Site icon Vistara News

High court : ಹೆಂಡ್ತೀನ ನೋಡ್ಕೊಳ್ಳೋ ಹುಡುಗ್ರಿಗೆ ತಾಯಿನ ಸಲಹಲು ಏನು ಕಷ್ಟ?; ಗಂಡು ಮಕ್ಕಳಿಗೆ ಹೈ ಕ್ಲಾಸ್‌

Old woman sitting alone

ಬೆಂಗಳೂರು: ದೇವರನ್ನು ಆರಾಧಿಸುವ ಮೊದಲು ತಂದೆ, ತಾಯಿ, ಗುರು, ಅತಿಥಿಗಳನ್ನು ಗೌರವಿಸಬೇಕು ಎಂದು ನಮಗೆ ಹೇಳಿಕೊಟ್ಟಿದ್ದಾರೆ. ಅಂದರೆ ತಂದೆ, ತಾಯಿ ದೇವರಿಗಿಂತಲೂ ಮಿಗಿಲು (Parents are more than god). ಅವರ ಸೇವೆಯೇ ನಿಜವಾದ ಆರಾಧನೆ- ಹೀಗೆ ಜೀವನದ ಪಾಠವನ್ನು ಹೇಳಿಕೊಟ್ಟಿದ್ದು ಯಾರೋ ಅಧ್ಯಾತ್ಮ ಗುರುಗಳಲ್ಲ. ನಮ್ಮ ರಾಜ್ಯದ ಹೈಕೋರ್ಟ್‌ (Karnataka High court). ಇನ್ನೂ ಸ್ಪಷ್ಟವಾಗಿ ಹೇಳಬೇಕು ಎಂದರೆ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ (Justice Krishna S Dixit). ಅವರು ಹೇಳಿದ ಇನ್ನೊಂದು ಗಂಭೀರವಾದ ವಿಚಾರವೇನೆಂದರೆ, ಬ್ರಹ್ಮಾಂಡ ಪುರಾಣದ ಪ್ರಕಾರ ವೃದ್ದಾಪ್ಯದಲ್ಲಿ ತಂದೆ ತಾಯಿಯನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತ್ತವೇ ಇಲ್ಲ. ಇಷ್ಟೇ ಅಲ್ಲ, ಇನ್ನೂ ಹಲವು ಉದಾಹರಣೆಗಳನ್ನು ನ್ಯಾಯಪೀಠದಲ್ಲಿ ಕುಳಿತು ಅವರು ಆಡಿದ್ದಾರೆ. ಜತೆಗೆ ಹೆಂಡತಿಯನ್ನು ನೋಡಿಕೊಳ್ಳುವ ಸಾಮರ್ಥ್ಯ ಇರುವ ಗಂಡು ಮಕ್ಕಳಿಗೆ ತಾಯಿಯನ್ನು ಸಲಹಲು ಯಾಕೆ ಕಷ್ಟವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಇಷ್ಟೆಲ್ಲ ಮಾತಿಗೆ ಕಾರಣವಾಗಿದ್ದು, ಸಾಮಾಜಿಕ ಕಳಕಳಿಯ, ವೃದ್ಧರ ಬಗೆಗಿನ ಕಾಳಜಿಯ ಮಾತುಗಳಿಗೆ ಕಾರಣವಾಗಿದ್ದು ಅದೊಂದು ಕೇಸು. ಮೈಸೂರಿನ ಜಿಲ್ಲಾಧಿಕಾರಿಗಳು ಪ್ರಕರಣವೊಂದರ ವಿಚಾರಣೆ ನಡೆಸಿ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಗೆ ತಿಂಗಳಿಗೆ ತಲಾ 10,000 ರೂ. ಜೀವನಾಂಶ ನೀಡಬೇಕು ಎಂದು ಆದೇಶ ನೀಡಿದ್ದರು. ಆದರೆ, ಇಬ್ಬರೂ ಮಕ್ಕಳು ಜೀವನಾಂಶ ಕೊಡುವ ಬದಲು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಯಾವ ಕಾರಣಕ್ಕೂ ಜೀವನಾಂಶ ಕೊಡಲಾಗದು ಎಂದು ಹಠ ಹಿಡಿದಿದ್ದರು. ಈ ವಿಚಾರದ ಮೇಲೆ ವಿಸ್ತೃತ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಕ್ಷಿತ್‌ ಅವರು ಪುರಾಣ, ಉಪನಿಷತ್‌ ಕಥೆಗಳ ಮೂಲಕ ಬದುಕನ್ನು ವಿವರಿಸಿದರು. ವೃದ್ಧಾಪ್ಯದಲ್ಲಿ ಹೆತ್ತವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಮನವರಿಕೆ ಮಾಡಿದರು ಮತ್ತು ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದು ಪ್ರತಿ ತಿಂಗಳು ತಾಯಿಗೆ ತಲಾ 10 ಸಾವಿರ ರೂ. ಕೊಡಲೇಬೇಕು ಎಂದು ನಿರ್ದೇಶನ ನೀಡಿದರು.

ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಹೇಳಿದ್ದೇನು?

  1. ರಕ್ಷತಿ ಸ್ಥವೀರೇ ಪುತ್ರ ಎಂದು ಸ್ಮೃತಿಕಾರರು ಹೇಳಿದ್ದಾರೆ. ನಮ್ಮ ದೇಶದ ಕಾನೂನು, ಸಂಸ್ಕೃತಿ, ಧರ್ಮ, ಪರಂಪರೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಪುತ್ರರ ಕರ್ತವ್ಯವೆಂದು ಹೇಳಿದೆ
  2. ಶಿಕ್ಷಣ ಕಲಿಸಿದ ಗುರು, ಶಿಷ್ಯನನ್ನು ಬೀಳ್ಕೊಡುವಾಗ, ತಾಯಿ, ತಂದೆ, ಗುರು, ಅತಿಥಿಗಳನ್ನು ದೇವರೆಂದು ಭಾವಿಸಬೇಕು ಎಂದು ತೈತ್ತರೀಯ ಉಪನಿಷತ್‌ನಲ್ಲಿ ಹೇಳಲಾಗಿದೆ.
  3. ದೇವರನ್ನು ಆರಾಧಿಸುವ ಮೊದಲು ತಂದೆ, ತಾಯಿ, ಗುರು, ಅತಿಥಿಗಳನ್ನು ಗೌರವಿಸಬೇಕು ಎಂದು ನಮಗೆ ಹೇಳಿಕೊಟ್ಟಿದ್ದಾರೆ.
  4. ಬ್ರಹ್ಮಾಂಡ ಪುರಾಣದ ಪ್ರಕಾರ ವೃದ್ದಾಪ್ಯದಲ್ಲಿ ತಂದೆ ತಾಯಿಯನ್ನು ಸಲಹದ ಮಕ್ಕಳ ತಪ್ಪಿಗೆ ಪ್ರಾಯಶ್ಚಿತ್ತವೇ ಇಲ್ಲ.

ಏನಿದು ತಾಯಿ ಮತ್ತು ಮಕ್ಕಳ ನಡುವಿನ ಮಾಸಾಶನ ವಿವಾದ?

ಮೈಸೂರಿನ ನಿವಾಸಿಯಾಗಿರುವ ವೆಂಕಟಮ್ಮ ಅವರಿಗೆ ಈಗ 84 ವರ್ಷ. ತಮ್ಮ ಗಂಡು ಮಕ್ಕಳಿಂದ ದೂರವಾಗಿರುವ ಅವರು ಪುತ್ರಿಯರ ಮನೆಯಲ್ಲಿದ್ದಾರೆ. ಅವರು ತಮ್ಮ ಜೀವನ ನಿರ್ವಹಣೆಗೆ ಇಬ್ಬರು ಪುತ್ರರಿಂದ ಜೀವನಾಂಶ ಕೊಡಿಸುವಂತೆ ಕೋರಿ ಮೈಸೂರಿನ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದರು. ಹಿರಿಯ ನಾಗರಿಕರ ಜೀವನಾಂಶ ಹಾಗೂ ಕಲ್ಯಾಣ ಕಾಯ್ದೆಯಡಿ ತಲಾ 5 ಸಾವಿರ ರೂ. ಜೀವನಾಂಶ ಒದಗಿಸುವಂತೆ ವಿಭಾಗಾಧಿಕಾರಿ ಆದೇಶ ನೀಡಿದ್ದರು. ಇದಾದ ಬಳಿಕ ಪ್ರಕರಣದ ಜಿಲ್ಲಾಧಿಕಾರಿ ಕೋರ್ಟ್‌ಗೆ ಬಂದಾಗ ಜಿಲ್ಲಾಧಿಕಾರಿಗಳು ಈ ಮೊತ್ತವನ್ನು ತಲಾ 10,000 ರೂ.ಗಳಿಗೆ ಹೆಚ್ಚಿಸಿದರು.

