ಮೈಸೂರು: ಮೈತ್ರಿ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೂ ಮೈತ್ರಿಗೆ ಮುಂದೆ ಬಂದಿಲ್ಲ. ಯಾರೂ ಮುಂದೆ ಬಾರದೆ ಇದ್ದಾಗ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುವುದು? ಸದ್ಯ ಯಾರೊಂದಿಗೂ ಮೈತ್ರಿ ಇಲ್ಲ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಸಂಘಟನೆಗೆ ವಿಶೇಷ ಒತ್ತು ನೀಡಬೇಕಿದೆ. ಇದಕ್ಕಾಗಿ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಮಾಡಿದ್ದೇವೆ. ಅವರ ನೇತೃತ್ವದಲ್ಲಿ ನಾಲ್ಕು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಬೇಕಿದೆ. ಇದರ ಜತೆಗೆ ಲೋಕಸಭೆ ಚುನಾವಣೆಯೂ ಬರುತ್ತಿದೆ. ರಾಜಕೀಯ ಪಕ್ಷವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಸ್ವತಂತ್ರ ಸ್ಪರ್ಧೆ ಎಂದಿದ್ದ ಎಚ್.ಡಿ. ದೇವೇಗೌಡ?
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇತ್ತೀಚೆಗೆ ಅಧಿವೇಶನದ ವೇಳೆ 10 ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ್ದನ್ನು ಎಚ್.ಡಿಕೆ ಕೂಡ ಖಂಡಿಸಿದ್ದರು. ನಂತರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದರು. ಇದರಿಂದ ಬಿಜೆಪಿ ಜತೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಧ್ಯೆ ಪ್ರವೇಶಿಸಿ, ಯಾವುದೇ ಪಕ್ಷಗಳ ಜತೆ ಮೈತ್ರಿ ಇಲ್ಲ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಲ್ಲೇ ಸ್ಪರ್ಧೆ ಮಾಡಲಿದೆ ಎಂದು ಹೇಳಿದ್ದರು. ಇದೀಗ ಕುಮಾರಸ್ವಾಮಿ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ | Cauvery Dispute: ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡಿ ಈಗ ಕಾವೇರಿ ನೀರು ಬಿಟ್ಟಿದ್ದಾರೆ: ಎಚ್‌ಡಿಕೆ ಕಿಡಿ
ಡಿಕೆಶಿ ನಮ್ಮ ನೀರು ತಮಿಳುನಾಡು ಹಕ್ಕು ಎನ್ನುತ್ತಿದ್ದಾರೆ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ಮೈಸೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಈ ಹಿಂದೆ ನಮ್ಮ ನೀರು ನಮ್ಮ ಹಕ್ಕು ಎನ್ನುತ್ತಿದ್ದವರು, ಈಗ ನಮ್ಮ ನೀರು ತಮಿಳುನಾಡು ಹಕ್ಕು ಎನ್ನುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ಮೇಕೆದಾಟು ಹೋರಾಟ ಮಾಡಿದ್ದರು. ನೀರಿಗಾಗಿ ಹೋರಾಟ ಮಾಡಿದ್ದವರು ಈಗ ಏನು ಮಾಡುತ್ತಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮವರು ವಾದವನ್ನೇ ಮಾಡಿಲ್ಲ.
ನನಗೆ ಒಂದು ಬಾರಿ ಪೆನ್ ಕೊಡಿ ಎಂದು ಕೇಳಿದ್ದು ಇದಕ್ಕೇನಾ? ಸರ್ಕಾರ ನಡೆಸುವವರಿಗೆ ರೈತರು, ಕುಡಿಯುವ ನೀರಿನ ಬಗ್ಗೆ ಸರಿಯಾದ ಮಾಹಿತಿ ಇರಬೇಕಿತ್ತು. ಬೆಂಗಳೂರಿಗೂ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ. ನಮ್ಮ ಬೆಳೆಗೇ ನೀರಿಲ್ಲದೇ ಇದ್ದರೂ ತಮಿಳುನಾಡಿಗೆ ನೀರು ಹರಿಯುತ್ತಿದೆ. ನಾವೆಲ್ಲ ಹೋರಾಟ ಮಾಡಿದ ಮೇಲೆ ಸುಪ್ರೀಂಕೋರ್ಟ್ ಮುಂದೆ ಅಪೀಲು ಹಾಕಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | BK Hariprasad: ಮತ್ತೆ ಸಿಎಂ ವಿರುದ್ಧ ಸಿಡಿದ ಬಿ.ಕೆ.ಹರಿಪ್ರಸಾದ್, ಡಿಕೆಶಿಗೂ ತಿವಿತ
ಗ್ಯಾರಂಟಿ ಯೋಜನೆಗಳಿಗಾಗಿ 86 ಸಾವಿರ ಕೋಟಿ ರೂ. ಬೇಕು. ಈಗ ಮಾಡಿದ ಸಾಲ ತೀರಿಸುವವರು ಯಾರು ಎಂದು ಪ್ರಶ್ನಿಸಿದ ಎಚ್‌ಡಿಕೆ, ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಲಾಗುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ಈಗ ಕಂಡೀಷನ್ ಮೇಲೆ ಕಂಡೀಷನ್ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಕಾರಣಕ್ಕಾಗಿ ಅಭಿವೃದ್ಧಿ ನಿಂತೇ ಹೋಗಿದೆ. ಶಾಸಕರಿಗೆ ಅನುದಾನ ಸಿಗುತ್ತಿಲ್ಲ. ಮುಂದೆ ಇದೆಲ್ಲ ಎಲ್ಲಿಗೆ ಹೋಗಿ ನಿಲ್ಲುತ್ತೆ ನೋಡುತ್ತಿರಿ ಎಂದು ಹೇಳಿದರು.