ಕೊಪ್ಪಳ: ರಾಜ್ಯದ ರೈತರಿಗೆ ಇದೊಂದು ಎಚ್ಚರಿಕೆ ಸಂದೇಶವನ್ನು ನೀಡುವ, ಎಚ್ಚೆತ್ತುಕೊಳ್ಳಬೇಕಾದ ವರದಿ. ತೂಕದ ಯಂತ್ರಕ್ಕೆ ರಿಮೋಟ್ ಕಂಟ್ರೋಲ್ ಬಳಸಿ ರೈತರಿಗೆ ಮೋಸ ಮಾಡುತ್ತಿದ್ದ ದಲ್ಲಾಳಿಗಳ ಅಕ್ರಮ ಬೆಳಕಿಗೆ ಬಂದಿದೆ. ತಾಲೂಕಿನ ಲಿಂಗದಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಂದ ಹತ್ತಿ ಪಡೆದು ದಲ್ಲಾಳಿಗಳು ಮೋಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ವತಃ ರೈತರೇ ಈ ಪ್ರಕರಣವನ್ನು ಪತ್ತೆ ಹಚ್ಚಿರುವುದಾಗಿ ತಿಳಿದು ಬಂದಿದೆ.
ಗೋಕಾಕ್ ಮೂಲದ ಲಾರಿಯೊಂದಿಗೆ ದಲ್ಲಾಳಿಗಳು ಬಂದಿದ್ದರು. ಅದರಲ್ಲಿ ಕೆಲವರು ಲಿಂಗದಳ್ಳಿ, ಬೇವಿನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಂದ ರಿಮೋಟ್ ಹೊಂದಿದ ನಕಲಿ ತೂಕದ ಯಂತ್ರ ಬಳಸಿ ಹತ್ತಿ ಖರೀದಿಸುತ್ತಿದ್ದರು. ಈ ವೇಳೆ ನೈಜ ತೂಕಕ್ಕಿಂತ ಕಡಿಮೆ ತೂಕವನ್ನು ತೋರಿಸುತ್ತಿದ್ದ ತೂಕದ ಯಂತ್ರದ ಬಗ್ಗೆ ರೈತರಿಗೆ ಸಂಶಯ ಮೂಡಿ ಬಂದಿತ್ತು ಎನ್ನಲಾಗಿದೆ.
ಇದನ್ನೂ ಓದಿ | ಬೆಂಗಳೂರು, ಹಾಸನ, ಕೊಪ್ಪಳ ಸೇರಿ 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದುವರಿದ ಎಸಿಬಿ ಬೇಟೆ
ಅದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಚಾಲಕನ ಕೈಯಲ್ಲಿ ರಿಮೋಟ್ ಇರುವುದು ಪತ್ತೆಯಾಗಿದೆ. ಆತ ರಿಮೋಟ್ ಅನ್ನು ಬಳಕೆ ಮಾಡುತ್ತಿದ್ದರಿಂದ ರಿಮೋಟ್ ಅನ್ನು ಆತನಿಂದ ಪಡೆದು ಪರಿಶೀಲಿಸಿದಾಗ ತೂಕದಲ್ಲಿ ವ್ಯತ್ಯಾಸವಾಗುತ್ತಿರುವುದು ರೈತರಿಗೆ ಖಾತರಿ ಆಗಿದೆ. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ರೈತರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ವಿಷಯ ತಿಳಿಸಿದ್ದು ಗೊತ್ತಾಗುತ್ತಿದ್ದಂತೆಯೇ ದಲ್ಲಾಳಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