ಜಿಲ್ಲಾಧಿಕಾರಿಗಳ ಈ ಆದೇಶವನ್ನು ವೆಂಕಟಮ್ಮ ಅವರ ಗಂಡು ಮಕ್ಕಳಾದ ಗೋಪಾಲ್‌ ಮತ್ತು ಮಹೇಶ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ವಿಚಾರಣೆಯ ವೇಳೆ ʻತಾಯಿಯವರು ಹೆಣ್ಣು ಮಕ್ಕಳ ಮಾತು ಕೇಳಿ ನಮ್ಮ ಮನೆಯನ್ನು ತೊರೆದಿದ್ದಾರೆ. ತಾಯಿ ನಮ್ಮ ಮನೆಗೇ ಬರಲಿ ನಾವೇ ನೋಡಿಕೊಳ್ಳುತ್ತೇವೆ. ಆದರೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದರು.

ಗಂಡು ಮಕ್ಕಳ ಜತೆಗೆ ಹೋಗಿ ಇರಲು ಹೇಳಲಾಗದು

ಗಂಡು ಮಕ್ಕಳ ಈ ವಾದವನ್ನು ಕೂಲಂಕಷವಾಗಿ ಕೋರ್ಟ್‌ ಪರಿಶೀಲಿಸಿತು. ತಾಯಿಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂಬ ಗಂಡು ಮಕ್ಕಳ ವಾದದಲ್ಲಿ ಮೇಲ್ನೋಟಕ್ಕೆ ಹುರುಳು ಕಾಣಿಸುತ್ತಿದೆಯಾದರೂ ಅವರು ಆ ಮನೆಯಿಂದ ಯಾಕೆ ಹೊರಗೆ ಬಂದರು. ಅವರಿಗೆ ಎಲ್ಲಿ ನೆಮ್ಮದಿ ಇದೆ ಎಂಬೆಲ್ಲ ಅಂಶಗಳನ್ನು ಪರಿಗಣಿಸಿದ ಕೋರ್ಟ್‌, ತಾಯಿಯನ್ನು ತಾವೇ ನೋಡಿಕೊಳ್ಳುತ್ತೇವೆಂಬ ಪುತ್ರರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದಿತು.

ವಿವಾಹದ ಹಕ್ಕನ್ನಾದರೂ ಪುನರ್ ಸ್ಥಾಪಿಸಲು ಕಾನೂನಿದೆ. ಆದರೆ, ಪುತ್ರರೊಂದಿಗೆ ವಾಸಿಸಲು ಬಯಸದ ತಾಯಿಯನ್ನು ಬಲವಂತವಾಗಿ ವಾಸಿಸುವಂತೆ ಮಾಡಲು ಯಾವುದೇ ಕಾನೂನಿಲ್ಲ ಎಂದು ನ್ಯಾಯಮೂರ್ತಿ ದೀಕ್ಷಿತ್‌ ಹೇಳಿದರು.

ಹೆಣ್ಮಕ್ಕಳನ್ನು ಶ್ಲಾಘಿಸಿದ ನ್ಯಾಯಮೂರ್ತಿ ದೀಕ್ಷಿತ್‌

ಇಬ್ಬರೂ ಪುತ್ರರು ದೈಹಿಕವಾಗಿ ಸಮರ್ಥರಾಗಿದ್ದಾರೆ. ಪತ್ನಿಯನ್ನು ಸಲಹಲು ಸಮರ್ಥವಿರುವ ಪುರುಷ ತಾಯಿಯನ್ನು ನೋಡಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಪ್ರಶ್ನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ಪೋಷಕರನ್ನು ಸಲಹಲು ಹಿಂದೇಟು ಹಾಕುತ್ತಿರುವುದು ವಿಷಾದಕರ ಎಂದಿದರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ತಾಯಿ ವೆಂಕಟಮ್ಮ ಅವರನ್ನು ಆರೈಕೆ ಮಾಡುತ್ತಿರುವ ಹೆಣ್ಮಕ್ಕಳನ್ನು ಅಭಿನಂದಿಸಿದರು.

Exit mobile version