Site icon Vistara News

DK Suresh: ರಾಜಕೀಯ ಸಾಕಾಗಿದೆ ಅಂದ ಡಿ.ಕೆ ಸುರೇಶ್‌; ಸಂಸತ್‌ ಚುನಾವಣೆಗೆ ಸ್ಪರ್ಧೆ ಡೌಟಾ?

DK Suresh

#image_title

ರಾಮನಗರ: ʻʻರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಅನ್ನೊದು ನನ್ನ ಉದ್ದೇಶʼʼ- ಹೀಗೆ ವೈರಾಗ್ಯದ ಮಾತು ಆಡಿದ್ದಾರೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ (DK Suresh). ಅವರ ಈ ಮಾತು 2024ರ ಲೋಕಸಭಾ ಚುನಾವಣೆಯಲ್ಲಿ (Parliament Election) ಅವರು ಕಣಕ್ಕಿಳಿಯುವ ಬಗ್ಗೆ ಸಂಶಯ ಮೂಡಿಸಿದೆ.

ʻʻಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು. ಯಾರು ಸೂಕ್ತ ಅಂತ ಅವರು ತೀರ್ಮಾನ ಮಾಡಿದ್ರೆ ಅವರಿಗೆ ಬೆಂಬಲ ಕೊಡುತ್ತೇನೆʼʼ ಎಂದು ರಾಮನಗರದಲ್ಲಿ ಅವರು ಹೇಳಿದರು. ನಮ್ಮ ಪಕ್ಷದಲ್ಲಿ ನನ್ನನ್ನು ಹೊರತಾಗಿಯೂ ಬೇರೆ ಸೂಕ್ತ ಅಭ್ಯರ್ಥಿಗಳಿದ್ದಾರೆ. ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.

ಡಿ.ಕೆ. ಸುರೇಶ್‌ ಅವರನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿವೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಅವರು ಹೊಂದಾಣಿಕೆ ಮಾಡಿಕೊಳ್ಳಲಿ, ಯಾರು ಬೇಕಾದ್ರೂ ನಿಲ್ಲಲಿ.
ನನಗಿರೂದು ಒಂದೇ ಮತ, ಪ್ರಧಾನಿಗಿರೋದು ಕೂಡಾ ಒಂದೇ ಮತ. ಆ ಮತವನ್ನು ಯಾರಿಗೆ ಹಾಕಬೇಕು ಅಂತ ಜನ ತೀರ್ಮಾನ ಮಾಡ್ತಾರೆʼʼ ಎಂದು ಹೇಳಿದರು.

ಕೆಡಿಪಿ ಸಭೆಯಲ್ಲಿ ಡಿ.ಕೆ. ಸುರೇಶ್‌ ವಾರ್ನಿಂಗ್‌

ರಾಮನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಆರಂಭದಲ್ಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ʻʻಹೊಸ ಸರ್ಕಾರ ಬಂದಿದೆ. ನಿಮ್ಮಿಂದ ಬಹಳ‌ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕೆಲಸ ಮಾಡದವರನ್ನು ವರ್ಗಾವಣೆ ಮಾಡಿಸುವುದು ನನಗೆ ದೊಡ್ಡ ವಿಷಯವಲ್ಲ. ಆದರೆ ಅದು ನನ್ನ ಕೆಲಸ ಅಲ್ಲ. ನನ್ನ ವೇಗಕ್ಕೆ ತಕ್ಕಂತೆ, ನೀವು ಕೆಲಸ ಮಾಡಬೇಕು. ಆ ರೀತಿ‌ ಕೆಲಸ ಮಾಡಲಾಗದವರು ಈಗಲೇ ಸಭೆಯಿಂದ ಹೋಗಬಹುದುʼʼ ಎಂದು ಹೇಳಿದರು.

ʻʻನಿಮ್ಮ ಭ್ರಷ್ಟಾಚಾರ ಮತ್ತು ಶೇ.40 ಕಮಿಷನ್‌ಗೆ ಇತಿಶ್ರೀ ಹಾಡಲಾಗುವುದು. ಹಿಂದಿನ ಸರ್ಕಾರದ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದರು. ಹಾಗಾಗಿ ಬದಲಾವಣೆಗಾಗಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ನೀವು ಮಾಡಬೇಕಾದ ಕೆಲಸಗಳ ಬಗ್ಗೆ ಡಿಸಿಗೆ ಸೂಚಿಸಿದ್ದೇನೆ. ರಾಮನಗರ ಜಿಲ್ಲೆ ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿ ಇರಬೇಕಾದರೆ ಅದಕ್ಕೆ ನಿಮ್ಮ ಸಹಕಾರ ಬೇಕಿದೆ. ಕೆಲಸ ಮಾಡದವರ ಬಗ್ಗೆ ದಾಕ್ಷಿಣ್ಯ ತೋರದೆ ಶಿಸ್ತು ಕ್ರಮ ಕೈಗೊಳ್ಳ ಸೂಚಿಸಿದ್ದೇನೆʼʼ ಎಂದು ಹೇಳಿದ ಡಿ.ಕೆ. ಸುರೇಶ್‌, ನಾನು ನಿಮ್ಮಿಂದ ಒಂದು ರೂಪಾಯಿ ಸಹ ಬಯಸಲ್ಲ, ಕಾಫಿ ಟೀ ಕೂಡ ಬೇಡ. ನಿಮ್ಮಿಂದ ಉತ್ತಮ ಕೆಲಸ ಮಾತ್ರ ಬಯಸುವೆ. ಅದಕ್ಕಾಗಿ, ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಿ ಎಂದು ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ವಾರದಲ್ಲಿ ಒಂದು‌ ದಿನ ತಾಲೂಕುಗಳಿಗೆ ಭೇಟಿ ನೀಡುವಂತೆ ಸೂಚನೆ ನೀಡಿದರು.

ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಮ ನಗರ ಶಾಸಕ ಇಕ್ಬಾಲ್ ಹುಸೇನ್ ಸೇರಿ ಡಿಸಿ, ಸಿಇಓ ಭಾಗಿಯಾಗಿದ್ದರು.

ಇದನ್ನೂ ಓದಿ : Rajakaluve Encroachment: ಮತ್ತೆ ಠುಸ್‌ ಪಟಾಕಿಯಾದ ಬಿಬಿಎಂಪಿ ಡೆಮಾಲಿಷನ್ ಡ್ರೈವ್; ಸ್ಟೇ ಆರ್ಡರ್‌ ನೋಡಿ ಕಾಲ್ಕಿತ್ತರು

Exit mobile version