ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯ (Mallikarjun Kharge) ಬಿಸಿ ದಿನೇದಿನೆ ಹೆಚ್ಚಾಗುತ್ತಿದೆ. ಪ್ರಚಾರದ ಅಬ್ಬರ ಇನ್ನೂ ಜಾಸ್ತಿಯಾಗುತ್ತಿದೆ. ಇನ್ನು ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ನಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಧ್ಯೆ ತೀವ್ರ ಸ್ಪರ್ಧೆ ಇದೆ. ಕೆಲವೊಂದು ಸಲ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರೂ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, “ನಾನೇ ಹಲವು ಮುಖ್ಯಮಂತ್ರಿಗಳನ್ನು ನೇಮಿಸುವ ಸಾಮರ್ಥ್ಯ ಹೊಂದಿದ್ದೇನೆ. ಹೀಗಿರುವ ನಾನೇಕೆ ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಲಿ” ಎಂದು ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿದ ಖರ್ಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಕರ್ನಾಟಕದಲ್ಲಿ ಯಾರು ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ, “ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಯಾವ ಶಾಸಕರು ಯಾರಿಗೆ ಹೆಚ್ಚಿನ ಬೆಂಬಲ ನೀಡುತ್ತಾರೋ, ಅವರು ಮುಖ್ಯಮಂತ್ರಿಯಾಗುತ್ತಾರೆ. ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತಾರೆ” ಎಂದರು. ನೀವೂ ಸ್ಪರ್ಧೆಯಲ್ಲಿದ್ದೀರಿ ಎಂಬ ಮಾತಿದೆ ಎಂಬುದಕ್ಕೆ ಉತ್ತರಿಸಿದ ಅವರು, “ನಾನು ಬೇರೆ ರಾಜ್ಯಗಳಿಗೆ ಸಿಎಂಗಳನ್ನು ನೇಮಿಸುವ ಸಾಮರ್ಥ್ಯ ಹೊಂದಿದ್ದೇನೆ. ಹೀಗಿರುವಾಗ, ನಾನು ಸಿಎಂ ಆಗಬೇಕು ಎಂದು ಬಯಸಿ, ನನ್ನ ಸಾಮರ್ಥ್ಯವನ್ನು ಕುಗ್ಗಿಸುತ್ತಿದ್ದೀರಿ” ಎಂದರು.
ಪರಿವಾರವಾದ ಆರೋಪಕ್ಕೆ ಖರ್ಗೆ ತಿರುಗೇಟು
ಕಾಂಗ್ರೆಸ್ ಪರಿವಾರವಾದದಲ್ಲಿಯೇ ಮುಳುಗಿದೆ ಎಂಬ ಕುರಿತು ಬಿಜೆಪಿ ಆರೋಪದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿದರು. “ಬಿಜೆಪಿಯಲ್ಲಿಯೇ 36 ಜನ ಕುಟುಂಬ ರಾಜಕಾರಣದ ಕುಡಿಗಳಾಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಿಯಾದರೇ? ಬಿಜೆಪಿಯವರು ಏಕೆ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ? ಬಿಜೆಪಿಯವರಿಗೇಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎಂದರೆ ಭಯ” ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜಕೀಯದ ಕುರಿತು ಪ್ರತಿಕ್ರಿಯಿಸಿದ ಖರ್ಗೆ, “ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರದಿಂದ ಜನ ಬೇಸತ್ತುಹೋಗಿದ್ದಾರೆ. ಬಿಜೆಪಿ ದುರಾಡಳಿತವು ನಾಗರಿಕರಿಗೆ ಬೇಸರ ಮೂಡಿಸಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದಾಗಿ ಬಯಸುತ್ತಿದ್ದಾರೆ. ಹಾಗಾಗಿ ನಾವು ಗೆಲ್ಲುವುದು ನಿಶ್ಚಿತ” ಎಂದು ಹೇಳಿದರು. ಇನ್ನು ಲೋಕಸಭೆ ಚುನಾವಣೆ ಕುರಿತು ಮಾತನಾಡಿದ ಅವರು, “ಪ್ರತಿಪಕ್ಷಗಳು ಒಗ್ಗೂಡಿ ಮುಂಬರುವ ಲೋಕಸಭೆ ಚುನಾವಣೆ ಎದುರಿಸಲಿವೆ. ಈ ಬಾರಿ ಬಿಜೆಪಿಯು ಅಧಿಕಾರದಿಂದ ಮುಕ್ತವಾಗುವುದು ನಿಶ್ಚಿತ” ಎಂದರು.
ಇದನ್ನೂ ಓದಿ: M B Patil: ನಾನೂ ಸಿಎಂ ಆಗಲು ಸಮರ್ಥ, ಹೈಕಮಾಂಡ್ ಒಪ್ಪಿದರೆ ಆಗುವೆ; ಮನದಾಸೆ ಬಿಚ್ಚಿಟ್ಟ ಎಂ.ಬಿ.ಪಾಟೀಲ್