ಮಂಗಳೂರು: ವಯಸ್ಸಿನಲ್ಲಿ ನಾನು ಕಿರಿಯನಾದರೂ ಅನುಭವದಲ್ಲಿ ನಾನು ಹಿರಿಯ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ ಮಂತ್ರಿ. ಈಗ ಎಲ್ಲ ಇಲಾಖೆಯ ಮಂತ್ರಿಗಳು ಕೂಡ ನನ್ನ ವ್ಯಾಪ್ತಿಗೆ ಬರುತ್ತಾರೆ. ಆ ಮೂಲಕ ನಾನು ಕೆಲಸ ಮಾಡಿಸುವುದನ್ನು ಮಾಡುತ್ತೇನೆ ಎಂದು ನೂತನ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ (UT Khader) ಹೇಳಿದರು.
ಇಲ್ಲಿ ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನ ಎನ್ನುವುದು ಉತ್ಸವ ಮೂರ್ತಿ ಅಲ್ಲ, ಅದು ಪೀಠದ ಸಮಸ್ಯೆ ಅಲ್ಲ. ಪೀಠದಲ್ಲಿ ಕೂರುವವರ ಸಮಸ್ಯೆ, ಕುಳಿತವರು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಇಲ್ಲಿ ಶಿಷ್ಟಾಚಾರ ಎಂದೇನಿಲ್ಲ, ಜನರ ಪ್ರೀತಿಯೇ ಇಲ್ಲಿ ಶಿಷ್ಟಾಚಾರ. ಅಧಿಕಾರಿಗಳಿಗೂ ಈ ಬಗ್ಗೆ ಸೂಚನೆ ಕೊಟ್ಟಿದ್ದೇನೆ. ಸಾಮಾನ್ಯ ಜನರು ನನ್ನನ್ನು ತಲುಪಲು ಅವಕಾಶ ಕೊಡಿ ಎಂಬುದಾಗಿ ಹೇಳಿದ್ದೇನೆ ಎಂದು ಯು.ಟಿ. ಖಾದರ್ ತಿಳಿಸಿದರು.
ಇದನ್ನೂ ಓದಿ: New Parliament Building: ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯ ಆಹ್ವಾನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
ಕ್ಷೇತ್ರದ ಸೇವೆ ಮಾಡುತ್ತೇನೆ
ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಇದ್ದರೂ ಉಳ್ಳಾಲ ಕ್ಷೇತ್ರದ ಸೇವೆ ಮಾಡುತ್ತೇನೆ. ಕ್ಷೇತ್ರದ ಜನರ, ಕಾರ್ಯಕರ್ತರ ಜತೆ ನಿಕಟ ಸಂಪರ್ಕ ಇರಲಿದೆ. ಈ ಸ್ಥಾನ ನನ್ನ ಸೇವೆಗೆ ಅಡ್ಡಿ ಬರಲ್ಲ, ನಾನು ಅದಕ್ಕೆ ಅಡ್ಡಿಪಡಿಸಲ್ಲ. ಈ ಹಂತಕ್ಕೆ ಬರಲು ಎಲ್ಲರ ಸಹಕಾರ, ಮಾರ್ಗದರ್ಶನ ಕಾರಣ. ಸಭಾಧ್ಯಕ್ಷ ಸ್ಥಾನ ಗೌರವದ ಮತ್ತು ಸಂವಿಧಾನಾತ್ಮಕ ಸ್ಥಾನವಾಗಿದ್ದು, ಇದರ ಗೌರವ ಉಳಿಸಿಕೊಂಡು ಜಿಲ್ಲೆಗೆ ಮತ್ತು ಕ್ಷೇತ್ರಕ್ಕೆ ಗೌರವ ತರುತ್ತೇನೆ ಎಂದು ಯು.ಟಿ. ಖಾದರ್ ಹೇಳಿದರು.
ವಿಧಾನಸಭೆಯಲ್ಲಿ ದ್ವೇಷ, ಆವೇಶ ಇಲ್ಲದೆ ಸದಸ್ಯರ ಜತೆ ಇರಬೇಕು. ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಜನರ ಜತೆ ಒಡನಾಟದ ಹೊಂದುವುದಲ್ಲದೆ, ಆ ಸ್ಥಾನದ ಘನತೆಯನ್ನು ಕೂಡಾ ಉಳಿಸಬೇಕಿದೆ. ಈ ಹೊತ್ತಲ್ಲಿ ಕ್ಷೇತ್ರದ ಜನತೆ ಕೂಡ ನನಗೆ ಬೆಂಬಲ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕ್ಷೇತ್ರದ ಜನರು, ಕಾರ್ಯಕರ್ತರಿಗೆ ಮಂತ್ರಿ ಸ್ಥಾನದ ಬಗ್ಗೆ ಹೆಚ್ಚು ತಿಳಿವಳಿಕೆ ಇದೆ. ಆದರೆ, ಸಭಾಧ್ಯಕ್ಷ ಸ್ಥಾನದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇದರಿಂದ ನಾನು ಅವರ ಕೈಗೆ ಸಿಗಲ್ಲ ಎಂಬ ಪ್ರೀತಿಯ ಆತಂಕ ಇದೆ. ಆದರೆ, ಕೆಲವೇ ತಿಂಗಳಲ್ಲಿ ಈ ಬಗ್ಗೆ ಅವರಿಗೆ ಅರಿವಾಗಲಿದೆ. ಪಕ್ಷದ ಹೈಕಮಾಂಡ್ ತೀರ್ಮಾನ ಇದಾಗಿದ್ದು, ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.
ಸಂವಿಧಾನ ಬದ್ಧವಾಗಿ ನನ್ನ ಮಾತು
ಹಿಜಾಬ್ ನಿಷೇಧ ಸೇರಿ ಅನೇಕ ವಿಚಾರಗಳ ಬಗ್ಗೆ ಸರ್ಕಾರದ ನಿಲುವು ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಕೆಲವು ಸಂವಿಧಾನಬದ್ಧ ವಿಷಯಗಳು ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರ ಕೆಲಸ ಮಾಡಲ್ಲ. ಸಭಾಧ್ಯಕ್ಷನಾದ ಹಿನ್ನೆಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಹೀಗಾಗಿ ನನ್ನ ವ್ಯಾಪ್ತಿಯಲ್ಲಿ ಸಂವಿಧಾನ ಬದ್ಧವಾಗಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: Meta Layoffs : ಭಾರತದಲ್ಲೂ ಫೇಸ್‌ಬುಕ್ ಜನಪ್ರಿಯತೆ ಕುಸಿಯುತ್ತಿದೆಯೇ?! ಪ್ರಮುಖರಿಗೆ ಕಂಪನಿಯ ಗೇಟ್‌ಪಾಸ್
ಶಾಸಕರಿಗೆ ತರಬೇತಿ ಕಾರ್ಯಾಗಾರ
ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಹೊಸ 70 ಶಾಸಕರಿಗೆ ತರಬೇತಿ ಕಾರ್ಯಾಗಾರ ಮಾಡುವ ಯೋಜನೆ ಇದೆ. ವಿಧಾನಸಭೆಯ ಕಾರ್ಯವೈಖರಿ, ಜನಸಾಮಾನ್ಯರ ಜತೆಗಿನ ಸಂಪರ್ಕದ ಬಗ್ಗೆ ಮೂರು ದಿನ ತರಬೇತಿ ಕಾರ್ಯಾಗಾರವನ್ನು ಮಾಡುತ್ತೇವೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.