ಬೆಂಗಳೂರು: ಅಕ್ರಮ ಸಂಬಂಧದಿಂದ ಹುಟ್ಟಿದೆ ಎಂಬ ಕಾರಣಕ್ಕಾಗಿ ಒಂದು ಮಗುವಿಗೆ ತಂದೆಯ ಸಾವಿನ ಪರಿಹಾರ ಪಡೆಯುವುದನ್ನು ತಡೆಯಲಾಗದು ಎಂಬ ಮಹತ್ವದ ಆದೇಶವೊಂದನ್ನು ರಾಜ್ಯ ಹೈಕೋರ್ಟ್ ನೀಡಿದೆ. ಅಕ್ರಮ ಸಂಬಂಧದಿಂದ ಜನಿಸಿದ ಮಗುವೂ ಮೋಟಾರು ವಾಹನ ಕಾಯಿದೆ ಸೆಕ್ಷನ್ 166ರ ಅಡಿ ಕಾನೂನಾತ್ಮಕ ಪ್ರತಿನಿಧಿ (ಲೀಗಲ್ ರೆಪ್ರಸೆಂಟೇಟಿವ್) ಎಂದು ಪರಿಗಣಿಸಲ್ಪಟ್ಟು, ಪರಿಹಾರಕ್ಕೆ ಅರ್ಹ (Accident coverage) ಎಂದಿದೆ ಕೋರ್ಟ್.
ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ನೇತೃತ್ವದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದ್ದು, ಈಗ ಅಪ್ರಾಪ್ತನಾಗಿರುವ ಬಾಲಕ ಪ್ರಾಪ್ತ ವಯಸ್ಸಿಗೆ ಬರುವಾಗ ದೊಡ್ಡ ಮೊತ್ತವನ್ನು ಪಡೆಯಲಿದ್ದಾನೆ. ಬೆಂಗಳೂರು ಉತ್ತರದ ದೊಡ್ಡತೋಗೂರು ಗ್ರಾಮದ ನಿವಾಸಿಯಾದ ರೇಣುಕಾ (ಹೆಸರು ಬದಲಿಸಲಾಗಿದೆ) ಮತ್ತು ಆಕೆಯ ಅಪ್ರಾಪ್ತ ಪುತ್ರ ರವಿ (ಹೆಸರು ಬದಲಿಸಲಾಗಿದೆ) ಹಾಗೂ ಅಪಘಾತದಲ್ಲಿ ಸಾವನ್ನಪ್ಪಿದ ಮಲ್ಲಿಕಾರ್ಜುನನ ಪೋಷಕರು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಆಧರಿಸಿ ಈ ತೀರ್ಪು ನೀಡಲಾಗಿದೆ.
ಏನಿದು ವಿಶೇಷ ಪ್ರಕರಣ?
ರೇಣುಕಾ ಮತ್ತು ಕುಮಾರಸ್ವಾಮಿ ಎಂಬವರಿಗೆ ೧೯೯೬ರಲ್ಲಿ ಮದುವೆಯಾಗಿ ಹೆಣ್ಣು ಮಗು ಹುಟ್ಟಿತ್ತು. ಆದರೆ, ಮುಂದೆ ಸಂಸಾರದಲ್ಲಿ ಬಿರುಕು ಮೂಡಿ, ೨೦೦೬ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಮುಂದೆ ೨೦೧೦ರಲ್ಲಿ ಅಧಿಕೃತ ವಿಚ್ಛೇದನ ನಡೆದಿತ್ತು.
ಈ ನಡುವೆ, ರೇಣುಕಾಗೆ ಮಲ್ಲಿಕಾರ್ಜುನ ಎಂಬವನ ಜತೆಗಿನ ಪರಿಚಯ ಸಂಬಂಧವಾಗಿ ಪರಿವರ್ತನೆಯಾಗಿ ಗರ್ಭಿಣಿಯಾಗಿದ್ದಳು. ೨೦೦೬ರ ಆಗಸ್ಟ್ ೮ರಂದು ರವಿ ಎಂಬ ಮಗು ಹುಟ್ಟಿದ್ದ. ಇದೊಂಥರಾ ಲಿವ್ ಇನ್ ರಿಲೇಷನ್‌ಷಿಪ್.
