Site icon Vistara News

ಸಿದ್ದರಾಮಯ್ಯರನ್ನು ಮೆಚ್ಚಿಸಲು ನಾನು ಬಂದಿಲ್ಲ; ಮಲ್ಲಿಕಾರ್ಜುನ ಖರ್ಗೆ ಹೀಗೆ ಹೇಳಿದ್ದು ಏಕೆ?

ಮೈಸೂರು: ನಾನು ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಅಥವಾ ಸಂತೋಷಪಡಿಸಲು ಬಂದಿಲ್ಲ. ಜತೆಗೆ ಟೀಕೆ ಟಿಪ್ಪಣಿ ಮಾಡಲೂ ಬಂದಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರ ಮನವಿ ಮೇರೆಗೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಿರುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಸಿದ್ದರಾಮಯ್ಯ ಆಡಳಿತ ನೀತಿ- ನಿರ್ಧಾರ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಸಿದ್ದರಾಮಯ್ಯಗೆ ಅಧಿಕಾರ ಸಿಕ್ಕಾಗ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಯಲ್ಲಿ ಅಂದು ಕೇಂದ್ರದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕೊಡುಗೆಯೂ ಇದೆ. ಹಳೆಯ ಯೋಜನೆಗಳು ಚಲ್ತಿ ಕಾ ನಾಮ್ ಗಾಡಿ ಎಂಬಂತೆ ನಡೆದುಕೊಂಡು ಹೋಗುತ್ತಿದೆ. ಆದರೆ ಹೊಸ ಯೋಜನೆಗಳನ್ನು ಜಾರಿಗೆ ತರುವುದು ಪ್ರಮುಖ ಕರ್ತವ್ಯವಾಗಿದೆ. ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಿದ್ದರಾಮಯ್ಯ ಪ್ರಯತ್ನಿಸಿದ್ದರಿಂದಲೇ ಸಾಧ್ಯವಾಯಿತು. ಬೇರೆ ರಾಜ್ಯಗಳಲ್ಲಿ ಇಲ್ಲದ ವಿನೂತನ ಯೋಜನೆಗಳನ್ನು ಸಿದ್ದರಾಮಯ್ಯ ಜಾರಿಗೊಳಿಸಿದರು. ಪ್ರಸ್ತುತ ಸರ್ಕಾರ ಯಾವುದೇ ಜನಪರ ಕಾರ್ಯ ಮಾಡುತ್ತಿಲ್ಲ, ಅಧಿಕಾರ ಇರುವಾಗ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರದಿದ್ದರೆ ಜನ ಒಪ್ಪುವುದಿಲ್ಲ ಎಂದರು.

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಆರ್ಟಿಕಲ್ 371ಜೆ ಒಪ್ಪಿಕೊಂಡು ಕಾನೂನು ಮಾಡಿ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದ ಸಾವಿರಾರು ಮಂದಿ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಯಿತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸಿದ್ದರಾಮಯ್ಯ ನಡೆದುಕೊಂಡರು. ಹಾಗಾಗಿಯೇ ಸಿದ್ದರಾಮಯ್ಯ ಅವರನ್ನು ಜನರು ಮೆಚ್ಚಿಕೊಂಡರು. ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿದಿದ್ದರಿಂದಲೇ ಕಾರ್ಮಿಕನ ಮಗನಾಗಿರುವ ನಾನು ವಿರೋಧ ಪಕ್ಷದ ನಾಯಕನಾಗಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.

ಇ.ಡಿ ವಿಚಾರಣೆಯಿಂದ ಮಾನಸಿಕವಾಗಿ ಕುಗ್ಗುವುದಿಲ್ಲ

ಕೇಂದ್ರ ಕಾಂಗ್ರೆಸ್‌ ನಾಯಕರಿಗೆ ಇ.ಡಿ ನೋಟಿಸ್‌ ಹಾಗೂ ವಿಚಾರಣೆ ಸಂಬಂಧ ಪ್ರತಿಕ್ರಿಯಿಸಿದ ಖರ್ಗೆ, ಈ ದೇಶಕ್ಕಾಗಿ ಮನೆಯವರನ್ನೇ ಕಳೆದುಕೊಂಡವರು ಅವ್ಯವಹಾರ ಮಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿದರು. ಸ್ವಾತಂತ್ರ್ಯ ಹೋರಾಟ ಮಾಡಿ, ಚಳವಳಿ, ತ್ಯಾಗ, ಬಲಿದಾನ ಮಾಡಿರುವ ಪಕ್ಷ ಕಾಂಗ್ರೆಸ್, ಬಿಜೆಪಿಯವರು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ‌. ಸತ್ಯಗ್ರಹವೇ ಮಾಡದವರು, ತ್ಯಾಗ ಬಲಿದಾನ ಗೊತ್ತಿಲ್ಲದ ಬಿಜೆಪಿಯವರಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಗಿಮಿಕ್‌ಗಳನ್ನು ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜಕಾರಣದಿಂದ ಯಡಿಯೂರಪ್ಪ ನಿವೃತ್ತಿ

ರಾಜಕಾರಣದಿಂದ ಯಡಿಯೂರಪ್ಪ ನಿವೃತ್ತಿ ವಿಚಾರ ಅವರ ವೈಯುಕ್ತಿಕ ನಿರ್ಧಾರ. ಅದರ ಬಗ್ಗೆ ನಾನೇನೂ ಮಾತನಾಡುವುದಿಲ್ಲ, ಎಲ್ಲರಿಗೂ ಅವರದ್ದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಯಾರೇ ಇರಲಿ ಬಿಡಲಿ ದೇಶವಂತೂ ಇರುತ್ತದೆ. ನಾನಿಲ್ಲವಾದರೆ ಇನ್ನೊಬ್ಬರು ಬರುತ್ತಾರೆ, ಹಾಗೇ ಯಡಿಯೂರಪ್ಪ ಯೋಚನೆ ಮಾಡಿರಬಹುದು ಎಂದರು.

ಫಲಿತಾಂಶಕ್ಕೂ ಮುನ್ನವೇ ನಾನು ಸಿಎಂ ಎನ್ನುವುದು ಸರಿಯಲ್ಲ

ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ನಾನು ಸಿಎಂ- ನಾನು ಸಿಎಂ ಎಂದು ಹೇಳುವುದು ಸರಿಯಲ್ಲ. ಸಿಎಂ ಯಾರಾಗಬೇಕು ಎಂಬುದು ಮೈಸೂರು, ಬೆಂಗಳೂರು, ಕಲಬುರಗಿಯಲ್ಲೂ ತೀರ್ಮಾನ ಆಗುವುದಿಲ್ಲ. ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವತ್ತಿನ ರಾಜಕೀಯ ಪರಿಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ಯಾರಿಗೆ ನಾಯಕತ್ವ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತದೆ. ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಹೋಗುವುದು. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಅದೇ ನಮ್ಮ ಉದ್ದೇಶ ಎಂದು ತಮ್ಮದೇ ಪಕ್ಷದ ನಾಯಕರುಗಳಿಗೆ ಪರೋಕ್ಷವಾಗಿ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ವಿ.ಆರ್‌.ಸುದರ್ಶನ್, ಡಾ.ಎಚ್‌.ಸಿ.ಮಹದೇವಪ್ಪ ಸೇರಿ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದಪುರಿ ಸ್ವಾಮೀಜಿಯವರು ಭಾಗಿಯಾಗಿದ್ದರು.

Exit mobile version