Site icon Vistara News

Electricity Bill: ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಕೂಡಲೇ ವಿದ್ಯುತ್‌ ದರ ತಗ್ಗಿಸಿ; ಸಿಎಂಗೆ ತನ್ವೀರ್‌ ಸೇಠ್‌ ಪತ್ರ

Tanveer Sait writes to CM Siddaramaiah

ಮೈಸೂರು: ಈಗ ರಾಜ್ಯಾದ್ಯಂತ ಜನರು ವಿದ್ಯುತ್‌ ಶಾಕ್‌ಗೆ ಒಳಗಾಗಿದ್ದಾರೆ! ಅಂದರೆ ವಿದ್ಯುತ್‌ ದರ (Electricity Bill) ಹೆಚ್ಚಳದ ಆಘಾತದಲ್ಲಿದ್ದಾರೆ. ಅಲ್ಲದೆ, ಇದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಬಹುತೇಕ ಸಾರ್ವಜನಿಕರು ಜನರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷದಲ್ಲಿಯೇ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಶಾಸಕ ತನ್ವೀರ್‌ ಸೇಠ್‌ (Tanveer Sait) ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಎಂದು ಪ್ರಶ್ನೆ ಮಾಡಿರುವ ಅವರು, ಕೂಡಲೇ ವಿದ್ಯುತ್‌ ದರ ಏರಿಕೆ ನಿರ್ಧಾರದ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಎರಡು ಪುಟಗಳ ಪತ್ರ ಬರೆದಿರುವ ತನ್ವೀರ್‌ ಸೇಠ್‌, ವಿದ್ಯುತ್ ದರ ಏರಿಕೆ ಮರು ಪರಿಶೀಲನೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಜಯಗಳಿಸಿದೆ. ಜನರು ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈ ಹಿಂದೆ ಬೆಲೆ ಏರಿಕೆಯಿಂದ ಬೇಸತ್ತಿದ್ದರು. ಅಷ್ಟರ ಮಧ್ಯೆ ಈಗ ವಿದ್ಯುತ್‌ ದರ ಏರಿಕೆಯಾಗಿರುವುದು ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಅಲ್ಲದೆ, ಸರ್ಕಾರದ ಮೇಲೂ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಅಲ್ಲದೆ, ಈಗ ಗೃಹ ಜ್ಯೋತಿಯಿಂದ 200 ಯುನಿಟ್‌ ಉಚಿತ ವಿದ್ಯುತ್‌ ಘೋಷಿಸಿಕೊಂಡಿದ್ದರೂ, ಇನ್ನೊಂದು ಕಡೆ ಕಿತ್ತುಕೊಂಡಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮರು ಪರಿಶೀಲನೆ ನಡೆಸಿ ಎಂದು ಕೋರಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ತನ್ವೀರ್‌ ಸೇಠ್‌ ಬರೆದಿರುವ ಪತ್ರ

ಮನವಿ ಪತ್ರದಲ್ಲೇನಿದೆ?

2003ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆಲವು ಜನಪರ ಘೋಷಣೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಜನಪರ ಘೋಷಣೆಗೆ ಪೂರಕವಾಗಿ ಸ್ಪಂದಿಸಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿಗಳನ್ನು ಸರ್ಕಾರ ರಚನೆಯಾದ ದಿನವೇ ಅನುಷ್ಠಾನಗೊಳಿಸಲು ಸೂಕ್ತ ಆದೇಶವನ್ನು ಹೊರಡಿಸಲಾಗಿದೆ.

ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವುದೂ ಒಂದು. ಆದರೆ ಈ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ರಾಜ್ಯದ ಎಲ್ಲ ವಿದ್ಯುತ್‌ ನಿಗಮಗಳಲ್ಲಿ ಏಪ್ರಿಲ್ 2023ರಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್‌ ದರವನ್ನು ಹೆಚ್ಚಿಸಲಾಗಿದೆ. ಇದು ಈಗಾಗಲೇ ಹಿಂದಿನ ಸರ್ಕಾರದಲ್ಲಿ ಹೆಚ್ಚಾಗಿದ್ದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯುನಿಟ್‌ ಉಚಿತ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ವಿದ್ಯುತ್ ಬೆಲೆ ಏರಿಸಲು ನಿಗಮಗಳು 30.11.2022ರಲ್ಲಿ ಮಂಡಳಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಬೆಲೆ ಏರಿಕೆ ಆದೇಶವನ್ನು ಮೇ 2023ಕ್ಕೆ ಹೊರಡಿಸಿದ್ದು, ಏಪ್ರಿಲ್‌ 2023 ರಿಂದ ಪೂರ್ವಾನ್ವಯವಾಗುವಂತೆ ನೀಡಲಾಗಿದೆ.

ಇದನ್ನೂ ಓದಿ: Lakshmi Hebbalkar: ಇಲಾಖೆಯಲ್ಲಿ ಚನ್ನರಾಜ್‌ ಮೂಗು ತೂರಿಸಿದರೆ ಚೆನ್ನಾಗಿರಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸುರ್ಜೆವಾಲ ವಾರ್ನಿಂಗ್‌!

ಆದರೆ ಜನ ಸಾಮಾನ್ಯರು ಬೆಲೆಯನ್ನು ಪ್ರಸ್ತುತ ಸರ್ಕಾರ ಹೆಚ್ಚಿಸಿರುವುದಾಗಿ ತಿಳಿದುಕೊಂಡಿದ್ದಾರೆ. ಇದರಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಮರು ಪರಿಶೀಲಿಸಿ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಜಾರಿಗೊಳಿಸಲು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂದು ತನ್ವೀರ್ ಸೇಠ್ ಪತ್ರದಲ್ಲಿ ಬರೆದಿದ್ದಾರೆ.

Exit mobile version