಾಜರ್‌

ಡಿ.ಕೆ.ಶಿವಕುಮಾರ್ ಅವರು ತಮ್ಮ ಕುಟುಂಬದ ಜತೆ ನೊಣವಿನಕೆರೆ ಅಜ್ಜಯ್ಯನಿದ್ದಲ್ಲಿಗೆ ಬಂದಿದ್ದು, ಮಠದ ಮೂಲ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿ ಮಾಧ್ಯಮದವರಿಗೆ, ಇತರರಿಗೆ ಪ್ರವೇಶ ಇರಲಿಲ್ಲ. ರಹಸ್ಯವಾಗಿ ಅವರು ಪೂಜೆ ಮಾಡಲಿದ್ದಾರೆ. ಇಂದು ಡಿಕೆಶಿ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬರುತ್ತಿದ್ದಂತೆ ಅವರಿಗೆ ಶಾಲು ಹೊದೆಸಿ, ಹಾರ ಹಾಕಿ ಬರಮಾಡಿಕೊಳ್ಳಲಾಗಿದೆ. ಅಲ್ಲಿ ಹಲವು ಕಾರ್ಯಕರ್ತರೂ ಸೇರಿದ್ದರು. ಡಿ.ಕೆ.ಶಿವಕುಮಾರ್ ಜತೆ ಅವರ ಸೋದರ ಡಿ.ಕೆ.ಸುರೇಶ್ ಕೂಡ ಇದ್ದರು.

ಇದನ್ನೂ ಓದಿ: Karnataka Election 2023: ಯಾರಾಗಲಿದ್ದಾರೆ ಮುಂದಿನ ಸಿಎಂ? 50:50 ಫಾರ್ಮುಲಾ!

ಮುಂದಿನ ಸಿಎಂ ಘೋಷಣೆಗೆ ಸಿಡಿಮಿಡಿ

ಇದೇ ವೇಳೆ ಅನೇಕ ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು. ಅವರಿಗೆ ಹಾಕಲು ಹೂವು ತಂದಿದ್ದರು. ಆದರೆ ಅದನ್ನು ನೋಡಿ ಡಿ.ಕೆ. ಶಿವಕುಮಾರ್​​ ಸಿಟ್ಟಾಗಿದ್ದಾರೆ. ‘ತರಲೆ’ಗಳು ಎಂದು ಬೈದಿದ್ದಾರೆ. ಹೂವು ಹಾಕಿಕೊಳ್ಳೋದಿಲ್ಲ, ದೇವರಿಗೆ ಹಾಕಿ, ನನ್ನ ಮೇಲೆ ಅಭಿಮಾನ ಇದ್ರೆ ದೇವಸ್ಥಾನದ ಕಾಂಪೌಂಡಿಂದ ಆಚೆ ಹೋಗಿ ಎಂದು ಖಡಕ್ ಆಗಿ ಹೇಳಿದ್ದಾರೆ.

Exit mobile version