ಮಂಡ್ಯ: ಶ್ರೀರಂಗ ಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದಲ್ಲಿ ಚಿಕ್ಕ ಹೋಟೆಲ್ ನಡೆಸುತ್ತಿದ್ದ ಬೆಣ್ಣೆ ಇಡ್ಲಿ ಖ್ಯಾತಿಯ ಹೋಟೆಲ್ ಶಿವಣ್ಣ ಇನ್ನಿಲ್ಲ. ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶಿವಣ್ಣ ಅವರ ಹೋಟೆಲ್‌ನ ಇಡ್ಲಿ ರುಚಿಕರ ಮತ್ತು ಅಗ್ಗ ಎರಡೂ ಆಗಿತ್ತು. ಅದರ ರುಚಿಗೆ ಮಾರು ಹೋಗಿ ಎಲ್ಲೆಲ್ಲಿಂದಲೋ ಜನ ಬಂದು ಕಾಯುತ್ತಿದ್ದರು. ಶಿವಣ್ಣ ಅವರು ಕೇವಲ 30 ರೂಪಾಯಿಗೆ ಎಂಟು ಇಡ್ಲಿ ಕೊಡುತ್ತಿದ್ದರು. ಅದಕ್ಕೆ ಬೆಣ್ಣೆ ಮತ್ತು ಚಟ್ನಿ ಕೊಡುತ್ತಿದ್ದರು. ಇದರ ರುಚಿಗೆ ಮಾರು ಹೋಗುವ ಜನ ಇಡ್ಲಿಗಾಗಿ ಕ್ಯೂ ನಿಲ್ಲುತ್ತಿದ್ದರು.
ಪ್ರತಿದಿನ ಹೊಟೇಲ್ ಮುಂದೆ ಕ್ಯೂ ನಿಂತು ಮುಂಗಡ ಹಣ ಪಾವತಿಸಿ ಟೋಕನ್ ಪಡೆದುಕೊಂಡು ಇಡ್ಲಿ ತಿನ್ನಬೇಕಾಗುತ್ತಿತ್ತು. ಎಲ್ಲರ ಬಾಯಲ್ಲೂ ಬೆಣ್ಣೆ ಇಡ್ಲಿ ಶಿವಪ್ಪ ಎಂದೇ ಖ್ಯಾತಿ ಪಡೆದ ಪಡೆದಿದ್ದರು ಶಿವಣ್ಣ. ಇವರ ಸಣ್ಣ ಹೋಟೆಲ್‌ಗೆ ಊರಿನವರು ಮಾತ್ರವಲ್ಲ ಹೊರ ಊರಿನವರೂ ಬರುತ್ತಿದ್ದರು. ವಿದೇಶಿಯರೂ ಇಲ್ಲಿನ ಇಡ್ಲಿಯ ರುಚಿಗೆ ಮಾರು ಹೋಗಿದ್ದರು. ಇಷ್ಟೆಲ್ಲ ವ್ಯಾಪಾರ, ಬೇಡಿಕೆ ಇದ್ದರೂ ಶಿವಣ್ಣ ಮಾತ್ರ ಇಡ್ಲಿಯ ದರ ಹೆಚ್ಚಿಸಿರಲಿಲ್ಲ. ಜನರು ತೃಪ್ತಿಯಿಂದ ತಿಂದು ಹೋಗುವುದೇ ಖುಷಿ ಎನ್ನುತ್ತಿದ್ದರು.
ಸ್ವಗ್ರಾಮ ದರಸಗುಪ್ಪೆಯಲ್ಲಿ ಬೆಣ್ಣೆ ಇಡ್ಲಿ ಶಿವಣ್ಣನ ಅಂತ್ಯಕ್ರಿಯೆ ನಡೆಯಲಿದೆ.