Site icon Vistara News

20% ಇರುವ ಮುಸ್ಲಿಮರೇ ಹೀಗೆ ಮಾಡಬಹುದಾದ್ರೆ 80% ಹಿಂದುಗಳು ಏನೆಲ್ಲಾ ಮಾಡಬಹುದು: ಆರಗ ಪ್ರಶ್ನೆ

ಆರಗ ಜ್ಞಾನೇಂದ್ರ

ಶಿವಮೊಗ್ಗ: ಕೇವಲ ಶೇಕಡಾ 20ರಷ್ಟಿರುವ ಮುಸ್ಲಿಮರು ಏನು ಬೇಕಾದ್ರೂ ಮಾಡಬಹುದಾದರೆ ಶೇಕಡಾ 80ರಷ್ಟಿರುವ ಹಿಂದುಗಳು ಏನೆಲ್ಲಾ ಮಾಡಬಹುದು ಯೋಚಿಸಿ: ಹೀಗೆಂದು ಪ್ರಶ್ನಿಸಿದ್ದಾರೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು.

ಬೆಂಗಳೂರಿನ ಜಯಮಹಲ್‌ನಲ್ಲಿರುವ ತಮ್ಮ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ನುಗ್ಗಿ ಪ್ರತಿಭಟನೆ ನಡೆಸಿದ ವಿದ್ಯಮಾನಕ್ಕೆ ಪ್ರತಿಕ್ರಿಯಿಸಿದ ಅವರು, ʻʻಅದು ನನ್ನ ವಿರುದ್ಧದ ಸಿಟ್ಟಲ್ಲ. ಆರೋಪಿಗಳನ್ನು ಬಂಧಿಸಿ, ಶಿಕ್ಷಿಸಿ, ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ ಅಷ್ಟೆʼʼ ಎಂದು ಹೇಳಿದರು.

ʻʻಬಿಜೆಪಿ ಕಾರ್ಯಕರ್ತರನ್ನು ಕಳೆದುಕೊಂಡ ನೋವು ಸಹಜವಾಗಿ ಇರುತ್ತದೆ. ಹೀಗಾಗಿಯೇ ಸಿಟ್ಟಿನಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದರು. ಈಗ ಅವರಿಗೇ ದುಡುಕಿನ ಅರಿವಾಗಿದೆ. ಅದನ್ನು ವಾಪಸ್‌ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆʼʼ ಎಂದರು ಆರಗ ಜ್ಞಾನೇಂದ್ರ.

ʻʻಕಾರ್ಯಕರ್ತರು ಯಾರದ್ದೋ ಸಿಟ್ಟನ್ನು ಯಾರದ್ದೋ ಮೇಲೆ ಹಾಕಿದ್ದರು. ನಿಮ್ಮ ಆಕ್ರೋಶ ಕೊಲೆಗಡುಕರ ವಿರುದ್ಧ ಇರಬೇಕಿತ್ತುʼʼ ಎಂದಿರುವ ಅವರು, ʻʻಸಿಟ್ಟು, ಆಕ್ರೋಶ, ನೋವು ನಿಜ. ಅದು ರಾಷ್ಟ್ರದ್ರೋಹಿಗಳ ವಿರುದ್ಧ ಆಗಬೇಕು. ಅನೇಕ ಹಿರಿಯರು ಬಹಳ ಕಷ್ಟಪಟ್ಟು ನಮ್ಮ ಪಕ್ಷ ಕಟ್ಟಿದ್ದಾರೆ. ನಮ್ಮ ಹಿರಿಯರ ಆಸೆ ಒಂದೊಂದೇ ಈಡೇರುತ್ತಿವೆ. ಈ ಹೊತ್ತಿನಲ್ಲಿ ಸ್ವಲ್ಪ ತಾಳ್ಮೆ ವಹಿಸಬೇಕುʼʼ ಎಂದು ಹೇಳಿದರು ಆರಗ ಜ್ಞಾನೇಂದ್ರ.

ʻʻಹಿಂದೂಗಳ ಮೇಲೆ ದಾಳಿ ನಡೆಸುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡುವಂತೆ ಎಬಿವಿಪಿ ಆಗ್ರಹಿಸಿದೆ. ರಾಜ್ಯದಲ್ಲಿ ಬಿಜೆಪಿ ನಿಲುವು ಸಹ ಅದೇ ಆಗಿದೆ. ಕೇವಲ ಶೇಕಡಾ 20ರಷ್ಟಿರುವ ಮುಸ್ಲಿಮರು ಏನು ಬೇಕಾದ್ರೂ ಮಾಡಬಹುದಾದರೆ ಶೇಕಡಾ 80ರಷ್ಟಿರುವ ಹಿಂದುಗಳು ಏನೆಲ್ಲಾ ಮಾಡಬಹುದು ಯೋಚಿಸಿ ಆದರೆ, ನಾವು ಆ ರೀತಿ ಮಾಡುವುದಿಲ್ಲʼʼ ಎಂದರು ಆರಗ ಜ್ಞಾನೇಂದ್ರ.

ಸೈದ್ಧಾಂತಿಕವಾಗಿ ನಾವು ಒಂದೇ
ʻಇಂದು ಬೆಳಗ್ಗೆ ಎಬಿವಿಪಿಯವರು ಬೆಂಗಳೂರಿನ ನನ್ನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪಿಎಫ್ ಐ, ಎಸ್ ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ಬಡವನಾದರೂ ಪಕ್ಷಕ್ಕೆ, ಸಂಘಟನೆಗೆ ಒತ್ತು ನೀಡುವ ಕಾರ್ಯಕರ್ತರ ಸಾವಾದಾಗ ನೋವು, ಆಕ್ರೋಶ ಸಹಜ. ನಮ್ಮಲ್ಲಿ ಸೈದ್ಧಾಂತಿಕವಾಗಿ ಯಾವುದೇ ಭಿನ್ನಮತ ಇಲ್ಲʼʼ ಎಂದು ಆರಗ ಜ್ಞಾನೇಂದ್ರ ಹೇಳಿದರು.

ʻʻನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಣ ಅವರು ಕಾಂಗ್ರೆಸ್ ಜೊತೆಗೆ ಹೋಗುತ್ತಾರೆ ಎಂದಲ್ಲʼʼ ಎಂದರು.

Exit mobile version