Site icon Vistara News

ಬೊಮ್ಮಾಯಿಗೆ ಕುರುಬರ ಮೇಲೆ ಪ್ರೀತಿ ಇದ್ದರೆ ಎಸ್‌ಟಿಗೆ ಸೇರಿಸಲಿ, ಈಶ್ವರಪ್ಪರನ್ನು ಸಿಎಂ ಮಾಡಲಿ: ಸಿದ್ದು ಸವಾಲು

siddaramaiah and basavaraj bommai

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕುರುಬರ ಮೇಲೆ ಪ್ರೀತಿ ಇದ್ದಿದ್ದು ನಿಜವಾಗಿದ್ದರೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲಿ. ಅಲ್ಲದೆ, ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕುರುಬ ಸಮಾಜದ ಕೆ.ಎಸ್.‌ ಈಶ್ವರಪ್ಪ ಅವರಿಗೆ ಬಿಟ್ಟುಕೊಡಲಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ “ಮೀಸಲಾತಿ” ಗಲಾಟೆ ಆರಂಭವಾಗಿದೆ. ಹಿಂದುಳಿದ ಮತ್ತು ಕುರುಬ ಸಮಾಜವನ್ನು ಕಾಂಗ್ರೆಸ್‌ ಕಡೆಗಣಿಸಿದೆ ಎಂಬ ಸಿಎಂ ಹೇಳಿಕೆಗೆ ಕೆಂಡಾಮಂಡಲವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದರು.

ಕಾಡುಗೊಲ್ಲ ಮತ್ತು ಬೆಸ್ತರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ನಾನೇ ಶಿಫಾರಸು ಮಾಡಿದ್ದೆ. ಈಗ ಪುಂಕಾನುಪುಂಕವಾಗಿ ಭಾಷಣ ಮಾಡುವ ಸಿಎಂ ಬೊಮ್ಮಾಯಿ ಸಾಮಾಜಿಕ ನ್ಯಾಯದ ಪರವಾಗಿ ಇದ್ದರೆ ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲಿ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ | Appu Namana | ಆಹ್ವಾನವಿಲ್ಲ, ಕಾರ್ಯಕ್ರಮಕ್ಕೆ ಹೋಗಲ್ಲ ಎಂದ ಸಿದ್ದು; ರಾಜ್ಯಪಾಲರನ್ನೂ ಕರೆದಿಲ್ಲ!