ಇದಾದ ಮರುವರ್ಷ ೨೦೦೭ರಲ್ಲಿ ಮಲ್ಲಿಕಾರ್ಜುನನಿಗೆ ಶೈಲಜಾ (ಹೆಸರು ಬದಲಿಸಲಾಗಿದೆ) ಎಂಬಾಕೆ ಜತೆ ಅಧಿಕೃತವಾಗಿ ಮದುವೆಯಾಗಿದೆ.
ಇದೆಲ್ಲ ಮುಗಿದು ಐದು ವರ್ಷಗಳ ನಂತರ ಅಂದರೆ ೨೦೧೨ರ ಆಗಸ್ಟ್ ೨೩ರಂದು ಮಲ್ಲಿಕಾರ್ಜುನ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಮ್ಯಾಕ್ಸಿ ಕ್ಯಾಬ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಹಂತದಲ್ಲಿ ಅಪಘಾತ ವಿಮೆ ಪಡೆಯಲು ಮೂರು ಕಡೆಯಿಂದ ಅರ್ಜಿ ಸಲ್ಲಿಸಲ್ಪಟ್ಟಿತು. ಒಂದು ಮಲ್ಲಿಕಾರ್ಜುನನ ತಂದೆ-ತಾಯಿ, ಇನ್ನೊಂದು ಕಡೆ ಶೈಲಜಾ, ಇನ್ನೊಂದು ಕಡೆ ರೇಣುಕಾ ಮತ್ತು ರವಿ. ಮೂವರೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರತಿವಾದಿ ಶ್ರೀರಾಮ್ ಇನ್ಶೂರೆನ್ಸ್ ಕಂಪೆನಿಯು ರೇಣುಕಾ ಮತ್ತು ಮಲ್ಲಿಕಾರ್ಜುನ ಸಂಬಂಧ ಅಧಿಕೃತವಲ್ಲ. ಹೀಗಾಗಿ ಅವರಿಗೆ ಪರಿಹಾರ ನೀಡಲಾಗದು. ಅಕ್ರಮವಾಗಿ ಪಡೆದ ಮಗುವಿಗೆ ಪರಿಹಾರವಿಲ್ಲ ಎಂದು ವಾದಿಸಿದರು. ನ್ಯಾಯಮಂಡಳಿ ಕೂಡಾ ಈ ವಾದವನ್ನೇ ಎತ್ತಿಹಿಡಿಯಿತು. ಇದನ್ನು ಪ್ರಶ್ನಿಸಿ ರೇಣುಕಾ ಮತ್ತು ರವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ ಪರಿಹಾರ ಹೆಚ್ಚಳ ಕೋರಿ ಮಲ್ಲಿಕಾರ್ಜುನನ ಪೋಷಕರು ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಕೋರ್ಟ್ ರೇಣುಕಾ ಮತ್ತು ರವಿಗೂ ಪರಿಹಾರ ನೀಡಬೇಕು ಎಂದು ಸೂಚಿಸಿದೆ.
ಯಾವ ಆಧಾರದಲ್ಲಿ ಪರಿಹಾರ ದೊರೆಯಲಿದೆ?