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಗಮೋಹನ ದಾಸ್ ವರದಿ ಜಾರಿ ಮಾಡುತ್ತೇವೆ ಎಂದು ಸಚಿವ ಶ್ರೀರಾಮಲು ಹೇಳಿದ್ದರು. ಆದರೆ, ಜಾರಿ ಮಾಡಲು ಎರಡು ವರ್ಷ ಮೂರು ತಿಂಗಳು ತೆಗೆದುಕೊಂಡಿದ್ದು ಯಾಕೆ? ಈ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ 257 ದಿನ ಧರಣಿ ಕೂರಬೇಕಿತ್ತೇ? ನಾಗಮೋಹನದಾಸ್ ವರದಿ ಜಾರಿ ಆಗಬೇಕು ಎಂದು ಸದನದಲ್ಲಿ ಕಾಂಗ್ರೆಸ್ ಧರಣಿ ಮಾಡಿತ್ತು. ಧರಣಿಯಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಆದರೆ, ಬಿಜೆಪಿಯ ಒಬ್ಬ ಶಾಸಕ ಕೂಡ ಈ ಧರಣಿಯಲ್ಲಿ ಭಾಗಿಯಾಗಿಲ್ಲ. ರಕ್ತದಲ್ಲಿ ಬರೆದು ಕೊಡ್ತೀನಿ ಎಂದು ರಾಮುಲು ಹೇಳಿದ್ದರು. ಆದರೂ ಯಾಕೆ ಎರಡೂವರೆ ವರ್ಷ ತೆಗೆದುಕೊಂಡರು? ಎಂದು ಪ್ರಶ್ನೆ ಮಾಡಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ “ಅರಿವು” ಯೋಜನೆಯಡಿ ಸಾಲ ಕೊಡುವ ಕಾರ್ಯಕ್ರಮವನ್ನು ನಿಲ್ಲಿಸಿದ್ದು ಏಕೆ? ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ. ಹಿಂದುಳಿದವರ ಬಗ್ಗೆ ನಿಮಗೆ ಇರುವ ಕಾಳಜಿ ಇದೇನಾ? ಎಂದು ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮೀಸಲಾತಿ ವಿರೋಧ ಮಾಡಿದ್ದ ಬಿಎಸ್‌ವೈ, ಈಶ್ವರಪ್ಪ, ಅನಂತಕುಮಾರ್
ಹಿಂದುಳಿದವರ ಮೀಸಲಾತಿಗೆ ಅನಂತಕುಮಾರ್,‌ ಯಡಿಯೂರಪ್ಪ, ಈಶ್ವರಪ್ಪ ವಿರೋಧ ಮಾಡಿಲ್ಲವೇ? ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಸಿಗಲು ಕಾಂಗ್ರೆಸ್ ಕಾರಣ. ಮಹಿಳೆಯರಿಗೆ ಶೇ. 50 ಮೀಸಲಾತಿ ನೀಡುವ ಪ್ರಸ್ತಾವಕ್ಕೆ ವಿರೋಧ ಮಾಡಿದ್ದು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಂಗಾರಪ್ಪ ಬಿಜೆಪಿ ಬಿಟ್ಟರೂ ಪಕ್ಷ ಬಿಡದ ಹಿಂದುಳಿದ ಮತದಾರರು
ಈ ಸರ್ಕಾರ ಹಿಂದುಳಿದ ವರ್ಗಗಳಿಗೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಬೇಕಿದ್ದರೆ ಸರ್ಕಾರದವರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಹಿಂದುಳಿದ ಜಾತಿಗಳಿಗೆ ಇವರು ಮಕ್ಮಲ್ ಟೋಪಿ ಹಾಕುತ್ತಿದ್ದಾರೆ. ಯಾವಾಗಲೂ ಹಿಂದುಳಿದ ವರ್ಗಗಳು ಕಾಂಗ್ರೆಸ್ ಜತೆ ಇದೆ. ಹಿಂದುಳಿದ ವರ್ಗಗಳಲ್ಲಿ ಶೇ. 5 ರಿಂದ 10 ಜನ ಬಿಜೆಪಿ ಜತೆ ಇರಬಹುದು. ಇದು ಕೂಡ ಮೀಸಲಾತಿ ಜಾರಿಯಾದ ಮೇಲೆ ಆಗಿರುವುದು. 2004ರಲ್ಲಿ ಬಂಗಾರಪ್ಪನವರು ಬಿಜೆಪಿ ಸೇರದೆ ಇದ್ದಿದ್ದರೆ ಬಿಜೆಪಿ 40-50 ಸೀಟಷ್ಟೇ ಗೆಲ್ಲುವ ಸ್ಥಿತಿಯಲ್ಲಿ ಇರುತ್ತಿತ್ತು. ಬಂಗಾರಪ್ಪ ಅವರು ಬಿಜೆಪಿ ಸೇರಿದಾಗ ಅವರ ಜತೆಗೆ ಮತದಾರರು ಹೋಗಿದ್ದರು. ಬಂಗಾರಪ್ಪನವರು ಬಿಜೆಪಿ ಬಿಟ್ಟರೂ ಆ ಮತದಾರರು ಮಾತ್ರ ಬಿಜೆಪಿ ತೊರೆಯಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ | Election 2023 | ಬಿಜೆಪಿಯವರು ಕರೆದರೆ ಹೋಗಬೇಡಿ, ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌: ಸಿದ್ದರಾಮಯ್ಯ

Exit mobile version