ರೇಣುಕಾ ಇನ್ನೂ ಕುಮಾರಸ್ವಾಮಿಯ ಪತ್ನಿಯಾಗಿದ್ದಾಗಲೇ ಮಲ್ಲಿಕಾರ್ಜುನನ ಜತೆ ಸಂಬಂಧ ಹೊಂದಿದ್ದು, ಅದರಿಂದಾಗಿ ರವಿಯ ಜನನವಾಗಿದೆ. ಇದು ಅಕ್ರಮ ಸಂಬಂಧ ಎನ್ನುವುದು ವಿಮಾ ಕಂಪನಿಯ ವಾದವಾಗಿತ್ತು. ಆದರೆ, ಕೋರ್ಟ್ ಇನ್ನೊಂದು ದಾಖಲೆಯನ್ನು ಪರಿಗಣಿಸಿತು. ಮಲ್ಲಿಕಾರ್ಜು ೨೦೦೭ರಲ್ಲಿ ಶೈಲಜಾಳನ್ನು ಮದುವೆಯಾಗುವ ಮುನ್ನ ನೀಡಿದ್ದ ಅಫಿಡವಿಟ್ ಒಂದರಲ್ಲಿ ರೇಣುಕಾ ತನ್ನ ಪತ್ನಿಯಾಗಿದ್ದು, ಆಕೆ ೨೦೦೬ರ ಆಗಸ್ಟ್ ೮ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾಗಿ ಇದರಲ್ಲಿ ಘೋಷಿಸಿದ್ದ. ಜತೆಗೆ ರೇಣುಕಾ ೨೦೧೨ರ ಮೇ ೧೫ರಂದು ತಾನು ಮಲ್ಲಿಕಾರ್ಜುನನ ಜತೆ ಸಹಜೀವನ ನಡೆಸಿದ್ದಕ್ಕೆ ಪೂರಕವಾದ ವಂಶ ವೃಕ್ಷವನ್ನೂ ನೀಡಿದ್ದರು. ಮಗುವಿನ ಶಾಲಾ ದಾಖಲಾತಿಯಲ್ಲೂ ಮಲ್ಲಿಕಾರ್ಜುನನ ಹೆಸರೇ ಇದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಆದರೆ, ವಿಮಾ ಕಂಪನಿಯು, ರೇಣುಕಾ ಕೆಲವೊಂದು ದಾಖಲೆಗಳನ್ನು ಸೃಷ್ಟಿಸಿಕೊಂಡು ಪರಿಹಾರ ಪಡೆಯಲು ಸಂಚು ನಡೆಸಿದ್ದಾರೆ ಎಂದು ಆರೋಪಿಸಿತ್ತು. ಅಂತಿಮವಾಗಿ ಕೋರ್ಟ್ ರೇಣುಕಾ ಏನೇ ಮಾಡಿದ್ದರೂ ಬಾಲಕ ರವಿ ಮಲ್ಲಿಕಾರ್ಜುನನ್ನು ಆಧರಿಸಿದ್ದಾನೆ ಎನ್ನುವುದು ಸ್ಪಷ್ಟ. ಹಾಗಾಗಿ ಪರಿಹಾರ ನೀಡಬೇಕು ಎಂದು ಸೂಚಿಸಿತು.
“ಮಲ್ಲಿಕಾರ್ಜುನನ ಮಗು ರವಿ ಮತ್ತು ಆತನ ತಂದೆ-ತಾಯಿ ವಿಮಾ ಪರಿಹಾರದ ಮೊತ್ತವಾದ 11,75,940 ರೂಪಾಯಿ, 33 ಸಾವಿರ ಅಂತಿಮ ಸಂಸ್ಕಾರದ ವೆಚ್ಚ ಹಾಗೂ ಪ್ರೀತಿ ಮತ್ತು ವಿಶ್ವಾಸದ ನಷ್ಟಕ್ಕಾಗಿ ತಲಾ 40 ಸಾವಿರದಂತೆ ಒಟ್ಟು 1.2 ಲಕ್ಷ ರೂಪಾಯಿ ಪಡೆಯಲು ಅರ್ಹವಾಗಿದ್ದಾರೆ. ಎಲ್ಲ ಕ್ರೋಡೀಕರಿಸಿ ಒಟ್ಟು 13,28,940 ರೂಪಾಯಿ ಪರಿಹಾರದ ಮೊತ್ತಕ್ಕೆ ಅರ್ಹರಾಗಿದ್ದಾರೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ. ರವಿ ಅಪ್ರಾಪ್ತನಾಗಿರುವುದರಿಂದ ಪ್ರಾಪ್ತ ವಯಸ್ಸಿಗೆ ಬರುವವರೆಗೆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು ಸೂಚಿಸಲಾಗಿದೆ.
ಇದನ್ನೂ ಓದಿ | Highcourt order | ಖಾಸಗಿಯಾಗಿ ಮನರಂಜನಾ ಚಟುವಟಿಕೆ ನಡೆಸಲು ಪೊಲೀಸರಿಂದ ಅನುಮತಿ ಪಡೆಯಬೇಕಾಗಿಲ್ಲ